ಮಣಿಪುರ ಸಿಎಂ ಭದ್ರತಾ ಪಡೆ ಮೇಲೆ ದಾಳಿ
x

ಮಣಿಪುರ ಸಿಎಂ ಭದ್ರತಾ ಪಡೆ ಮೇಲೆ ದಾಳಿ

ಶಂಕಿತ ಉಗ್ರರ ದಾಳಿಯಲ್ಲಿ ವಾಹನ ಚಾಲಕರೊಬ್ಬರು ಗಾಯಗೊಂಡಿದ್ದಾರೆ.


ಇಂಫಾಲ, ಜೂನ್ 10- ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಮುಂಗಡ ಭದ್ರತಾ ಬೆಂಗಾವಲು ಪಡೆ ಮೇಲೆ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಶಂಕಿತ ಉಗ್ರರು ದಾಳಿ ನಡೆಸಿದ್ದು, ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಾವಲು ಪಡೆ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 53 ರ ಕೋಟ್ಲೆನ್ ಗ್ರಾಮದ ಬಳಿ ಬೆಳಗ್ಗೆ 10.30 ರ ಸುಮಾರಿಗೆ ದಾಳಿಗೆ ಒಳಗಾಯಿತು ಎಂದು ಹೇಳಿದರು. ಭದ್ರತಾ ಪಡೆಗಳ ವಾಹನಗಳ ಗುಂಡಿನ ದಾಳಿ ನಡೆದಿದ್ದು, ಅವರು ಪ್ರತಿದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಾವಲು ವಾಹನದ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಇಂಫಾಲ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ʻಭದ್ರತಾ ಪಡೆಗಳು ರಾಜಧಾನಿಯಿಂದ ಸುಮಾರು 36 ಕಿಮೀ ದೂರದಲ್ಲಿರುವ ದಾಳಿ ಸ್ಥಳವನ್ನು ತಲುಪಿವೆ. ಶೋಧ ಕಾರ್ಯ ಆರಂಭಿಸಿವೆ. ದೆಹಲಿಯಿಂದ ಇಂಫಾಲ್‌ಗೆ ಬಂದ ಬಳಿಕ ಸಿಎಂ ಬಿರೇನ್ ಸಿಂಗ್, ಜಿರಿಬಾಮ್‌ಗೆ ಭೇಟಿ ನೀಡಲು ಯೋಜಿಸಿದ್ದರು,ʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನಾಂಗೀಯ ಕಲಹ ಪೀಡಿತ ರಾಜ್ಯದಲ್ಲಿ ಶನಿವಾರ ಮತ್ತೆ ಹಿಂಸಾಚಾರ ಮರುಕಳಿಸಿದೆ. ಜಿರಿಬಾಮ್‌ನಲ್ಲಿ ಎರಡು ಪೊಲೀಸ್ ಹೊರಠಾಣೆಗಳು, ಅರಣ್ಯ ಕಚೇರಿ ಮತ್ತು ಕನಿಷ್ಠ 70 ಮನೆಗಳನ್ನು ಶಂಕಿತರು ಸುಟ್ಟು ಹಾಕಿದ್ದಾರೆ.

Read More
Next Story