Sunita Williams: ಸುನೀತಾ ವಿಲಿಯಮ್ಸ್‌ ವಾಪಸಾಗುವ ಕ್ಷಣ ಸನಿಹ; ನಾಸಾ ಮತ್ತು ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್ ಉಡಾವಣೆ
x

Sunita Williams: ಸುನೀತಾ ವಿಲಿಯಮ್ಸ್‌ ವಾಪಸಾಗುವ ಕ್ಷಣ ಸನಿಹ; ನಾಸಾ ಮತ್ತು ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್ ಉಡಾವಣೆ

ಸುನಿತಾ ಅವರು ಕೆಲವೇ ದಿನಗಳಲ್ಲಿ ಅವರು ಸುರಕ್ಷಿತವಾಗಿ ಮರಳಲಿದ್ದಾರೆ ಎಂಬ ನಿರೀಕ್ಷೆಯಿಂದ ಅವರ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಸಂತೋಷದಿಂದ ಕಾಯುತ್ತಿದ್ದಾರೆ.


9 ತಿಂಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಕೊನೆಗೂ ಭೂಮಿಗೆ ಮರಳುವ ಕಾಲ ಸಮೀಪಿಸಿದೆ. ಹಲವು ಬಾರಿ ವಿಳಂಬವಾದ ನಂತರ, ಶುಕ್ರವಾರ ನಾಸಾ ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಹೊಸ ಸಿಬ್ಬಂದಿಯನ್ನು ಕಳುಹಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ಈ ನೌಕೆ ಐಎಸ್‌ಎಸ್ ತಲುಪಿದ ನಂತರ, ಅಲ್ಲಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಮರಳಿ ಕರೆತರಲಿದೆ.

ಕ್ರೂ-10 ಮಿಷನ್‌ನಡಿಯಲ್ಲಿ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತ ಫಾಲ್ಕನ್ 9 ರಾಕೆಟ್ ಶುಕ್ರವಾರ (ಭಾರತೀಯ ಕಾಲಮಾನ) ಬೆಳಿಗ್ಗೆ 4:33ಕ್ಕೆ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು. ಇದು ಒಂಬತ್ತು ತಿಂಗಳ ಸುದೀರ್ಘ ಐಎಸ್‌ಎಸ್ ವಾಸದ ನಂತರ ಮನೆಗೆ ಮರಳುವ ಸುನೀತಾ ಮತ್ತು ವಿಲ್ಮೋರ್ ಅವರ ಕನಸನ್ನು ಚಿಗುರಿಸಿದೆ. ಜೊತೆಗೆ, ಇಬ್ಬರು ಗಗನಯಾತ್ರಿಗಳೂ ಆದಷ್ಟು ಬೇಗ ಸುರಕ್ಷಿತವಾಗಿ ಮರಳಲಿದ್ದಾರೆ ಎಂಬ ನಿರೀಕ್ಷೆಯಿಂದ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನಿರಾಳತೆ ಒದಗಿಸಿದೆ.

ಈಗ ಉಡಾವಣೆಗೊಂಡಿರುವ ಡ್ರ್ಯಾಗನ್ ನೌಕೆಯಲ್ಲಿ ಅನ್ನೆ ಮೆಕ್ಲೈನ್, ನಿಕೋಲ್ ಅಯರ್ಸ್, ಜಾಕ್ಸಾ (ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೊರೇಷನ್ ಏಜೆನ್ಸಿ)ದ ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೊವ್ ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

