
ಬಹುಧರ್ಮೀಯ ಪ್ರಾರ್ಥನಾ ಮಂದಿರ ಪ್ರವೇಶಿಸಲು ನಿರಾಕರಿಸಿದ ಸೇನಾ ಅಧಿಕಾರಿಯ ವಜಾ ಎತ್ತಿಹಿಡಿದ ಸುಪ್ರೀಂ
ಈ ಶಿಸ್ತು ಕಾಪಾಡದ ಕಾರಣಕ್ಕಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು.
ಸೇನೆಯಲ್ಲಿ ಶಿಸ್ತು ಮತ್ತು ಒಗ್ಗಟ್ಟು ವೈಯಕ್ತಿಕ ಧಾರ್ಮಿಕ ನಂಬಿಕೆಗಳಿಗಿಂತ ಮಿಗಿಲಾದದ್ದು ಎಂದು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ತನ್ನ ರೆಜಿಮೆಂಟ್‌ನ 'ಸರ್ವ ಧರ್ಮ ಸ್ಥಳ'ದ (ಎಲ್ಲಾ ಧರ್ಮಗಳ ಪ್ರಾರ್ಥನಾ ಮಂದಿರ) ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ್ದ ಕ್ರಿಶ್ಚಿಯನ್ ಸೇನಾ ಅಧಿಕಾರಿಯೊಬ್ಬರ ವಜಾ ಆದೇಶವನ್ನು ಎತ್ತಿಹಿಡಿದಿದೆ. ಮಂಗಳವಾರ (ನವೆಂಬರ್ 25) ನಡೆದ ವಿಚಾರಣೆಯಲ್ಲಿ, ನ್ಯಾಯಾಲಯವು ಮಾಜಿ ಅಧಿಕಾರಿಯ ವರ್ತನೆಯನ್ನು ಕಟುವಾಗಿ ಟೀಕಿಸಿದ್ದು, ಅವರನ್ನು "ಭಾರತೀಯ ಸೇನೆಗೆ ಅನರ್ಹ" (Misfit) ಎಂದು ಬಣ್ಣಿಸಿದೆ.
ಸ್ಯಾಮುಯೆಲ್ ಕಮಲೇಶನ್ ಎಂಬುವವರು 2017ರಲ್ಲಿ 3ನೇ ಕ್ಯಾವಲ್ರಿ ರೆಜಿಮೆಂಟ್‌ನಲ್ಲಿ ಲೆಫ್ಟಿನೆಂಟ್ ಆಗಿ ಸೇವೆಗೆ ಸೇರಿದ್ದರು. ಸಿಖ್, ಜಾಟ್ ಮತ್ತು ರಜಪೂತ ಸ್ಕ್ವಾಡ್ರನ್‌ಗಳನ್ನು ಒಳಗೊಂಡಿದ್ದ ಈ ರೆಜಿಮೆಂಟ್‌ನಲ್ಲಿ, ಕಮಲೇಶನ್ ಅವರು ಸಿಖ್ ಸಿಬ್ಬಂದಿಯನ್ನು ಒಳಗೊಂಡ ಸ್ಕ್ವಾಡ್ರನ್ 'ಬಿ'ಯ ಟ್ರೂಪ್ ಲೀಡರ್ ಆಗಿದ್ದರು. 2021ರಲ್ಲಿ, ರೆಜಿಮೆಂಟ್‌ನ ಆವರಣದಲ್ಲಿದ್ದ ಗುರುದ್ವಾರ ಮತ್ತು ದೇವಸ್ಥಾನವನ್ನು ಒಳಗೊಂಡ 'ಸರ್ವ ಧರ್ಮ ಸ್ಥಳ'ವನ್ನು ಪ್ರವೇಶಿಸಲು ಮೇಲಧಿಕಾರಿಗಳು ನೀಡಿದ ಸೂಚನೆಯನ್ನು ಅವರು ನಿರಾಕರಿಸಿದ್ದರು. ಅವರ ಧರ್ಮಗುರುಗಳೇ (ಪಾಸ್ಟರ್) 'ಹಾಗೆ ಮಾಡುವುದು ನಿಮ್ಮ ಧರ್ಮಕ್ಕೆ ವಿರುದ್ಧವಾಗುವುದಿಲ್ಲ' ಎಂದು ಸಲಹೆ ನೀಡಿದ್ದರೂ, ಕಮಲೇಶನ್ ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಈ ಶಿಸ್ತು ಕಾಪಾಡದ ಕಾರಣಕ್ಕಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿದಾರರ ವಾದವನ್ನು ತಳ್ಳಿಹಾಕಿತು. "ಸೈನಿಕರು ತಮ್ಮ ವೈಯಕ್ತಿಕ ಧಾರ್ಮಿಕ ವ್ಯಾಖ್ಯಾನಗಳನ್ನು ಸೇನೆಯ ಸಾಮೂಹಿಕ ಮೌಲ್ಯಗಳಿಗಿಂತ ಹೆಚ್ಚಾಗಿ ಪರಿಗಣಿಸುವಂತಿಲ್ಲ," ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಅಧಿಕಾರಿಯ ವರ್ತನೆಯನ್ನು "ಅಶಿಸ್ತು" ಎಂದು ಕರೆದ ಪೀಠ, "ಅವರು ಎಷ್ಟೇ ಉತ್ತಮ ಅಧಿಕಾರಿಯಾಗಿರಬಹುದು, ಆದರೆ ಅವರು ತಮ್ಮ 'ಧಾರ್ಮಿಕ ಅಹಂ' ಅನ್ನು ಶಿಸ್ತು, ಏಕತೆ ಮತ್ತು ಸಹವರ್ತಿ ಸೈನಿಕರ ಗೌರವಕ್ಕಿಂತ ಹೆಚ್ಚಾಗಿ ಪರಿಗಣಿಸಿದ್ದಾರೆ. ಇಂತಹ ಜಗಳಗಂಟ ಮನಸ್ಥಿತಿಯ ವ್ಯಕ್ತಿ ಸೇನೆಗೆ ಅರ್ಹರಲ್ಲ," ಎಂದು ಕಟುವಾಗಿ ನುಡಿಯಿತು.
ನೀವು ಸಿಖ್ ಸೈನಿಕರ ತುಕಡಿಯ ನಾಯಕರಾಗಿದ್ದೀರಿ. ನಿಮ್ಮ ಕೆಳಗಿನ ಸಿಬ್ಬಂದಿ ಗುರುದ್ವಾರದಲ್ಲಿದ್ದಾಗ, ನೀವು ಹೊರಗೆ ನಿಲ್ಲುವುದು ಅವರಿಗೆ ಮಾಡುವ ಅವಮಾನವಾಗಿದೆ. ನಿಮ್ಮ ನಿರಾಕರಣೆಯ ಧಾಟಿಯು ಸೈನಿಕರ ಮನೋಭಾವಕ್ಕೆ ನೋವುಂಟುಮಾಡುತ್ತದೆ," ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
"ನಿಮ್ಮ ಪಾಸ್ಟರ್ ಅವರೇ ನಿಮಗೆ ಸಲಹೆ ನೀಡಿದಾಗ, ನೀವು ಅದನ್ನು ಪಾಲಿಸಬೇಕಿತ್ತು. ಸಮವಸ್ತ್ರದಲ್ಲಿದ್ದಾಗ ಧರ್ಮದ ಬಗ್ಗೆ ನಿಮ್ಮದೇ ಆದ ಖಾಸಗಿ ವ್ಯಾಖ್ಯಾನಗಳನ್ನು ಹೊಂದಲು ಸಾಧ್ಯವಿಲ್ಲ," ಎಂದು ನ್ಯಾಯಮೂರ್ತಿ ಬಾಗ್ಚಿ ಅವರು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.
ಅರ್ಜಿದಾರರ ಪರ ವಕೀಲರು, ಸಂವಿಧಾನವು ಧಾರ್ಮಿಕ ಆಚರಣೆಗಳಿಂದ ದೂರ ಉಳಿಯುವ ಹಕ್ಕನ್ನು ನೀಡಿದೆ ಎಂದು ವಾದಿಸಿದರಾದರೂ, ನ್ಯಾಯಾಲಯವು ಅದನ್ನು ಒಪ್ಪಲಿಲ್ಲ. "ವೈಯಕ್ತಿಕ ನಂಬಿಕೆಗಳು ಇರಬಹುದು, ಆದರೆ ಇದು ನಿಮ್ಮ ಧರ್ಮದ ಅತ್ಯಗತ್ಯ ಭಾಗವಾಗಿರಲಿಲ್ಲ. ತುಕಡಿಯ ನಾಯಕರಾಗಿ ನೀವು ನಿಮ್ಮ ಸೈನಿಕರ ಸಾಮೂಹಿಕ ನಂಬಿಕೆಯನ್ನು ಗೌರವಿಸಬೇಕಾದದ್ದು ಕರ್ತವ್ಯ," ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿತು.

