
'ಆಪರೇಷನ್ ಸಿಂದೂರ್' ಹೇಳಿಕೆ: ಸೂರ್ಯಕುಮಾರ್ ಯಾದವ್‌ಗೆ ಐಸಿಸಿ ದಂಡ
ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಬೆಂಬಲ ವ್ಯಕ್ತಪಡಿಸಲು, ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದಾಗಿನಿಂದ ಉಭಯ ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ.
ಏಷ್ಯಾ ಕಪ್ 2025ರ ಫೈನಲ್‌ಗೂ ಮುನ್ನ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಂದ್ಯದ ಶುಲ್ಕದ ಶೇ. 30ರಷ್ಟು ದಂಡ ವಿಧಿಸಿದೆ. 'ಆಪರೇಷನ್ ಸಿಂದೂರ್' ಮತ್ತು ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಕುರಿತು ರಾಜಕೀಯ ಸ್ವರೂಪದ ಹೇಳಿಕೆ ನೀಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 14ರಂದು ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದ ನಂತರ, ಸೂರ್ಯಕುಮಾರ್ ಯಾದವ್ ಅವರು, "ಈ ಗೆಲುವನ್ನು ನಾವು ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ಮತ್ತು 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದ ನಮ್ಮ ಸೇನಾ ಪಡೆಗಳಿಗೆ ಅರ್ಪಿಸುತ್ತೇವೆ" ಎಂದು ಹೇಳಿದ್ದರು. ಈ ಹೇಳಿಕೆಯು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಗೆ ಅಧಿಕೃತವಾಗಿ ದೂರು ನೀಡಿತ್ತು.
ತಪ್ಪು ಮಾಡಿಲ್ಲ ಎಂದಿದ್ದ ಸೂರ್ಯ
ಐಸಿಸಿ ಮ್ಯಾಚ್ ರೆಫರಿ ರಿಚೀ ರಿಚರ್ಡ್‌ಸನ್ ಅವರ ಮುಂದೆ ನಡೆದ ವಿಚಾರಣೆಯಲ್ಲಿ, ಸೂರ್ಯಕುಮಾರ್ ಯಾದವ್ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದರು. ಆದಾಗ್ಯೂ, ಅವರ ವಾದವನ್ನು ತಿರಸ್ಕರಿಸಿದ ಐಸಿಸಿ, ದಂಡ ವಿಧಿಸಿದೆ. ಅಲ್ಲದೆ, ಪಂದ್ಯಾವಳಿಯ ಉಳಿದ ಭಾಗದಲ್ಲಿ ರಾಜಕೀಯವಾಗಿ ಅರ್ಥೈಸಬಹುದಾದ ಯಾವುದೇ ಹೇಳಿಕೆಗಳನ್ನು ನೀಡದಂತೆ ಅವರಿಗೆ ಸೂಚಿಸಲಾಗಿದೆ.
ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಬೆಂಬಲ ವ್ಯಕ್ತಪಡಿಸಲು, ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದಾಗಿನಿಂದ ಉಭಯ ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಇದೀಗ, ಭಾನುವಾರ (ಸೆಪ್ಟೆಂಬರ್ 28) ನಡೆಯಲಿರುವ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರನೇ ಬಾರಿಗೆ ಮುಖಾಮುಖಿಯಾಗಲಿವೆ.