ಬಿಜೆಡಿ-ಬಿಜೆಪಿ ಮೈತ್ರಿ ತೂಗುಯ್ಯಾಲೆಯಲ್ಲಿ
x

ಬಿಜೆಡಿ-ಬಿಜೆಪಿ ಮೈತ್ರಿ ತೂಗುಯ್ಯಾಲೆಯಲ್ಲಿ


ಬಿಜೆಡಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ʻವದಂತಿಗಳುʼ ಮತ್ತು ʻಸುಳ್ಳುಗಳುʼ ರಾಜಕೀಯದ ಕೆಟ್ಟ ಅಂಶ ಎಂದು ಹೇಳಿಕೆ ನೀಡಿದ ನಂತರ, ಬಿಜೆಪಿ ವರಿಷ್ಠರು ರಾಜ್ಯ ಘಟಕದ ನಾಯಕರು ಮತ್ತು ಒಡಿಶಾದ ಚುನಾವಣಾ ಉಸ್ತುವಾರಿಗಳನ್ನು ಚರ್ಚೆಗೆ ದೆಹಲಿಗೆ ಕರೆಸಿಕೊಂಡಿದ್ದಾರೆ.

ಒಡಿಶಾ ಬಿಜೆಪಿ ಚುನಾವಣಾ ಉಸ್ತುವಾರಿ ವಿಜಯಪಾಲ್ ಸಿಂಗ್ ತೋಮರ್ ಮತ್ತು ರಾಜ್ಯಾ ಧ್ಯಕ್ಷ ಮನಮೋಹನ್ ಸಮಾಲ್ ಅವರು ʻಬಿಜೆಡಿಯೊಂದಿಗೆ ಮೈತ್ರಿ ಕುರಿತು ಯಾವುದೇ ಮಾತುಕತೆ ಇಲ್ಲ. ಬಿಜೆಪಿ 147 ವಿಧಾನಸಭೆ ಮತ್ತು 21 ಲೋಕಸಭೆ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪಟ್ನಾಯಕ್ ಅವರು ಶನಿವಾರ ಇನ್‌ಸ್ಟಾಗ್ರಾಂ ವೀಡಿಯೊದಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಬಿಜೆಪಿ ನಾಯಕರಿಂದ ವ್ಯತಿರಿಕ್ತ ಹೇಳಿಕೆ: ಮೈತ್ರಿ ಕುರಿತು ಬಿಜೆಡಿ ನಾಯಕರು ಮತ್ತು ಬಿಜೆಪಿ ಕೇಂದ್ರ ನಾಯಕರ ನಡುವಿನ ಮಾತುಕತೆ ಬಗ್ಗೆ ನನಗೆ ತಿಳಿದಿಲ್ಲ ಎಂದು ತೋಮರ್ ಹೇಳಿದ್ದಾರೆ. ಆದರೆ, ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಮೈತ್ರಿ ಕುರಿತು ಚರ್ಚಿಸಲಾಗಿದೆ. ಆದರೆ ಯಾವುದೂ ಅಂತಿಮಗೊಂಡಿಲ್ಲ ಎಂದು ಬಿಜೆಪಿ ಸಂಸದ ಜುಯಲ್ ಓರಾಮ್ ಹೇಳಿದ್ದಾರೆ.

ಮೈತ್ರಿ ಮಾತುಕತೆಯನ್ನು ನಿರಾಕರಿಸಿರುವ ತೋಮರ್, ಒಡಿಶಾದಲ್ಲಿ ಬಿಜೆಪಿ ವಿಧಾನಸಭೆಯಲ್ಲಿ 80ಕ್ಕೂ ಅಧಿಕ ಮತ್ತು 16 ಲೋಕಸಭೆ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಹೇಳಿದ್ದರು. ಸಮಲ್ ಇಂಥದ್ದೇ ಪ್ರತಿಕ್ರಿಯೆ ಕೊಟ್ಟಿದ್ದರು. ಬಿಜೆಪಿಯ ಒಡಿಶಾ ಚುನಾವಣಾ ಉಪ ಉಸ್ತುವಾರಿ ಲತಾ ಉಸೇಂಡಿ ಕೂಡ ಮೈತ್ರಿ ಸಾಧ್ಯತೆಯನ್ನು ತಿರಸ್ಕರಿಸಿದ್ದಾರೆ.

ದಿಲ್ಲಿಗೆ ತೆರಳಿದ ಬಿಜೆಪಿ ರಾಜ್ಯ ನಾಯಕರು: ಸಮಲ್, ಪ್ರಧಾನ ಕಾರ್ಯದರ್ಶಿ ಮಾನಸ್ ಮೊಹಂತಿ, ತೋಮರ್ ಮತ್ತು ಉಸೇಂಡಿ ಸೇರಿದಂತೆ ಮುಖಂಡರು ಭಾನುವಾರ ನವದೆಹಲಿಗೆ ತೆರಳಿದ್ದಾರೆ. ಮಾರ್ಚ್ 5 ರಂದು ಪ್ರಧಾನಿ ನರೇಂದ್ರ ಮೋದಿ ಒಡಿಶಾಗೆ ಭೇಟಿ ನೀಡಿ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಹೊಗಳಿದಾಗಿನಿಂದ ಮೈತ್ರಿ ಕುರಿತು ಚರ್ಚೆ ನಡೆಯುತ್ತಿದೆ.

ಪಟ್ನಾಯಕ್ ನಿರ್ಧಾರಕ್ಕೆ ಬದ್ಧ: ಬಿಜೆಡಿ ನಾಯಕ ಮತ್ತು ಶಾಸಕ ನೃಶಿಂಗ ಸಾಹು ಅವರು ಮೈತ್ರಿ ಕುರಿತು ಚರ್ಚೆ ನಡೆಯುತ್ತಿದ್ದು, ಪಕ್ಷವು ಪಟ್ನಾಯಕ್ ಅವರ ನಿರ್ಧಾರಕ್ಕೆ ಬದ್ಧವಾಗಿರುತ್ತದೆ ಎಂದು ಹೇಳಿದ್ದರು. ಪಟ್ನಾಯಕ್ ಅವರ ಆಪ್ತ ವಿ.ಕೆ.ಪಾಂಡಿಯನ್ ಮತ್ತು ಸಂಘಟನಾ ಕಾರ್ಯದರ್ಶಿ ಪ್ರಣಬ್ ಪ್ರಕಾಶ್ ದಾಸ್ ದಿಲ್ಲಿಯಲ್ಲಿ ಬಿಜೆಪಿಯ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರೂ, ಮೌನವಾಗಿರುವುದು ಮೈತ್ರಿ ಬಗ್ಗೆ ನಿಗೂಢತೆ ಹೆಚ್ಚಿಸಿದೆ.

Read More
Next Story