ಡಿಜಿಟಲ್ ಅರೆಸ್ಟ್ ಹಗರಣ: ದೇಶಾದ್ಯಂತ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ; ಆರ್‌ಬಿಐಗೆ ನೋಟಿಸ್
x

ಡಿಜಿಟಲ್ ಅರೆಸ್ಟ್ ಹಗರಣ: ದೇಶಾದ್ಯಂತ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ; ಆರ್‌ಬಿಐಗೆ ನೋಟಿಸ್

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್​​ಮಾಲ್ಯ ಬಾಗ್ಚಿ ಅವರಿದ್ದ ಪೀಠವು, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.


Click the Play button to hear this message in audio format

ದೇಶಾದ್ಯಂತ ನಾಗರಿಕರನ್ನು ಬೆಚ್ಚಿಬೀಳಿಸಿರುವ 'ಡಿಜಿಟಲ್ ಅರೆಸ್ಟ್' ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಸಮಗ್ರವಾಗಿ ಅಖಿಲ ಭಾರತ ಮಟ್ಟದ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.1) ಮಹತ್ವದ ಆದೇಶ ನೀಡಿದೆ. ಇದೇ ವೇಳೆ, ಸೈಬರ್ ಅಪರಾಧಿಗಳು ಬಳಸುವ ಬ್ಯಾಂಕ್ ಖಾತೆಗಳನ್ನು ಗುರುತಿಸಿ ಅವುಗಳನ್ನು ಸ್ಥಗಿತಗೊಳಿಸಲುಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಏಕೆ ಬಳಸುತ್ತಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ರಾಜ್ಯಗಳಿಗೆ ಸಹಕಾರ ನೀಡಲು ಸೂಚನೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್​​ಮಾಲ್ಯ ಬಾಗ್ಚಿ ಅವರಿದ್ದ ಪೀಠವು, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಡಿಜಿಟಲ್ ಅರೆಸ್ಟ್ ಪ್ರಕರಣಗಳ ತನಿಖೆಗೆ ಸಿಬಿಐಗೆ ಅನುಮತಿ ಮತ್ತು ಸಹಕಾರ ನೀಡುವಂತೆ ನಿರ್ದೇಶನ ನೀಡಿದೆ.

ವಂಚನೆಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳು

1. ಆರ್‌ಬಿಐಗೆ ನೋಟಿಸ್: ಸೈಬರ್ ವಂಚನೆಗೆ ಬಳಸಲಾಗುವ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲು ಎಐ (AI) ಅಥವಾ ಮಷೀನ್ ಲರ್ನಿಂಗ್ (ML) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿರಲು ಕಾರಣವೇನು ಎಂದು ಕೇಳಿ ಆರ್‌ಬಿಐಗೆ ನೋಟಿಸ್ ನೀಡಲಾಗಿದೆ.

2. ಬ್ಯಾಂಕ್ ಅಧಿಕಾರಿಗಳ ಮೇಲೂ ತನಿಖೆ: ವಂಚಕರೊಂದಿಗೆ ಶಾಮೀಲಾಗಿ, ಅಕ್ರಮ ಹಣ ವರ್ಗಾವಣೆಗೆ ಬಳಸುವ 'ಮ್ಯೂಲ್ ಖಾತೆಗಳನ್ನು' ತೆರೆಯಲು ಸಹಾಯ ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಲಾಗಿದೆ.

3. ಇಂಟರ್‌ಪೋಲ್ ನೆರವು: ವಿದೇಶಿ ನೆಲದಿಂದ, ಮುಖ್ಯವಾಗಿ ತೆರಿಗೆ ಹಿತರಕ್ಷಣೆ ಇರುವ ದೇಶಗಳಿಂದ ಕಾರ್ಯಾಚರಣೆ ನಡೆಸುವ ಸೈಬರ್ ಅಪರಾಧಿಗಳನ್ನು ಪತ್ತೆಹಚ್ಚಲು 'ಇಂಟರ್‌ಪೋಲ್' ನೆರವು ಪಡೆಯುವಂತೆ ಸಿಬಿಐಗೆ ಸೂಚಿಸಲಾಗಿದೆ.

