
Ranveer Allahbadia : ಮಹಾರಾಷ್ಟ್ರ ಸೈಬರ್ ಸೆಲ್ ಮುಂದೆ ಹಾಜರಾದ ರಣವೀರ್ ಅಲಹಾಬಾದಿಯಾ
ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್, ಚಂಚ್ಲಾನಿ ಮತ್ತು ರಣವೀರ್ ಅಲ್ಹಾಬಾದಿಯಾ ಅವರ ಮನವಿ ಪರಿಗಣಿಸಿ ಮಹಾಲರಾಷ್ಟ್ರ ಮತ್ತು ಅಸ್ಸಾಂ ಸರ್ಕಾರಗಳಿಗೆ ನೋಟಿಸ್ ನೀಡಿತ್ತು.
ವಿವಾದಾತ್ಮಕ ಯೂಟ್ಯೂಬ್ ಕಾರ್ಯಕ್ರಮ "ಇಂಡಿಯಾಸ್ ಗಾಟ್ ಲಾಟೆಂಟ್"ನಲ್ಲಿ ಅಶ್ಲೀಲ ವಿಷಯ ಪ್ರಸಾರ ಮಾಡಿದ ಆರೋಪ ಹೊತ್ತಿರುವ ಯೂಟ್ಯೂಬರ್‌ಗಳಾದ ರಣವೀರ್ ಅಲಹಾಬಾದಿಯಾ ಮತ್ತು ಆಶಿಷ್ ಚಂಚ್ಲಾನಿ, ಮಹಾರಾಷ್ಟ್ರದ ಸೈಬರ್ ಸೆಲ್ ಮುಂದೆ ಸೋಮವಾರ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ವರದಿಪ್ರಕಾರ, ಮಹಾರಾಷ್ಟ್ರ ಸೈಬರ್ ಸೆಲ್ ಅಧಿಕಾರಿಗಳು ಈ ಇಬ್ಬರಿಗೂ ಸಮನ್ಸ್ ಜಾರಿ ಮಾಡಿದ್ದರು. ಚಂಚ್ಲಾನಿ ಮತ್ತು ಅಲಹಾಬಾದಿಯಾ ಸೋಮವಾರ ಸೈಬರ್ ಸೆಲ್ ಪ್ರಧಾನ ಕಚೇರಿಗೆ ಬಂದು ಅಧಿಕಾರಿಗಳ ಮುಂದೆ ಆಗಿರುವ ಪ್ರಮಾದದ ಕುರಿತು ವಿವರಣೆ ನೀಡಿದ್ದಾರೆ.
ಆಶಿಶ್ ಚಂಚ್ಲಾನಿ, ಇತ್ತೀಚೆಗೆ ತಮ್ಮ ವಿರುದ್ಧ ಗುವಾಹಟಿಯಲ್ಲಿ ತಮ್ಮ ಮೇಲೆ ದಾಖಲಾದ ದೂರು ರದ್ದುಪಡಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್, ಚಂಚ್ಲಾನಿ ಮತ್ತು ರಣವೀರ್ ಅಲ್ಹಾಬಾದಿಯಾ ಅವರ ಮನವಿ ಪರಿಗಣಿಸಿ ಮಹಾಲರಾಷ್ಟ್ರ ಮತ್ತು ಅಸ್ಸಾಂ ಸರ್ಕಾರಗಳಿಗೆ ನೋಟಿಸ್ ನೀಡಿತ್ತು.
ಏನಿದು ವಿವಾದ?
"ಇಂಡಿಯಾಸ್ ಗಾಟ್ ಲಾಟೆಂಟ್" ಕಾರ್ಯಕ್ರಮದಲ್ಲಿ ಅಲಹಾಬಾದಿಯಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅವರು ಪೋಷಕರ ಲೈಂಗಿಕತೆಯ ಬಗ್ಗ ಪ್ರಶ್ನೆಯೊಂದನ್ನು ಕೇಳಿ ಸಮಸ್ಯೆಗೆ ಸಿಲುಕಿದ್ದರು.
ಅಲಹಾಬಾದಿಯಾ ಬಳಿಕ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಶೋ ನಡೆಸುವ ಸಮಯ್ ರೈನಾ, ಕಾರ್ಯಕ್ರಮದಲ ಎಲ್ಲ ವಿಡಿಯೊಗಳನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿದ್ದಾರೆ.
ಈ ನಡುವೆ ಗುವಾಹಟಿ ಹೈಕೋರ್ಟ್ ಆಶಿಷ್ ಚಂಚ್ಲಾನಿಗೆ, 10 ದಿನಗಳೊಳಗೆ ತನಿಖಾಧಿಕಾರಿಗಳಿಗೆ ಹಾಜರಾಗುವಂತೆ ನಿರ್ದೇಶಿಸಿತ್ತು.