ಕ್ರೂ-10 ಮಿಷನ್ ಸ್ಪೇಸ್‌ಎಕ್ಸ್‌ನ ಮಾನವ ಬಾಹ್ಯಾಕಾಶ ಸಾಗಣೆ ವ್ಯವಸ್ಥೆಯ ಅಡಿಯಲ್ಲಿ 10ನೇ ಬಾರಿಗೆ ಭೂಮಿಯಲ್ಲಿನ ಗಗನಯಾತ್ರಿಗಳನ್ನು ಐಎಸ್‌ಎಸ್‌ಗೂ ಮತ್ತು ಐಎಸ್‌ಎಸ್‌ನಲ್ಲಿರುವ ಸಿಬ್ಬಂದಿಯನ್ನು ಭೂಮಿಗೂ ರೊಟೇಷನ್ ಆಧಾರದಲ್ಲಿ ಕರೆದೊಯ್ಯುವ ಮತ್ತು ಕರೆತರುವ ಕೆಲಸವನ್ನು ಮಾಡುತ್ತಿದೆ. ಜೊತೆಗೆ, ಡೆಮೊ-2 ಪರೀಕ್ಷಾ ಹಾರಾಟ ಸೇರಿದಂತೆ ನಾಸಾದ ಕಮರ್ಷಿಯಲ್ ಕ್ರೂ ಪ್ರೋಗ್ರಾಂ ಮೂಲಕ ಐಎಸ್‌ಎಸ್ ನಿಲ್ದಾಣಕ್ಕೆ ಸಿಬ್ಬಂದಿಯನ್ನು 11ನೇ ಬಾರಿಗೆ ಒಯ್ಯುತ್ತಿದೆ. ಗುರುವಾರವೇ ಫಾಲ್ಕನ್ 9 ರಾಕೆಟ್ ಉಡಾವಣೆಯಾಗಬೇಕಿತ್ತು. ಆದರೆ, ಗ್ರೌಂಡ್ ಸಪೋರ್ಟ್ ಕ್ಲಾಂಪ್ ಆರ್ಮ್‌ನೊಂದಿಗೆ ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆ ಉಂಟಾದ ಕಾರಣ ಉಡಾವಣೆ ಮತ್ತಷ್ಟು ವಿಳಂಬವಾಯಿತು.

9 ತಿಂಗಳ ಸುದೀರ್ಘ ಐಎಸ್‌ಎಸ್ ವಾಸ್ತವ್ಯ

ನಾಸಾದ ಅನುಭವಿ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕಳೆದ ವರ್ಷ ಜೂನ್ ತಿಂಗಳಿಂದಲೂ ಐಎಸ್‌ಎಸ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಲ್ಲಿಗೆ ತೆರಳಿದ್ದ ಅವರು, 8 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಬೇಕಿತ್ತು. ಆದರೆ, ಬೋಯಿಂಗ್ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಇಬ್ಬರು ಗಗನಯಾತ್ರಿಗಳೂ ಅನಿವಾರ್ಯವಾಗಿ ಐಎಸ್‌ಎಸ್‌ನಲ್ಲೇ ಉಳಿಯಬೇಕಾಯಿತು. ಅವರನ್ನು ಕರೆತರಲು ಮಾಡಿದ ಹಲವು ಪ್ರಯತ್ನಗಳು ವಿಫಲವಾದವು. ಫೆಬ್ರವರಿಯಲ್ಲಿ ಅವರು ಮನೆಗೆ ಮರಳುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೂ, ಅದೂ ಸಹ ವಿಳಂಬವಾಯಿತು. ಈಗ ಕ್ರೂ-10 ಉಡಾವಣೆಯಾಗಿರುವ ಕಾರಣ, ಇನ್ನು ಕೆಲವೇ ದಿನಗಳಲ್ಲಿ ಸುನೀತಾ ಮತ್ತು ವಿಲ್ಮೋರ್ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.

ರಾಜಕೀಯ ವಾಗ್ಯುದ್ಧ

ಸುನೀತಾ ಮತ್ತು ವಿಲ್ಮೋರ್ ಅವರ ಐಎಸ್‌ಎಸ್ ವಾಸ್ತವ್ಯವು ಅಮೆರಿಕದಲ್ಲಿ ರಾಜಕೀಯ ವಾಗ್ಯುದ್ಧಕ್ಕೂ ಕಾರಣವಾಗಿತ್ತು. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್‌ಎಕ್ಸ್ ನೇತೃತ್ವ ವಹಿಸಿರುವ ಅವರ ಆಪ್ತ ಸಲಹೆಗಾರ ಎಲಾನ್ ಮಸ್ಕ್ ಅವರು, ಅಮೆರಿಕದ ಪ್ರಸ್ತುತ ಅಧ್ಯಕ್ಷ ಜೋ ಬೈಡನ್ ಅವರು ಉದ್ದೇಶಪೂರ್ವಕವಾಗಿ ಗಗನಯಾತ್ರಿಗಳನ್ನು ವಾಪಸ್ ಕರೆತಂದಿಲ್ಲ ಎಂದು ಆರೋಪಿಸಿದ್ದರು.

ಈ ಉಡಾವಣೆಯು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಭೂಮಿಗೆ ಮರಳುವ ದಾರಿ ಸುಗಮಗೊಳಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಅವರು ಸುರಕ್ಷಿತವಾಗಿ ಮರಳಲಿದ್ದಾರೆ ಎಂಬ ನಿರೀಕ್ಷೆಯಿಂದ ಅವರ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಸಂತೋಷದಿಂದ ಕಾಯುತ್ತಿದ್ದಾರೆ.

Read More
Next Story