ಸುನಿಲ್ ಛೆಟ್ರಿ ನಿವೃತ್ತಿ: ವಿದಾಯ ಹೇಳಲು ಒಗ್ಗೂಡಿದ ಜಗತ್ತು
ಕೋಲ್ಕತ್ತಾ- ಫುಟ್‌ಬಾಲ್ ನ ಜಾಗತಿಕ ಆಡಳಿತ ಮಂಡಳಿ ಫೀಫಾ, ಕ್ರೊಯೇಷಿಯಾದ ಶ್ರೇಷ್ಠ ಆಟಗಾರ ಲೂಕಾ ಮಾಡ್ರಿಕ್ ಹಾಗೂ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಒಗ್ಗೂಡಿ, ಭಾರತೀಯ ಫುಟ್ಬಾಲ್ ಐಕಾನ್ ಸುನಿಲ್ ಛೆಟ್ರಿ ಅವರಿಗೆ ವಿದಾಯವನ್ನು ನಿಜವಾಗಿಯೂ ಅಂತಾರಾಷ್ಟ್ರೀಯವಾಗಿಸಿದರು.
ಛೆಟ್ರಿ(39) 151 ಪಂದ್ಯಗಳಿಂದ 94 ಗೋಲು ಗಳಿಸಿದ್ದು, ಅಂತಾರಾಷ್ಟ್ರೀಯ ಫುಟ್ಬಾಲಿನ ನಾಲ್ಕನೇ ಅತಿ ಅಧಿಕ ಸ್ಕೋರರ್ ಆಗಿ ನಿವೃತ್ತರಾದರು. ವಿಶ್ವ ಫುಟ್‌ಬಾಲ್‌ನಲ್ಲಿ ತನ್ನ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿರುವ ದೇಶದ ಆಟಗಾರನೊಬ್ಬನ ನಂಬಲಾಗದ ಸಾಧನೆ ಇದಾಗಿದೆ. ನೀಲಿ ಜರ್ಸಿ ಧರಿಸಿ ಆಡಿದ ಅವರ ಅಂತಿಮ ಪಂದ್ಯದಲ್ಲಿ ಭಾರತವು 2026 ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತು.
ʻ19 ವರ್ಷಗಳ ಸೇವೆ ನಂತರ, ವಿದಾಯ, @chetrisunil11,ʼ ಎಂದು ಸಾಲ್ಟ್ ಲೇಕ್ ಸ್ಟೇಡಿಯಂನ ಜನಭರಿತ ಪಂದ್ಯದ ನಂತರ ಫಿಫಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ʻ94 ಅಂತಾರಾಷ್ಟ್ರೀಯ ಗೋಲುಗಳು. ರಾಷ್ಟ್ರದ ಭರವಸೆಯನ್ನು ಮುಂದಕ್ಕೆ ಒಯ್ದ ನಿಮಗೆ ಧನ್ಯವಾದ; ಏಷ್ಯನ್ ಫುಟ್ಬಾಲ್ ಐಕಾನ್, ಸುನಿಲ್ ಛೆಟ್ರಿ,ʼ ಎಂದು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (ಎಎಫ್‌ಸಿ) ಟ್ವೀಟ್ ಮಾಡಿದೆ
ಛೆಟ್ರಿ ಅವರ ಅದ್ಭುತ ವೃತ್ತಿಜೀವನವನ್ನು ಅಭಿನಂದಿಸಿದ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಎಕ್ಸ್ ನಲ್ಲಿ ಬರೆದಿದ್ದಾರೆ: ʻಗುರಿ ಸಾಧನೆ ಸುಲಭವಲ್ಲ. 94 ಅಂತಾರಾಷ್ಟ್ರೀಯ ಗೋಲುಗಳು! ನೀವು ಧ್ವಜವನ್ನು ಬಹಳ ಎತ್ತರಕ್ಕೆ ಏರಿಸಿದ್ದೀರಿ, ಸುನಿಲ್ ಛೆಟ್ರಿ. ಗಮನಾರ್ಹ ವೃತ್ತಿಜೀವನಕ್ಕೆ ಅಭಿನಂದನೆಗಳು!ʼ
ಪ್ರೀಮಿಯರ್ ಲೀಗ್ ಇಂಡಿಯಾ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೀಗೆ ಬರೆದಿದೆ: ʻಇಂದು ಪ್ರತಿಯೊಬ್ಬರೂ ಫುಟ್ಬಾಲ್ ಅಭಿಮಾನಿ. ಅವರ ಜಾಗವನ್ನು ತುಂಬುವುದು ಸಾಧ್ಯವಿಲ್ಲ. ಎಂದಿಗೂ ಸಾಧ್ಯವಿಲ್ಲ.ʼ
ಭಾರತ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕ್ವಿನ್ಹಾ ಅವರು ಛೆಟ್ರಿ ಅವರ ವೃತ್ತಿಜೀವನವನ್ನು ಶ್ಲಾಘಿಸಿದ್ದಾರೆ.ʻಸುನಿಲ್ ಛೆಟ್ರಿ ಅವರು ದಂತಕಥೆ ಆಗಿರುವುದು ಅವರು ದೇಶಕ್ಕಾಗಿ ಗಳಿಸಿದ ಗೋಲುಗಳು ಮತ್ತು ದೀರ್ಘಾವಧಿಯ ವೃತ್ತಿಜೀವನವಲ್ಲ. ತಂಡದೊಟ್ಟಿಗೆ ಹೊಂದಿ ಕೊಳ್ಳುವ ಮನೋಭಾವ, ಸೋಲು ಒಪ್ಪಿಕೊಳ್ಳದ ಪ್ರವೃತ್ತಿ, ಕಾಯಕ ನಿಷ್ಠೆ ಮತ್ತು ನಾಯಕತ್ವ. ಇದೆಲ್ಲಕ್ಕಿಂತ ಮುಖ್ಯವಾಗಿ, ಮಾದರಿ ನಡವಳಿಕೆ. ಭಾರತೀಯ ಕ್ರೀಡೆಯಲ್ಲಿ ಸುನಿಲ್ ಛೆಟ್ರಿಯಂಥವರು ಹೆಚ್ಚು ಸಂಖ್ಯೆಯಲ್ಲಿ ಇರಬೇಕಿದೆ,ʼ ಎಂದು ಟ್ವೀಟ್ ಮಾಡಿದ್ದಾರೆ.
