
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಗ್ಯಾರಂಟಿಗಳು ನೆರೆ ತಡೆಯುತ್ತವೆಯೇ?: ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಎಚ್‌ಡಿಕೆ ಆಕ್ರೋಶ
ಕಲ್ಯಾಣ ಕರ್ನಾಟಕದಲ್ಲಿ ನೆರೆ ಸಂಕಷ್ಟದಲ್ಲಿ ಜನರಿದ್ದಾರೆ. ರಾಜ್ಯದಲ್ಲಿರುವ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು ನೆರೆ ಸಂತ್ರಸ್ತರ ನೆರವಿಗೆ ಬಂದು ತಕ್ಷಣವೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ನೆರೆ ಸಂಕಷ್ಟದಲ್ಲಿ ಜನರಿದ್ದಾರೆ. ರಾಜ್ಯದಲ್ಲಿರುವ ಸರ್ಕಾರ ʼಕುಂಭಕರ್ಣ ನಿದ್ರೆʼಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ 36 ಸಚಿವರಿಗೆ ಮಂಗಳವಾರ(ಸೆ.30) ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಟೀಕೆಗಳು ಆರಂಭವಾದ ಮೇಲೆ ಸಿಎಂ ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ ಮೂರು ತಿಂಗಳಿಂದ ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಕಿಡಿಕಾರಿದರು.
ಮಂತ್ರಿಗಳು ಜನರ ಕಷ್ಟಕ್ಕೆ ಮಿಡಿಯಲಿ
ಪರಿಹಾರಕ್ಕೆ ಒತ್ತಾಯ ಮಾಡುತ್ತಿರುವ ಪ್ರತಿಪಕ್ಷಗಳ ಬಗ್ಗೆ ಮುಖ್ಯಮಂತ್ರಿ ನೀಡುತ್ತಿರುವ ಉತ್ತರ, ಹೇಳಿಕೆಗಳನ್ನು ನೋಡಿದರೆ ನಿರಾಶೆಯಾಗುತ್ತದೆ. ಪ್ರತಿಪಕ್ಷವನ್ನು ಟೀಕಿಸಿದರೆ ನೆರೆ ಸಂತ್ರಸ್ತರ ಸಮಸ್ಯೆ ನೀಗುತ್ತದೆಯೇ? ಅವರ ಹೇಳಿಕೆಗಳು ಸಿಎಂ ಹುದ್ದೆಗೆ ತಕ್ಕುದಾಗಿಲ್ಲ. ಸಂಪುಟದಲ್ಲಿ 36 ಜನ ಮಂತ್ರಿಗಳಿದ್ದಾರೆ. ಅವರೆಲ್ಲರೂ ಎಲ್ಲಿ ಹೋಗಿದ್ದಾರೆ? ಮೊದಲು ಜಡತ್ವ ಬಿಟ್ಟು ಪ್ರತೀ ಜಿಲ್ಲೆಗೂ ಮೂವರು ಮಂತ್ರಿಗಳನ್ನು ಕಳಿಸಿ. ವಿಶೇಷ ತಂಡಗಳನ್ನು ನಿಯೋಜಿಸಲಿ. ಜನರ ಬಳಿಗೆ ಹೋಗಿ ಅವರ ಕಷ್ಟಕ್ಕೆ ಮಿಡಿಯಲಿ ಎಂದು ಒತ್ತಾಯಿಸಿದರು.
ನನಗೆ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ನೆರೆಪೀಡಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ವಾರ ಕ್ಯಾಂಪ್ ಮಾಡುತ್ತಿದ್ದೆ. ಎರಡು ದಿನಗಳ ಹಿಂದೆಯೇ ನಾನು ನೆರೆ ಪ್ರದೇಶಗಳಿಗೆ ಹೋಗಲು ಸಿದ್ದವಾಗಿದ್ದೆ. ಹವಾಮಾನ ಸರಿ ಇಲ್ಲದ ಕಾರಣ ಅಧಿಕಾರಿಗಳು ಬರಬೇಡಿ ಎಂದರು. ಪ್ರವಾಹ ಬಂದು ಮೂರು ದಿನಗಳು ಆದ ಮೇಲೆ ಮಂತ್ರಿಗಳು ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಹೀಗೆ ಮಾಡಿದರೆ ಹೇಗೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಸರ್ಕಾರಕ್ಕೆ ಎಚ್‌ಡಿಕೆ ಕಿವಿಮಾತು
ಪದೇ ಪದೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಘರ್ಷಣೆ ಮಾಡಿಕೊಳ್ಳಬಾರದು. ಅದರಿಂದ ಉಪಯೋಗವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿಡಿ. ಸರಿಯಾದ ರೀತಿಯಲ್ಲಿ ಮನವಿ ಕೊಟ್ಟು ಪರಿಹಾರ ಕೇಳಿದರೆ ಕೇಂದ್ರದ ನೆರವು ಸಿಗುತ್ತದೆ. ಮೊದಲು ಒರಟು ಮಾತು ಬಿಡಿ. ಈವರೆಗೂ ರಾಜ್ಯದ ಒಬ್ಬ ಸಚಿವ ಅಥವಾ ಅಧಿಕಾರಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ ಎಂದರು.
