Infosys Employees | ಇನ್ಫೋಸಿಸ್ ಉದ್ಯೋಗಿಗಳ ವಜಾ ಪ್ರಕರಣ: ರಾಜ್ಯ ಕಾರ್ಮಿಕ ಇಲಾಖೆ ತನಿಖೆ
x
ಇನ್ಫೊಸಿಸ್ ಕಂಪನಿಯ ಮೈಸೂರು ಕ್ಯಾಂಪನ್

Infosys Employees | ಇನ್ಫೋಸಿಸ್ ಉದ್ಯೋಗಿಗಳ ವಜಾ ಪ್ರಕರಣ: ರಾಜ್ಯ ಕಾರ್ಮಿಕ ಇಲಾಖೆ ತನಿಖೆ

700ಕ್ಕೂ ಹೆಚ್ಚು ಯುವ ಇಂಜಿನಿಯರ್​ಗಳನ್ನು ಇನ್ಫೋಸಿಸ್ ಮೈಸೂರಿನ ಕ್ಯಾಂಪಸ್​ನಲ್ಲಿ ವಜಾ ಗೊಳಿಸಲಾಗಿದೆ. ಈ ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಜೊತೆಗೆ Infosys ಕಂಪನಿಗೂ ಕೂಡ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.


ಮೂಲಭೂತ ತರಬೇತಿ ಪಡೆದಿದ್ದ 350ಕ್ಕೂ ಹೆಚ್ಚು ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿದ ಪ್ರಕರಣ ಇನ್ಫೋಸಿಸ್ ಕಂಪನಿಗೆ ಬಹುದೊಡ್ಡ ಸಮಸ್ಯೆ ತಂದಿಡಲಿದೆಯೇ?

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾರ್ಮಿಕ ಇಲಾಖೆ ಕೇಂದ್ರ ಸರ್ಕಾರಕ್ಕೆ ಕೊಡಲಿರುವ ವರದಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈಗಾಗಲೇ ವಜಾ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾರ್ಮಿಕ ಇಲಾಖೆ ಕೊಡಲಿರುವ ವರದಿಯನ್ನಾಧರಿಸಿ ತೆಗೆದುಕೊಳ್ಳುವ ಕಾನೂನು ಕ್ರಮ ಮಹತ್ವ ಪಡೆದುಕೊಂಡಿದೆ.

ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯವು ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಗೆ ಸಮಸ್ಯೆ ಪರಿಹರಿಸಲು ತುರ್ತು ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತ್ತು. ಐಟಿ ನೌಕರರ ಕಲ್ಯಾಣ ಸಂಘ (NITES) ದೂರಿನ ಮೇರೆಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿತ್ತು. ಕೇಂದ್ರದ ಸೂಚನೆಯನ್ನಾಧರಿಸಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಇನ್ಫೋಸಿಸ್ ವಿರುದ್ಧ ದೂರು ಸಲ್ಲಿಸಿದ ಕೆಐಟಿಯು

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘದ (KITU) ನಿಯೋಗವು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ನೇತೃತ್ವದಲ್ಲಿ ಕಾರ್ಮಿಕ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಅವರನ್ನು ಭೇಟಿ ಮಾಡಿ ಕಾರ್ಮಿಕ ಕಾನೂನು ಉಲ್ಲಂಘನೆ ಮತ್ತು ಅನ್ಯಾಯದ ಕಾರ್ಮಿಕ ಪದ್ಧತಿಗಳಿಗಾಗಿ ಇನ್ಫೋಸಿಸ್ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಇನ್ಫೋಸಿಸ್ ಕಂಪನಿ ತನ್ನ ಮೈಸೂರು ಕ್ಯಾಂಪಸ್‌ನಲ್ಲಿ 350ಕ್ಕೂ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಜೊತೆಗೆ ಉದ್ಯೋಗಿಗಳನ್ನು ನಡೆಸಿಕೊಳ್ಳುವ ರೀತಿ ಮತ್ತು ಕಂಪನಿಯ ನೈತಿಕ ಮತ್ತು ಕಾನೂನು ಮಾನದಂಡಗಳ ಪಾಲನೆ ಕುರಿತು ಕಳವಳ ವ್ಯಕ್ತಪಡಿಸಿದೆ.


ವರದಿ ಆಧರಿಸಿ ಮುಂದಿನ ಕ್ರಮ

ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿರುವ KITU ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ, " ರಾಜ್ಯ ಕಾರ್ಮಿಕ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಅವರಿಗೆ ದೂರು ಸಲ್ಲಿಸಿದ್ದೇವೆ. ʼಇನ್ಫೋಸಿಸ್ ಸಾಮೂಹಿಕ ವಜಾ ಪ್ರಕರಣದ ಕುರಿತು ತನಿಖೆಯನ್ನು ಮಾಡುತ್ತಿದ್ದೇವೆ. ಸಂಪೂರ್ಣ ತನಿಖೆಯ ಬಳಿಕ ವರದಿ ಕೊಡಲಿದ್ದೇವೆ,ʼ ಎಂದು ರಾಜ್ಯ ಕಾರ್ಮಿಕ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ. ಕಾರ್ಮಿಕ ಇಲಾಖೆಯ ಗಮನಕ್ಕೆ ತರದೆ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗಿಗಳನ್ನು ತೆಗೆದುಹಾಕುವಂತಿಲ್ಲ. ಅದನ್ನು ನಾವು ಇಲಾಖೆಯ ಗಮನಕ್ಕೆ ತಂದಿದ್ದವೆ. ಕಾರ್ಮಿಕ ಇಲಾಖೆ ಒದಗಿಸುವ ಮಾಹಿತಿ ಆಧರಿಸಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಿದೆ," ಎಂದಿದ್ದಾರೆ.

