
ಟಿ 20 ತಂಡದ ನಾಯಕ ಸೂರ್ಯಕುಮಾರ್ ಯಾದವ್?
ಸೂರ್ಯಕುಮಾರ್ ಯಾದವ್ ದೇಶದ ಅಗ್ರಮಾನ್ಯ ಟಿ20 ಬ್ಯಾಟರ್ ಆಗಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾಯಕರಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಭಾರತ ಟಿ20 ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಸೂರ್ಯಕುಮಾರ್ ಯಾದವ್ ಅಥವಾ ಹಾರ್ದಿಕ್ ಪಾಂಡ್ಯ ಅವರಲ್ಲಿ ಯಾರನ್ನು ನೇಮಕ ಮಾಡಬೇಕು ಎಂದು ಸಂದಿಗ್ಧದಲ್ಲಿದೆ.
ರೋಹಿತ್ ಶರ್ಮಾ ವೆಸ್ಟ್ ಇಂಡೀಸ್‌ನಲ್ಲಿ ವಿಶ್ವಕಪ್ ಗೆದ್ದ ನಂತರ ಅಂತಾರಾಷ್ಟ್ರೀಯ ಟಿ20 ಮಾದರಿಯಿಂದ ನಿವೃತ್ತಿ ಘೋಷಿಸಿದರು. ಪಾಂಡ್ಯ ಭಾರತ ತಂಡದ ಉಪನಾಯಕರಾಗಿದ್ದರು. ಆದ್ದರಿಂದ ನಾಯಕನ ಸ್ಥಾನಕ್ಕೆ ಮುಂಚೂಣಿ ಯಲ್ಲಿದ್ದರು. ಆದರೆ, ಅವರ ಫಿಟ್‌ನೆಸ್ ಸಮಸ್ಯೆಯಿಂದಾಗಿ ಕ್ರಿಕೆಟ್ ಮಂಡಳಿ ಮತ್ತು ಆಯ್ಕೆ ಸಮಿತಿ ಭಿನ್ನಾಭಿಪ್ರಾಯ ಹೊಂದಿವೆ.
ಪಾಂಡ್ಯ ನಿಸ್ಸಂದೇಹವಾಗಿ ದೇಶದ ಅಗ್ರ ವೇಗದ ಬೌಲರ್ ಮತ್ತು ಆಲ್‌ರೌಂಡರ್. ಇತ್ತೀಚಿನ ವಿಶ್ವಕಪ್ ವಿಜಯದಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಅವರನ್ನು ಶಾಶ್ವತ ಟಿ 20 ನಾಯಕನನ್ನಾಗಿ ಮಾಡುವ ಪರ ಎಲ್ಲರೂ ಇಲ್ಲ. 8 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅನೇಕ ಬಾರಿ ಗಾಯಗೊಂಡಿದ್ದಾರೆ. ಹೀಗಾಗಿ, ಅವರು ಟೆಸ್ಟ್ ಕ್ರಿಕೆಟ್‌ನಿಂದ ದೂರವಿರಲು ನಿರ್ಧರಿಸಿದ್ದಾರೆ.
ಯಾದವ್ ಉತ್ತಮ ಆಯ್ಕೆ?: ಸೂರ್ಯಕುಮಾರ್ ಯಾದವ್ ರಾಷ್ಟ್ರೀಯ ತಂಡದ ನಾಯಕತ್ವಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಅವರು ದೇಶದ ಅಗ್ರ ಟಿ 20 ಬ್ಯಾಟರ್. ಕಳೆದ ವರ್ಷ ವಿಶ್ವಕಪ್ ನಂತರ ಆಸ್ಟ್ರೇಲಿಯ ವಿರುದ್ಧದ ದೇಶದಲ್ಲಿ ನಡೆದ ಸರಣಿಯಲ್ಲಿ ಮತ್ತು ಆನಂತರ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ನಾಯಕರಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅವರ ನಾಯಕತ್ವ ಶೈಲಿಯನ್ನು ಆಟಗಾರರು ಇಷ್ಟಪಡುತ್ತಾರೆ ಎಂಬ ಹಿಮ್ಮಾಹಿತಿ ಮಂಡಳಿಗೆ ಬಂದಿದೆ.
ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ನೂತನ ನಾಯಕನ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವರದಿಯಾಗಿದೆ. ಗಂಭೀರ್ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದಾಗ, ಇಬ್ಬರೂ ಒಟ್ಟಿಗೆ ಆಡಿದ್ದರು.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ವಾರ ಗಂಭೀರ್ ಅವರನ್ನು ಭೇಟಿ ಮಾಡಲಿದೆ. ಆಗ ಅವರು ತಮ್ಮ ಆಯ್ಕೆ ಯಾರು ಎಂಬುದನ್ನು ತಿಳಿಸುವ ಸಾಧ್ಯತೆಯಿದೆ.