
ಸುಪ್ರೀಂ ಕೋರ್ಟ್
Cash Haul Controversy: ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಸ್ತಿ ವಿವರ ಬಹಿರಂಗ
ಏಪ್ರಿಲ್ 1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ನ್ಯಾಯಮೂರ್ತಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ವರ್ಮಾ ಅವರ ನಿವಾಸದಲ್ಲಿ ಬೃಹತ್ ಪ್ರಮಾಣದಲ್ಲಿ ನೋಟಿನ ಕಂತೆಗಳು ಪತ್ತೆಯಾದ(Cash Haul Controversy) ಹಿನ್ನೆಲೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಮುಜುಗರಕ್ಕೆ ಒಳಗಾಗಿತ್ತು. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿಪಾಸ್ತಿಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ನ್ಯಾಯಾಂಗದ ಮೇಲಿನ ಜನರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಹೆಜ್ಜೆಯನ್ನಿಡಲಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ 1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ನ್ಯಾಯಮೂರ್ತಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಸಭೆಯಲ್ಲಿ, ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬಹಿರಂಗಪಡಿಸಲು ನಿರ್ಧರಿಸಿದ್ದಾರೆ. ಬಳಿಕ ಆ ವಿವರಗಳನ್ನು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ನ್ಯಾಯಮೂರ್ತಿಗಳ ಆಸ್ತಿ ಘೋಷಣೆಗಳನ್ನು ಪ್ರಕಟಿಸುವ ನಿರ್ದಿಷ್ಟ ವಿಧಾನಗಳನ್ನು ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ವರದಿ ತಿಳಿಸಿದೆ.
ವಿಶೇಷವೆಂದರೆ, ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಮೂರ್ತಿಗಳೂ ಈಗಾಗಲೇ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಆದರೆ, ಈ ವಿವರಗಳು ಸಾರ್ವಜನಿಕರಿಗೆ ಮಾತ್ರ ಲಭ್ಯವಿಲ್ಲ.
ದೆಹಲಿ ಹೈಕೋರ್ಟ್ ಜಡ್ಜ್ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಇತ್ತೀಚೆಗೆ ದೊಡ್ಡ ಮೊತ್ತದ ಕಂತೆ ಕಂತೆ ಹಣವು ಪತ್ತೆಯಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ, ಕೇಂದ್ರ ಕಾನೂನು ಸಚಿವಾಲಯವು ನ್ಯಾ.ವರ್ಮಾ ಅವರನ್ನು ವರ್ಗಾವಣೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಆದರೆ, ನ್ಯಾಯಮೂರ್ತಿ ವರ್ಮಾ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದು, ತಾವಾಗಲೀ, ತಮ್ಮ ಮನೆಯ ಸದಸ್ಯರಾಗಲೀ ಸ್ಟೋರ್ ರೂಮ್ ನಲ್ಲಿ ಯಾವುದೇ ಹಣವನ್ನು ಇರಿಸಿರಲಿಲ್ಲ ಎಂದು ವಾದಿಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆಯಾಗುವ ಸಾಧ್ಯತೆ ಕಂಡುಬಂದ ಕಾರಣ, ಈಗ ನ್ಯಾಯಮೂರ್ತಿಗಳು ತಮ್ಮ ಆಸ್ತಿವಿವರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.