ಒಂದೆಡೆ 350 ಉದ್ಯೋಗಿಗಳನ್ನು ವಜಾ ಗೊಳಿಸಲಾಗಿದೆ ಎಂದು ಇನ್ಫೋಸಿಸ್ ಹೇಳಿತ್ತು. ಆದರೆ ಅಕ್ಟೋಬರ್ 2024 ರಲ್ಲಿ ಕೆಲಸಕ್ಕೆ ಸೇರಿದ್ದ 700 ಕ್ಯಾಂಪಸ್ ನೇಮಕಾತಿಗಳನ್ನು ವಜಾಗೊಳಿಸಿದೆ ಎಂಬ ಮಾಹಿತಿಯಿದೆ. ಈ ಕುರಿತು ಐಟಿ ನೌಕರರ ಕಲ್ಯಾಣ ಸಂಘ ದೂರು ಸಲ್ಲಿಸಿದೆ. ಜೊತೆಗೆ ಪ್ರಮುಖವಾಗಿ 2022ರಲ್ಲಿ ಎಂಜಿನಿಯರಿಂಗ್ ಮುಗಿಸಿ ಕ್ಯಾಂಪಸ್​ ಸೆಲೆಕ್ಷನ್​ ಆಗಿದ್ದವರನ್ನು ಅಂತಿಮವಾಗಿ ಇನ್ಫೋಸಿಸ್‌ನಲ್ಲಿ ಉದ್ಯೋಗ ಒದಗಿಸುವ ಮೊದಲು ಎರಡು ವರ್ಷಗಳ ಕಾಲ ಆನ್‌ಬೋರ್ಡಿಂಗ್‌ನಲ್ಲಿ ಇರಿಸಲಾಗಿತ್ತು. ಆ ವಿಳಂಬವನ್ನು ವಜಾಗೊಂಡಿರುವ ಉದ್ಯೋಗಿಗಳು ಸಹಿಸಿಕೊಂಡಿದ್ದರು ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯಕ್ಕೆ NITES ಕೊಟ್ಟಿದ್ದ ದೂರಿನಲ್ಲಿ ತಿಳಿಸಲಾಗಿತ್ತು.

ಇನ್ಫೋಸಿಸ್ ಸ್ಪಷ್ಟನೆ

ಮೂರು ಅವಕಾಶಗಳನ್ನು ನೀಡಲಾಗಿದ್ದರೂ ಆಂತರಿಕ ಮೌಲ್ಯಮಾಪನಗಳಲ್ಲಿ ವಿಫಲರಾದ ನಂತರ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಇನ್ಫೋಸಿಸ್ ಸ್ಪಷ್ಟನೆ ಕೊಟ್ಟಿತ್ತು. ಮೈಸೂರಿನ ಇನ್ಫೋಸಿಸ್ ತರಬೇತಿ ಕೇಂದ್ರದಲ್ಲಿ ನಡೆಸಲಾದ ಈ ಪರೀಕ್ಷೆಗಳು, ಜಾವಾ ಪ್ರೋಗ್ರಾಮಿಂಗ್ ಮತ್ತು ಡೇಟಾಬೇಸ್ ನಿರ್ವಹಣಾ ವ್ಯವಸ್ಥೆಗಳಲ್ಲಿ (DBMS) ತರಬೇತಿ ಪಡೆದವರನ್ನು ಶೇಕಡಾ 65 ರಷ್ಟು ಅಗತ್ಯವಿರುವ ಉತ್ತೀರ್ಣ ಅಂಕಗಳೊಂದಿಗೆ ಮೌಲ್ಯಮಾಪನ ಮಾಡಲಾಗಿತ್ತು. ಆದರೆ ಈ ವ್ಯವಸ್ಥೆಯನ್ನು ಐಟಿ ಉದ್ಯೋಗಿಗಳ ಸಂಘಟನೆಗಳು ವಿರೋಧಿಸಿದ್ದವು.

ಏನಾಗಬಹುದು ಯುವ ಉದ್ಯೋಗಿಗಳ ಭವಿಷ್ಯ?

