Sudha Murty Pushes for Free Early Childhood Education and Care as Fundamental Right
x

ಸಾಂದರ್ಭಿಕ ಚಿತ್ರ

3ರಿಂದ 6 ವರ್ಷದ ಮಕ್ಕಳಿಗೂ ಉಚಿತ, ಕಡ್ಡಾಯ ಶಿಕ್ಷಣ: ಸಂವಿಧಾನ ತಿದ್ದುಪಡಿಗೆ ಸುಧಾಮೂರ್ತಿ ಸಲಹೆ

ರಾಜ್ಯಸಭೆಯಲ್ಲಿ ಶುಕ್ರವಾರ ಖಾಸಗಿ ವಿಧೇಯಕ ಕುರಿತ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಪ್ರಸ್ತುತ ಇರುವ ಶಿಕ್ಷಣ ಹಕ್ಕಿನ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವನ್ನು ಪ್ರತಿಪಾದಿಸಿದರು.


Click the Play button to hear this message in audio format

ದೇಶದ ಪ್ರತಿಯೊಂದು ಮಗುವಿಗೂ ಬಾಲ್ಯದ ಆರಂಭಿಕ ಹಂತದಿಂದಲೇ ಗುಣಮಟ್ಟದ ಬುನಾದಿ ದೊರಕಿಸುವ ನಿಟ್ಟಿನಲ್ಲಿ, 3ರಿಂದ 6 ವರ್ಷದೊಳಗಿನ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಾಗೂ ಆರೈಕೆಯನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು ಎಂದು ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಶುಕ್ರವಾರ ಖಾಸಗಿ ವಿಧೇಯಕ ಕುರಿತ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಪ್ರಸ್ತುತ ಇರುವ ಶಿಕ್ಷಣ ಹಕ್ಕಿನ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವನ್ನು ಪ್ರತಿಪಾದಿಸಿದರು. "ಸಂವಿಧಾನದ 21ನೇ ವಿಧಿಯಡಿ ಪ್ರಸ್ತುತ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕಿದೆ. ಇದನ್ನು ತಿದ್ದುಪಡಿ ಮಾಡುವ ಮೂಲಕ 3 ರಿಂದ 14 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಾಗೂ ಶೈಶಾವಸ್ಥೆಯ ಆರೈಕೆಯನ್ನು ಖಾತರಿಪಡಿಸಬೇಕು," ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಮಕ್ಕಳು ಉದಯಿಸುವ ಸೂರ್ಯನಂತೆ

ಮಕ್ಕಳ ಬಾಲ್ಯದ ಮಹತ್ವವನ್ನು ಬಣ್ಣಿಸಿದ ಸುಧಾಮೂರ್ತಿ, "ಮಕ್ಕಳು ನಮ್ಮ ದೇಶದ ಭವಿಷ್ಯ. ಅವರು ಉದಯಿಸುತ್ತಿರುವ ಸೂರ್ಯನಷ್ಟು ಪ್ರಖರವಾದವರು. ಹೀಗಾಗಿ ಅವರ ಆರಂಭಿಕ ಶಿಕ್ಷಣವು ಕೇವಲ ಅಕ್ಷರಾಭ್ಯಾಸವಾಗದೆ, ಅವರ ಜೀವನಕ್ಕೊಂದು ಸ್ಫೂರ್ತಿಯ ಆಯಾಮ ನೀಡುವಂತಿರಬೇಕು. ಮಗುವಿನ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ 3 ರಿಂದ 6 ವರ್ಷದ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಈ ಹಂತದಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ," ಎಂದು ಸದನದಲ್ಲಿ ಅಭಿಪ್ರಾಯಪಟ್ಟರು.

ಅಂಗನವಾಡಿಗಳ ಸಶಕ್ತೀಕರಣಕ್ಕೆ ಒತ್ತು

ಕೇವಲ ಕಾಯ್ದೆ ಜಾರಿಯಾದರೆ ಸಾಲದು, ಅದಕ್ಕೆ ಪೂರಕವಾದ ವ್ಯವಸ್ಥೆಯೂ ಸಿದ್ಧವಾಗಬೇಕು ಎಂದು ಅವರು ಸಲಹೆ ನೀಡಿದರು. "ದೇಶದ ಕಟ್ಟಕಡೆಯ ಮಗುವಿಗೂ ಸಮಾನ ಆರೈಕೆ ಮತ್ತು ಕಲಿಯುವ ಅವಕಾಶ ಸಿಗಬೇಕಾದರೆ ಅಂಗನವಾಡಿ ಕೇಂದ್ರಗಳನ್ನು ಸಶಕ್ತಗೊಳಿಸುವುದು ಅನಿವಾರ್ಯ. ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಮತ್ತು ಕಾರ್ಯಕರ್ತರಿಗೆ ಉನ್ನತ ಗುಣಮಟ್ಟದ ತರಬೇತಿ ನೀಡಬೇಕು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು," ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸುವ ಸುಧಾಮೂರ್ತಿ ಅವರ ಈ ಪ್ರಸ್ತಾಪವು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಿಗೂ ಪೂರಕವಾಗಿದ್ದು, ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Read More
Next Story