4. ಸಿಮ್ ಕಾರ್ಡ್‌ಗಳ ಮೇಲೆ ಕಣ್ಣು: ಒಬ್ಬ ಬಳಕೆದಾರರಿಗೆ ಅಥವಾ ಒಂದು ಸಂಸ್ಥೆಗೆ ಬಹುಸಂಖ್ಯೆಯ ಸಿಮ್ ಕಾರ್ಡ್‌ಗಳನ್ನು ನೀಡದಂತೆ ಟೆಲಿಕಾಂ ಇಲಾಖೆಗೆ ಕೋರ್ಟ್ ತಾಕೀತು ಮಾಡಿದೆ. ಹೆಚ್ಚುವರಿ ಸಿಮ್‌ಗಳು ಸೈಬರ್ ಅಪರಾಧಗಳಿಗೆ ಬಳಕೆಯಾಗುವ ಸಾಧ್ಯತೆಯಿದೆ ಎಂದು ಕೋರ್ಟ್ ಎಚ್ಚರಿಸಿದೆ.

5. ಐಟಿ ಸಂಸ್ಥೆಗಳ ಸಹಕಾರ: ಡಿಜಿಟಲ್ ಅರೆಸ್ಟ್ ಪ್ರಕರಣಗಳ ತನಿಖೆಯಲ್ಲಿ ಮಾಹಿತಿ ತಂತ್ರಜ್ಞಾನ ಮಧ್ಯವರ್ತಿಗಳು ಸಿಬಿಐಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಆದೇಶಿಸಲಾಗಿದೆ.

ಹಿನ್ನೆಲೆ ಏನು?

ಹರಿಯಾಣದ ವೃದ್ಧ ದಂಪತಿಯೊಬ್ಬರು ನೀಡಿದ ದೂರಿನ ಮೇರೆಗೆ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿತ್ತು. ಹೆಚ್ಚಾಗಿ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಅವರ ಕಷ್ಟದ ದುಡಿಮೆಯ ಹಣವನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಕಳೆದ ನವೆಂಬರ್ 3 ರಂದು ಅಭಿಪ್ರಾಯಪಟ್ಟಿದ್ದ ಕೋರ್ಟ್, ದೇಶದಲ್ಲಿ ಸುಮಾರು 3,000 ಕೋಟಿ ರೂ.ಗೂ ಅಧಿಕ ಹಣವನ್ನು ಜನರಿಂದ ಸುಲಿಗೆ ಮಾಡಲಾಗಿದೆ ಎಂದು ಆಘಾತ ವ್ಯಕ್ತಪಡಿಸಿತ್ತು.

ಏನಿದು ಡಿಜಿಟಲ್ ಅರೆಸ್ಟ್?

ಸೈಬರ್ ವಂಚಕರು ವಿಡಿಯೋ ಕರೆಯ ಮೂಲಕ ತಾವು ಸಿಬಿಐ, ನಾರ್ಕೋಟಿಕ್ಸ್ ವಿಭಾಗ ಅಥವಾ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಳ್ಳುತ್ತಾರೆ. ಬಳಿಕ ಸಂತ್ರಸ್ತರಿಗೆ "ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ" ಅಥವಾ "ಅಕ್ರಮ ಹಣ ವರ್ಗಾವಣೆಯಾಗಿದೆ" ಎಂದು ಬೆದರಿಸಿ, ಅವರನ್ನು ಆನ್‌ಲೈನ್ ಮೂಲಕವೇ 'ಗೃಹ ಬಂಧನ'ದಲ್ಲಿ ಇರಿಸುತ್ತಾರೆ. ಬಂಧನದ ಭೀತಿ ಒಡ್ಡಿ ಲಕ್ಷಾಂತರ ರೂಪಾಯಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ.

ಕೇಂದ್ರ ಗೃಹ ಸಚಿವಾಲಯ, ಹಣಕಾಸು ಸಚಿವಾಲಯ ಹಾಗೂ ಟೆಲಿಕಾಂ ಇಲಾಖೆಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ನ್ಯಾಯಾಲಯದ ಮುಂದೆ ಮಂಡಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠ ಸೂಚಿಸಿದೆ.

Read More
Next Story