
ಅದಿಲ್ ಮತ್ತು ಆತನ ತಾಯಿಯ ರೋದನ.
Pahalgam Terror Attack | ಉಗ್ರರೊಂದಿಗೆ ಹೋರಾಡಿ ಪ್ರವಾಸಿಗರನ್ನು ರಕ್ಷಿಸುತ್ತಲೇ ಗುಂಡಿಗೆ ಬಲಿಯಾದ ಸೈಯದ್ ಆದಿಲ್
ಆದಿಲ್ ತಮ್ಮ ವಯಸ್ಸಾದ ಪೋಷಕರು, ಪತ್ನಿ ಮತ್ತು ಮಕ್ಕಳಿಗೆ ಏಕೈಕ ಆಧಾರವಾಗಿದ್ದರು. ಕುದುರೆ ಸವಾರಿ ಸೇವೆ ನೀಡುವ ಮೂಲಕ ದಿನಕ್ಕೆ 300ರಿಂದ 400 ರೂಪಾಯಿ ಸಂಪಾದಿಸಿ ಕುಟುಂಬವನ್ನು ಸಲಹುತ್ತಿದ್ದರು. ಹೀಗಾಗಿ ಅವರ ಸಾವು ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ (ಏಪ್ರಿಲ್ 22) ನಡೆದ ಭಯೋತ್ಪಾದಕರ ಕೃತ್ಯದಲ್ಲಿ ಸ್ಥಳೀಯ ಕುದುರೆ ಸವಾರ ಸೈಯದ್ ಆದಿಲ್ ಹುಸೈನ್ ಶಾ (28) ಎಂಬುವವರೂ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಪ್ರವಾಸಿಗರನ್ನು ರಕ್ಷಿಸಲು ಭಯೋತ್ಪಾದಕನೊಂದಿಗೆ ಹೋರಾಡಿದ ಆದಿಲ್, ಉಗ್ರನಿಂದ ಗನ್ ಕಿತ್ತುಕೊಳ್ಳಲು ಯತ್ನಿಸಿದಾಗ ಗುಂಡೇಟು ತಿಂದು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಮಂದಿ ಬಲಿಯಾಗಿದ್ದಾರೆ.
ಆದಿಲ್ ಹಲವು ವರ್ಷಗಳಿಂದ ಪಹಲ್ಗಾಮ್‌ನಲ್ಲಿ ಕುದುರೆ ಸವಾರಿ ಮೂಲಕ ಪ್ರವಾಸಿಗರಿಗೆ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ಆದಿಲ್ ತಮ್ಮ ಕುದುರೆಯ ಮೇಲೆ ಪ್ರವಾಸಿಗರನ್ನು ಬೈಸರನ್ ಕಣಿವೆಗೆ ಕರೆದೊಯ್ಯುತ್ತಿದ್ದಾಗ, ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದರು. ಉಗ್ರನೊಬ್ಬ ಆದಿಲ್‌ರ ಕುದುರೆಯ ಮೇಲಿದ್ದ ಪ್ರವಾಸಿಗನಿಗೆ ಗುರಿಯಿಟ್ಟಾಗ , ಆದಿಲ್ ಧೈರ್ಯದಿಂದ ಆತನ ವಿರುದ್ಧ ಹೋರಾಡಿ, ಗನ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಗುಂಡು ಆದಿಲ್ಗೆ ತಾಗಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆದಿಲ್ ತಮ್ಮ ವಯಸ್ಸಾದ ಪೋಷಕರು, ಪತ್ನಿ ಮತ್ತು ಮಕ್ಕಳಿಗೆ ಏಕೈಕ ಆಧಾರವಾಗಿದ್ದರು. ಕುದುರೆ ಸವಾರಿ ಸೇವೆ ನೀಡುವ ಮೂಲಕ ದಿನಕ್ಕೆ 300ರಿಂದ 400 ರೂಪಾಯಿ ಸಂಪಾದಿಸಿ ಕುಟುಂಬವನ್ನು ಸಲಹುತ್ತಿದ್ದ. ಹೀಗಾಗಿ ಅವರ ಸಾವು ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಆದಿಲ್ ಅವರ ತಾಯಿ ಬೇಬಿ ಜಾನ್ ಮಾತನಾಡಿ, “ನಮ್ಮ ಕುಟುಂಬದ ಏಕೈಕ ಆಧಾರ ಕಳೆದುಕೊಂಡೆವು. ಈಗ ಯಾರೂ ಸಹಾಯಕ್ಕಿಲ್ಲ,” ಎಂದು ಕಣ್ಣೀರು ಸುರಿಸಿದ್ದಾರೆ. ಅಂದ ಹಾಗೆ ಆದಿಲ್‌ರ ಪುಟ್ಟ ಮಗುವೊಂದು ಇತ್ತೀಚೆಗಷ್ಟೇ ಮೃತಪಟ್ಟಿತ್ತು, ಇದೀಗ ಆ ಕುಟುಂಬದಲ್ಲಿ ಎರಡನೇ ಸಾವಾಗಿದೆ.
ಆದಿಲ್‌ರ ಧೈರ್ಯಕ್ಕೆ ಸ್ಥಳೀಯರು ಮತ್ತು ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದಿಲ್‌ರ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಸಹಾಯದ ನಿರೀಕ್ಷೆಯಿದೆ.
ಉಗ್ರರ ರೇಖಾಚಿತ್ರ ಬಿಡುಗಡೆ
ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಾಲ್ವರು ಭಯೋತ್ಪಾದಕರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರ ಬಂಧನಕ್ಕೆ ಬಹುಮಾನ ಘೋಷಿಸಿದ್ದಾರೆ. ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಂಡಗಳು ದಟ್ಟ ಕಾಡುಗಳಲ್ಲಿ ಫೋಲಿಯೇಜ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರೊಂದಿಗೆ ತುರ್ತು ಸಭೆ ನಡೆಸಿ, ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ದಾಳಿಯನ್ನು ಜಾಗತಿಕ ನಾಯಕರು ಖಂಡಿಸಿದ್ದು, ಕಾಶ್ಮೀರದಲ್ಲಿ ಬುಧವಾರ ಬಂದ್ ಆಚರಿಸಲಾಗಿದೆ. .