ಕಾವಡ್‌ ಯಾತ್ರೆ ಮಾರ್ಗ ಆದೇಶ: ಸುಪ್ರೀಂ ಮಧ್ಯಂತರ ತಡೆ
x

ಕಾವಡ್‌ ಯಾತ್ರೆ ಮಾರ್ಗ ಆದೇಶ: ಸುಪ್ರೀಂ ಮಧ್ಯಂತರ ತಡೆ

ತಿನಿಸು ಮಾರುವ ಅಂಗಡಿಗಳು ಯಾವ ಆಹಾರ ಲಭ್ಯವಿದೆ ಎಂದು ಪ್ರದರ್ಶಿಸಬೇಕಾಗಬಹುದು. ಆದರೆ, ಮಾಲೀಕರು, ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸಲು ಒತ್ತಾಯಿಸಬಾರದು ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.


ಕಾವಡ್‌ ಯಾತ್ರಾ ಮಾರ್ಗದಲ್ಲಿರುವ ತಿನಿಸು ಅಂಗಡಿಗಳು ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 22) ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌.ವಿ.ಎನ್. ಭಟ್ಟಿ ಅವರ ಪೀಠವು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚಿಸಿದೆ.

ʻತಿನಿಸು ಅಂಗಡಿಗಳು ಯಾವ ಆಹಾರ ಲಭ್ಯವಿದೆ ಎಂದು ಪ್ರದರ್ಶಿಸಬೇಕಾಗಬಹುದು. ಆದರೆ, ಮಾಲೀಕರು, ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸಲು ಒತ್ತಾಯಿಸಬಾರದು. ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ನೀಡುವುದು ಸೂಕ್ತವೆಂದು ಪರಿಗಣಿಸುತ್ತೇವೆ,ʼ ಎಂದು ಪೀಠ ಹೇಳಿದೆ. ಶುಕ್ರವಾರ ಹೆಚ್ಚಿನ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ.

ರಾಜ್ಯ ಸರ್ಕಾರಗಳ ಪರವಾಗಿ ಯಾರೂ ಹಾಜರಿರಲಿಲ್ಲ.

ನಿರ್ದೇಶನವನ್ನು ಪ್ರಶ್ನಿಸಿ ಎನ್‌ಜಿಒ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ.

ಇಂತಹ ನಿರ್ದೇಶನಗಳು ಸಮುದಾಯಗಳ ನಡುವಿನ ವೈಷಮ್ಯವನ್ನು ಉಲ್ಬಣಗೊಳಿಸುತ್ತವೆ. ಉಭಯ ರಾಜ್ಯ ಸರ್ಕಾರಗಳು ಹೊರಡಿಸಿದ ಆದೇಶಗಳಿಗೆ ತಡೆ ನೀಡುವಂತೆ ಮೊಯಿತ್ರಾ ಅವರು ಮನವಿ ಸಲ್ಲಿಸಿದ್ದರು.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ತಿನಿಸು ಅಂಗಡಿಗಳ ಮಾಲೀಕರ ಹೆಸರನ್ನು ಪ್ರದರ್ಶಿಸುವಂತೆ ಸೂಚಿಸಿದ್ದವು. ಜೊತೆಗೆ, ಬಿಜೆಪಿ ಆಡಳಿತವಿರುವ ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಶನ್ ಕೂಡ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸುವಂತೆ ಸೂಚಿಸಿತ್ತು. ಉಲ್ಲಂಘಿಸಿದವರಿಗೆ ಮೊದಲ ಬಾರಿಗೆ 2,000 ರೂ. ದಂಡ ಮತ್ತು ಎರಡನೇ ಬಾರಿಗೆ 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಶನಿವಾರ ಹೇಳಿದ್ದರು.

ಉಜ್ಜಯಿನಿಯ ಮಹಾಕಾಲ್ ದೇವಾಲಯವು ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ. ಆಷಾಡದಲ್ಲಿ ಆರಂಭವಾಗುವ ಕವಾ ಡ್‌ ಯಾತ್ರೆಗೆ ಹಲವು ರಾಜ್ಯಗಳಲ್ಲಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರು ಹರಿದ್ವಾರದಲ್ಲಿ ಗಂಗಾ ನದಿಯಿಂದ ಪವಿತ್ರ ಜಲವನ್ನು ಸಂಗ್ರಹಿಸಿ, ಮನೆಗಳಿಗೆ ಕೊಂಡೊಯ್ಯುತ್ತಾರೆ.

Read More
Next Story