ʻಆದರೆ, ಭಾರತೀಯ ಫುಟ್‌ಬಾಲ್ ಬಗ್ಗೆ ನಿಜವಾಗಿಯೂ ಚಿಂತಿತನಾಗಿದ್ದೇನೆ. 90 ನಿಮಿಷ ಕಷ್ಟಪಟ್ಟುಕೊಂಡು ಪಂದ್ಯವನ್ನು ವೀಕ್ಷಿಸಿದೆ. ತಂಡ ನಿಧಾನಗತಿಯಲ್ಲಿ, ಚೈತನ್ಯರಹಿತ ಆಟವಾಡಿದ್ದು, ಕುವೈತಿನ ಗೋಲ್ ಕಡೆಗೆ ಒಂದೇ ಒಂದು ಒದೆತ ಮಾಡಿದೆ. 4 ಪಾಸ್‌ಗಳನ್ನು ಒಟ್ಟಿಗೆ ಸೇರಿಸಲು ಹೆಣಗಾಡುತ್ತಿದೆ. ನಾವೆಲ್ಲರೂ ಇಷ್ಟಪಡುವ ಆಟದ ಬಗ್ಗೆ ಆತ್ಮಾವಲೋಕನ ಮಾಡಬೇಕಿದೆ, ʼಎಂದು ಹೇಳಿದರು.
ಎಲ್ಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳು ರಾತ್ರಿ ಛೆಟ್ರಿ ಅವರಿಗೆ ಗೌರವ ಸಲ್ಲಿಸಿದರು; ಅವರನ್ನು ಭಾರತೀಯ ಫುಟ್‌ಬಾಲ್‌ನ ರಾಜ ಎಂದು ಶ್ಲಾಘಿಸಿದರು.
ಕ್ರೊಯೇಷಿಯಾ ನಾಯಕ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್‌ಸ್ಟಾರ್ ಲೂಕಾ ಮಾಡ್ರಿಕ್ ಅವರು ಛೆಟ್ರಿ ಅವರನ್ನುʻಆಟದ ದಂತಕಥೆʼ ಎಂದು ಶ್ಲಾಘಿಸಿದ್ದರು.
ಭಾರತ ತಂಡದ ಕೋಚ್ ಇಗೊರ್ ಸ್ಟಿಮ್ಯಾಕ್ ಹಂಚಿಕೊಂಡ ವಿಡಿಯೋ ಸಂದೇಶದಲ್ಲಿ, ʻಹಾಯ್ ಸುನಿಲ್, ಹಲೋ. ರಾಷ್ಟ್ರೀಯ ತಂಡಕ್ಕಾಗಿ ನಿಮ್ಮ ಕೊನೆಯ ಪಂದ್ಯದಲ್ಲಿ ನಿಮಗೆ ಶುಭ ಹಾರೈಸುತ್ತೇನೆ. ನೀವು ಈ ಆಟದ ದಂತಕಥೆಯಾಗಿದ್ದೀರಿ ಮತ್ತು ತಂಡದ ಆಟಗಾರರಿಗೆ ಕೊನೆಯ ಪಂದ್ಯವನ್ನು ವಿಶೇಷ ಮತ್ತು ಮರೆಯಲಾಗದಂತೆ ಮಾಡುತ್ತೀರಿ ಎಂದು ಭಾವಿಸುತ್ತೇನೆ,ʼ ಎಂದು ಲೂಕಾ ಮಾಡ್ರಿಕ್ ಹೇಳಿದರು. ʻನಿಮ್ಮ ನಾಯಕನಿಗೆ ಶುಭವಾಗಲಿ ಮತ್ತು ಗೆಲ್ಲಲಿ. ಕ್ರೊಯೇಷಿಯಾದಿಂದ ಎಲ್ಲಾ ಶುಭಾಶಯಗಳು,ʼ ಎಂದು 2018 ರ ವಿಶ್ವಕಪ್‌ನಲ್ಲಿ ಬೆಳ್ಳಿ ಮತ್ತು 2022 ರಲ್ಲಿ ಕಂಚಿನ ಪದಕ ಗೆದ್ದ ಮಾಡ್ರಿಕ್ ಹೇಳಿದರು.
ಕ್ರಿಸ್ಟಿಯಾನೊ ರೊನಾಲ್ಡೊ (128), ಅಲಿ ಡೇಯಿ (108) ಮತ್ತು ಲಿಯೋನೆಲ್ ಮೆಸ್ಸಿ (106) ನಂತರ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 4ನೇ ಅತಿ ಹೆಚ್ಚು ಗೋಲ್ ಗಳಿಸಿದ ಸಾರ್ವಕಾಲಿಕ ಸ್ಕೋರರ್‌ಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿದ್ದಾರೆ.