ಮೋದಿ ಅವರ ಭಾಷಣದಲ್ಲಿ ಆರ್‌ಎಸ್‌ಎಸ್‌ ದುರ್ವಾಸನೆ: ಖರ್ಗೆ
x

ಮೋದಿ ಅವರ ಭಾಷಣದಲ್ಲಿ ಆರ್‌ಎಸ್‌ಎಸ್‌ ದುರ್ವಾಸನೆ: ಖರ್ಗೆ

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ ಛಾಪು ಹೇಳಿಕೆ ವಿರುದ್ಧ ಇಸಿಗೆ ದೂರು


ಕಾಂಗ್ರೆಸ್ ಪ್ರಣಾಳಿಕೆ ಮೇಲೆ ಮುಸ್ಲಿಮ್ ಲೀಗ್ ಮುದ್ರೆಯಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತು ಪಕ್ಷ ಚುನಾವಣೆ ಆಯೋಗಕ್ಕೆ ದೂರು ನೀಡಿದೆ. ಪ್ರತಿದಾಳಿ ನಡೆಸಿರುವ ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು , ʻಮೋದಿಯವರ ಭಾಷಣಗಳಲ್ಲಿ ಆರೆಸ್ಸೆಸ್ ನ ದುರ್ವಾಸನೆ ಹೊಡೆಯುತ್ತಿದೆʼ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 180 ಸ್ಥಾನಗಳನ್ನು ದಾಟಲು ಹೆಣಗಾಡಬಹುದು ಎಂಬ ಆತಂಕದಲ್ಲಿರುವ ಪ್ರಧಾನಿ, ಹಳಸಲು ʻಹಿಂದೂ-ಮುಸ್ಲಿಂ ಕಾರ್ಡ್‌ʼ ಆಶ್ರಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆದರೆ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದ ಚುನಾವಣಾ ಸಭೆಗಳಲ್ಲಿ ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ ಪ್ರಧಾನಿ, ದೇಶದ ಅತ್ಯಂತ ಹಳೆಯ ಪಕ್ಷ ತನ್ನ ಕಾರ್ಯಗಳಿಂದಾಗಿ ಜನಬೆಂಬಲ ಕಳೆದುಕೊಂಡಿದೆ. ಅದರ ಪ್ರಣಾಳಿಕೆ ಮುಸ್ಲಿಂ ಲೀಗ್‌ನ ಮುದ್ರೆಯನ್ನು ಹೊಂದಿದೆ ಎಂದು ಹೇಳಿದ್ದರು.

ವಿದರ್ಭ ಪ್ರದೇಶದ ಚಂದ್ರಾಪುರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ʻಕಾಂಗ್ರೆಸ್ 10 ವರ್ಷದಿಂದ ಅಧಿಕಾರದಿಂದ ಹೊರಗುಳಿದಿದೆ. ನಾವು ದೇಶ ಎದುರಿಸುತ್ತಿದ್ದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಭಯೋತ್ಪಾದನೆ ಬಗ್ಗೆ ಮೃದುವಾಗಿದೆ. ಅದರ ಪ್ರಣಾಳಿಕೆಯಲ್ಲೂ ಮುಸ್ಲಿಂ ಲೀಗ್ ಮುದ್ರೆ ಇದೆʼ ಎಂದು ಹೇಳಿದ್ದರು.

ಪ್ರಧಾನ ಮಂತ್ರಿಯವರ ಅಭಿಪ್ರಾಯಗಳನ್ನು ಪ್ರತಿಧ್ವನಿಸಿದ್ದ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕೂಡ, ಕಾಂಗ್ರೆ‌ಸ್‌ ಬಹುಸಂಖ್ಯಾತ ಸಮುದಾಯದ ವಿರುದ್ಧ ಏಕೆ ಇದೆ ಎಂದು ವಿವರಿಸಬೇಕು ಎಂದು ಕೇಳಿದ್ದರು.

ಖರ್ಗೆ ದಾಳಿ: ಬಿಜೆಪಿಯ ಸೈದ್ಧಾಂತಿಕ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ನ್ನು ಬೆಂಬಲಿಸಿದ್ದರು ಎಂದು ಖರ್ಗೆ ದೂರಿದ್ದರು.