ವಜಾ ಗೊಳಿಸಲಾದ ಉದಗ್ಯೋಗಿಗಳನ್ನು ಮರು ನೇಮಕ ಮಾಡಿಕೊಳ್ಳುವುದೂ ಸೇರಿದಂತೆ ಹಲವು ಸೂಚನೆಗಳನ್ನು ತನಿಖೆ ನಡೆಸುತ್ತಿರುವ ಕರ್ನಾಟಕ ಕಾರ್ಮಿಕ ಇಲಾಖೆ ಕೊಡಬಹುದಾಗಿದೆ. ವಜಾಗೊಳಿಸಿದ ಉದ್ಯೋಗಿಗಳನ್ನು ಮರುನೇಮಕ ಮಾಡಿಕೊಳ್ಳುವುದು ಒಂದಾದರೆ, ಕಾರ್ಮಿಕ ಕಾನೂನುಗಳನ್ನು ಇನ್ಫೋಸಿಸ್ ಉಲ್ಲಂಘಿಸಿದೆ ಎಂಬುದು ಕಂಡುಬಂದರೆ, ಸೂಕ್ತ ಪರಿಹಾರದ ಜೊತೆಗೆ ವಜಾಗೊಳಿಸಿದ ಉದ್ಯೋಗಿಗಳನ್ನು ಮರು ನೇಮಕ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಇನ್ಫೋಸಿಸ್ ನ್ಯಾಯಯುತ ವಜಾ ನೀತಿಗಳನ್ನು ಪಾಲನೆ ಮಾಡಿಲ್ಲ ಎಂದು ವಿಚಾರಣೆಯಲ್ಲಿ ಕಂಡುಬಂದರೆ, ಸಂಸ್ಥೆಯು ಭಾರತೀಯ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ದಂಡ, ಕಾನೂನು ಉಲ್ಲಂಘನೆ ಅಥವಾ ಇತರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಈ ಪ್ರಕರಣದಿಂದ ಇನ್ಫೋಸಿಸ್ ಹಾಗೂ ಇತರ ಐಟಿ ಸಂಸ್ಥೆಗಳು ತಮ್ಮ ನೇಮಕಾತಿ ಮತ್ತು ವಜಾ ನೀತಿಗಳನ್ನು ಪುನರ್ವಿಮರ್ಶಿಸಲು ಮತ್ತು ಸುಧಾರಿಸಲು ಸಹ ಕಾರಣವಾಗಬಹುದು ಎನ್ನಲಾಗುತ್ತಿದೆ.

ಟ್ರಂಪ್ ನೀತಿಗಳ ನೇರ ಪರಿಣಾಮ?

ಡೋನಾಲ್ಡ್ ಟ್ರಂಪ್ ಅಮರಿಕ ಅಧ್ಯಕ್ಷರಾದ ಬಳಿಕ ಜಾಗತಿಕವಾಗಿ ಬಹಳಷ್ಟು ಬೆಳವಣಿಗೆಗಳು ಆಗುತ್ತಿವೆ. ಅದರ ಪರಿಣಾಮಗಳು ಎಲ್ಲೆಡೆ ಕಂಡು ಬರುತ್ತಿವೆ. ಇತ್ತೀಚೆಗೆ ಇನ್ಫೋಸಿಸ್ ಮೈಸೂರು ಕ್ಯಾಂಪಸ್​ನಲ್ಲಿ ಆಗಿರುವ ಸಾಮೂಹಿಕ ವಜಾ ಪ್ರಕಣವನ್ನು ಜಾಗತಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳಿಗೆ ತಾಳೆ ಹಾಕಲಾಗುತ್ತಿದೆ.

ಅಮೆರಿಕದಿಂದ ಸಾವಿರಾರು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಜೊತೆಗೆ ಅಮೆರಿಕಕ್ಕೆ ಪ್ರಾಧಾನ್ಯತೆ ಎಂಬ ನೀತಿಯನ್ನು ಟ್ರಂಪ್ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿ ವಲಯದಲ್ಲಿಯೂ ಕೂಡ ಅಮೆರಿಕದಿಂದ ಸಿಗುತ್ತಿದ್ದ ಕೆಲಸಕ್ಕೆ ಕತ್ತರಿ ಬಿದ್ದಿದೆ. ಹೀಗಾಗಿ ಐಟಿ ಕಂಪನಿಗಳು ಅನಿವಾರ್ಯವಾಗಿ ಇಂತಹ ಕ್ರಮಕ್ಕೆ ಮುಂದಾಗಿರುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಅದರೆ ಇನ್ಫೋಸಿಸ್ ನಂತಹ ದೈತ್ಯ ಕಂಪನಿಗೆ 350 ಯುವ ಇಂಜನಿಯರ್​ಗಳ ಭವಿಷ್ಯದ ಬಗ್ಗೆ ಗಮನ ಕೊಡಬೇಕಿತ್ತು ಎಂಬುದು ಸಾರ್ವಜನಿಕ ಅಭಿಪ್ರಾಯ. ಒಟ್ಟಾರೆ ಇಡೀ ಪ್ರಕರಣವೀಗ ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆ ಕೊಡುವ ವರದಿಯ ಮೇಲೆ ನಿಂತಿದೆ ಎನ್ನಬಹುದು.

Read More
Next Story