ಬಾಬರಿ ಮಸೀದಿ ಧ್ವಂಸಕ್ಕೆ ಸಂಭ್ರಮ: ಉದ್ಧವ್ ಆಪ್ತನ ಕೃತ್ಯ ಖಂಡಿಸಿ ಅಘಾಡಿ ನಂಟು ಕಡಿದುಕೊಂಡ ಎಸ್ಪಿ
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ವೈಫಲ್ಯ ಎದುರಿಸಿತ್ತು. ಆಗಲೇ ಮೈತ್ರಿಯೊಳಗೆ ಅಸಮಾಧಾನ ಸೃಷ್ಟಿಯಾಗಿತ್ತು. ಇದೀಗ ಸಮಾಜವಾದಿ ಪಕ್ಷ ಹೊರ ನಡೆದಿದೆ.
ಶಿವಸೇನೆ ಉದ್ಧವ್ ಠಾಕ್ರೆ ಆಪ್ತರೊಬ್ಬರು ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಸಂಭ್ರಮಿಸಿದ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಗೂ ಪತ್ರಿಕಾ ಜಾಹೀರಾತು ನೀಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟದಲ್ಲಿ ಬಿರುಕು ಉಂಟಾಗಿದೆ. ಮೈತ್ರಿಯಿಂದ ಹೊರಬರುವುದಾಗಿ ಸಮಾಜವಾದಿ ಪಕ್ಷ ಶನಿವಾರ ಪ್ರಕಟಿಸಿದೆ. ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷದ ಇಬ್ಬರು ಶಾಸಕರಿದ್ದಾರೆ.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ವೈಫಲ್ಯ ಎದುರಿಸಿತ್ತು. ಆಗಲೇ ಮೈತ್ರಿಯೊಳಗೆ ಅಸಮಾಧಾನ ಸೃಷ್ಟಿಯಾಗಿತ್ತು. ಇದೀಗ ಸಮಾಜವಾದಿ ಪಕ್ಷ ಹೊರಕ್ಕೆ ನಡೆದಿದೆ.
"ಬಾಬರಿ ಮಸೀದಿ ಧ್ವಂಸಗೊಳಿಸಿದವರನ್ನು ಅಭಿನಂದಿಸಿ ಶಿವಸೇನೆ (ಯುಬಿಟಿ) ಪತ್ರಿಕೆಯಲ್ಲಿ ಜಾಹೀರಾತನ್ನು ನೀಡಿದೆ. ಅವರ (ಉದ್ಧವ್ ಠಾಕ್ರೆ) ಆಪ್ತ ಮಸೀದಿ ಧ್ವಂಸ ಶ್ಲಾಘಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ" ಎಂದು ಮಹಾರಾಷ್ಟ್ರ ಎಸ್ಪಿ ಘಟಕದ ಮುಖ್ಯಸ್ಥ ಅಬು ಅಜ್ಮಿ ಹೇಳಿಕೆ ನೀಡಿದ್ದಾರೆ.
"ನಾವು ಎಂವಿಎ ತೊರೆಯುತ್ತಿದ್ದೇವೆ. ನಾನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಸಿಂಗ್ ಯಾದವ್ ಅವರೊಂದಿಗೆ ಮಾತನಾಡುತ್ತಿದ್ದೇನೆ" ಎಂದು ಅಜ್ಮಿ ಪಿಟಿಐಗೆ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸದ ಬಗ್ಗೆ ಶಿವಸೇನೆ (ಯುಬಿಟಿ) ಎಂಎಲ್ಸಿ ಮಿಲಿಂದ್ ನರ್ವೇಕರ್ ಅವರ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಎಸ್ಪಿ ಈ ಕ್ರಮ ಕೈಗೊಂಡಿದೆ.
"ಬಾಬರಿ ಮಸೀದಿ ಒಡೆದವರ ಬಗ್ಗೆ ನನಗೆ ಹೆಮ್ಮೆ ಇದೆ" ಎಂಬ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಉಲ್ಲೇಖದೊಂದಿಗೆ ನರ್ವೇಕರ್ ಮಸೀದಿ ಧ್ವಂಸದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಶಿವಸೇನೆ (ಯುಬಿಟಿ) ಕಾರ್ಯದರ್ಶಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ಅವರ ಚಿತ್ರಗಳನ್ನು ಪೋಸ್ಟ್ನಲ್ಲಿ ಪ್ರಕಟಿಸಿದ್ದಾರೆ.
"ಎಂವಿಎಯಲ್ಲಿ ಯಾರಾದರೂ ಈ ರೀತಿಯ ಹೇಳಿಕೆ ನೀಡುವುದಾದರೆ ಬಿಜೆಪಿ ಮತ್ತು ಅವರ ನಡುವಿನ ವ್ಯತ್ಯಾಸವೇನು? ನಾವು ಅವರೊಂದಿಗೆ ಏಕೆ ಇರಬೇಕು? ಎಂದು ಅಜ್ಮಿ ಪ್ರಶ್ನಿಸಿದ್ದಾರೆ.