ಇಷ್ಟೊತ್ತಿಗೆ ಪರಿಹಾರ ಕ್ರಮಗಳು ಕೈಗೊಳ್ಳಬೇಕಿತ್ತು. ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮಾಡಿ ಗರಂ ಆಗಿದ್ದು ಸಾಕು. ಮೊದಲು ನಿಮ್ಮ ಮಂತ್ರಿಗಳನ್ನು ತಂಡಗಳನ್ನಾಗಿ ಮಾಡಿ ಕಳುಹಿಸಿ. ಹಿಂದೆ ಪಾದಯಾತ್ರೆ ಮಾಡಿದ್ದರು. ಆದರೆ, ರಾಜ್ಯ ಅಭಿವೃದ್ಧಿ ವಿಷಯ ಬಂದಾಗ ಕೇಂದ್ರವನ್ನು ಸರಿದೂಗಿಸಿಕೊಂಡು ಹೋಗಿಲ್ಲ. ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಸರ್ಕಾರ ಬಂದು ಒಂದೂವರೆ ವರ್ಷವಾಯಿತು. ಈ ತನಕ ಯಾವ ಸಚಿವರೂ ಬಂದು ನನ್ನನ್ನು ಭೇಟಿ ಮಾಡಿಲ್ಲ. ಬೈಯುವುದರಿಂದ ಏನು ಆಗಲ್ಲ. ಬದಲಿಗೆ ದೆಹಲಿಗೆ ಬಂದು ಕೇಂದ್ರದ ಜೊತೆ ಮಾತನಾಡಿ. ಮೊದಲು ಕೇಂದ್ರಕ್ಕೆ ಮನವಿ ಕೊಡಿ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿ. ಕೇಂದ್ರ ಸ್ಪಂದಿಸುತ್ತದೆ ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಬೇಕಿಲ್ಲದ ವಿಷಯಗಳತ್ತ ಹೆಚ್ಚು ಕಾಲ ವ್ಯರ್ಥವಾಗುತ್ತಿದೆ. ಜಾತಿ ಗಣತಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಜನರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಗ್ಯಾರಂಟಿಗಳನ್ನು ಕೊಟ್ಟೆವು ಎಂದರು. ಈಗ ಕಲ್ಯಾಣ ಕರ್ನಾಟಕವನ್ನು ಗ್ಯಾರಂಟಿಗಳು ಕಾಪಾಡುತ್ತಿವೆಯೇ? ಅವರಿಗೆ ನೆರೆಯನ್ನು ತಡೆದು ಶಾಶ್ವತ ಪರಿಹಾರ ನೀಡಬೇಕು. ಈ ಸರ್ಕಾರದಿಂದ ಅದು ಸಾಧ್ಯವೇ? ಎಂದು ಪ್ರಶ್ನಿಸಿದರು.
ಡಿಸಿಎಂ ಬಿಟ್ಟು ಸಿಎಂ ನಗರ ಪ್ರದಕ್ಷಿಣೆ
ಬೆಂಗಳೂರು ಉಸ್ತುವಾರಿ ಸಚಿವರು ಭಾರೀ ಕೆಲಸದ ಒತ್ತಡದಲ್ಲಿದ್ದರು. ಆದ್ದರಿಂದ ಅವರನ್ನು ಬಿಟ್ಟೇ ಸಿಎಂ ನಗರ ಪ್ರದಕ್ಷಿಣೆ ಮಾಡಿದರು. ಸಿಎಂ ಅವರು ಮುಚ್ಚಿದ ಗುಂಡಿ ನೋಡಿಕೊಂಡು ಹೋಗುತ್ತಿದ್ದರೆ ಅವರ ಹಿಂದೆ ಹಾಕಿರುವ ಟಾರು ಕಿತ್ತುಕೊಂಡು ಹೋಗಿದೆ. ಗ್ಯಾರಂಟಿ ಯೋಜನೆ ಮಾಡಿ ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳಲಿಲ್ಲ. ಆದರೆ ದಸರಾ ಹೆಸರಲ್ಲಿ ಸರ್ಕಾರ ಈಗ ಬಸ್ ಟಿಕೆಟ್ ಬೆಲೆ ಹೆಚ್ಚಳ ಮಾಡಿದೆ. ಖಾಸಗಿ ಬಸ್‌ಗಳ ಜತೆ ಕೆಎಸ್‌ಆರ್‌ಟಿಸಿ ಕೂಡ ದರ ಏರಿಕೆಗೆ ಪೈಪೋಟಿಗೆ ಬಿದ್ದಿದೆ ಎಂದು ಟೀಕಿಸಿದರು.
ಸಾಲ ನೀಡುವ ಪ್ರಮಾಣ ಶೇ.17ಕ್ಕೆ ಕುಸಿತ
ನಾನು ಸಿಎಂ ಆಗಿದ್ದಾಗ ರೈತರಿಗೆ ಶೇ.35 ಸಾಲ ನೀಡುತ್ತಿದ್ದೆ. ಆದರೆ ರಾಜ್ಯ ಸರ್ಕಾರ ಸಾಲ ನೀಡುತ್ತಿರುವ ಪ್ರಮಾಣ ಕೇವಲ ಶೇ.17 ಕ್ಕೆ ಕುಸಿದಿದೆ. ಇದು ಈ ಸರ್ಕಾರದ ರೈತಪರ ಕಾಳಜಿ ಎಂದು ವ್ಯಂಗ್ಯವಾಡಿದರು. ನೆರೆಯ ಮಹಾರಾಷ್ಟ್ರದಿಂದ ನಿತ್ಯವೂ 4.5 ಲಕ್ಷ ಕ್ಯೂಸೆಕ್ ನೀರು ಹೊರ ಬರುತ್ತಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಭೀಮಾ, ಕೃಷ್ಣಾ ನದಿ ಪಾತ್ರಗಳಲ್ಲಿಯೂ ಅತಿವೃಷ್ಟಿಯಾಗಿ ಅಷ್ಟೇ ಪ್ರಮಾಣದ ನೀರು ಹರಿಯುತ್ತಿದೆ. ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದ ನೀರು ಪ್ರವಾಹ ಸ್ವರೂಪ ಪಡೆದು ಅಪಾರ ನಷ್ಟ ಉಂಟು ಮಾಡಿದೆ ಎಂದರು.