ಎಕ್ಸ್‌ನ ಪೋಸ್ಟ್‌ನಲ್ಲಿ ಖರ್ಗೆ, ʻಇಂದಿಗೂ ಮೋದಿ ಅವರು ಕಾಂಗ್ರೆಸ್ಸಿನ ನ್ಯಾಯಪತ್ರದ ವಿರುದ್ಧ ಮುಸ್ಲಿಂ ಲೀಗ್ ಹೆಸರು ಬಳಸುತ್ತಿದ್ದಾರೆ. ಪ್ರಣಾಳಿಕೆ ಭಾರತೀಯರ ಆಕಾಂಕ್ಷೆ, ಅಗತ್ಯ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ರೂಪುಗೊಂಡಿದೆ. ಮೋದಿ-ಶಾ ಮತ್ತು ಪಕ್ಷದ ಅಧ್ಯಕ್ಷರು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ,ʼ ಎಂದು ದೂರಿದ್ದಾರೆ.

ʻಮೋದಿಯವರ ಭಾಷಣಗಳಲ್ಲಿ ಆರ್‌ಎಸ್‌ಎಸ್‌ನ ಗಬ್ಬು ವಾಸನೆಯಿದೆ. ಬಿಜೆಪಿಯ ಚುನಾವಣಾ ಗ್ರಾಫ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆದ್ದರಿಂದ ಆರ್‌ಎಸ್‌ಎಸ್ ತನ್ನ ಆತ್ಮೀಯ ಸ್ನೇಹಿತ ಮುಸ್ಲಿಂ ಲೀಗ್ ಅನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದೆ. 140 ಕೋಟಿ ಜನರ ಒಟ್ಟು ಶಕ್ತಿ ಮೋದಿಜಿಯವರ 10 ವರ್ಷಗಳ ಅನ್ಯಾಯವನ್ನು ಕೊನೆಗೊಳಿಸುತ್ತದೆʼ ಎಂದು ಬರೆದಿದ್ದಾರೆ.

ಮೋದಿ ವಿರುದ್ಧ ಕಾಂಗ್ರೆಸ್‌ ದೂರು: ಕಾಂಗ್ರೆಸ್ ನಿಯೋಗವು ಚುನಾವಣೆ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ʻಮೋದಿ ಹೇಳಿಕೆ ವಿರುದ್ಧ ದೂರು ದಾಖಲಿಸಿದ್ದೇವೆʼ ಎಂದು ಹೇಳಿದರು.

ʻವಿಷಯವನ್ನು ಚುನಾವಣೆ ಆಯೋಗಕ್ಕೆ ತಿಳಿಸಿದ್ದೇವೆ. ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೇವೆʼ ಎಂದು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದರು.

ಮೋದಿ ಆತಂಕದಲ್ಲಿದ್ದಾರೆ: ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನಾತೆ, ʻಬಿಜೆಪಿ ನೆಲೆಯನ್ನು ಕಳೆದುಕೊಳ್ಳುತ್ತಿರುವುದರಿಂದ, ಪ್ರಧಾನಿಯವರ ಮುಸ್ಲಿಂ ಲೀಗ್ ಮೇಲಿನ ಪ್ರೀತಿ ಮತ್ತೆ ಹೊರಹೊಮ್ಮಿದೆʼ ಎಂದು ಹೇಳಿದ್ದರು.

ʻ10 ವರ್ಷದಿಂದ ಅಧಿಕಾರದಲ್ಲಿರುವ ಪ್ರಧಾನಿ ತಮ್ಮ ಸಾಧನೆ ಆಧರಿಸಿ ಮತ ಕೇಳುವ ಬದಲು ಹಳಸಿದ ಹಿಂದೂ-ಮುಸ್ಲಿಂ ಕಥನವನ್ನೇ ಆಶ್ರಯಿಸಿದ್ದಾರೆ,ʼ ಎಂದು ಟೀಕಿಸಿದ್ದರು.

Read More
Next Story