
Language Row: ತಮಿಳು ಚಿತ್ರಗಳನ್ನು ಹಿಂದಿಗೆ ಡಬ್ ಮಾಡುವುದು ಏಕೆ?; ವಿವಾದ ಸೃಷ್ಟಿಸಿದ ಪವನ್ ಕಲ್ಯಾಣ್
ಹಿಂದಿ ಮಾತನಾಡುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಕಾರ್ಮಿಕರನ್ನು ಸ್ವಾಗತಿಸುವ ತಮಿಳುನಾಡು, ಅವರ ಭಾಷೆಯನ್ನು ತಿರಸ್ಕರಿಸುವುದು "ನ್ಯಾಯಸಮ್ಮತವಲ್ಲ" ಎಂದೂ ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ನಡುವಿನ ಭಾಷಾ ಸಮರದ ಬೆಂಕಿಗೆ ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿವಾದಾತ್ಮಕ ಹೇಳಿಕೆಗಳಿಂದ ತುಪ್ಪ ಸುರಿದಿದ್ದಾರೆ. ದುಡ್ಡು ಮಾಡಲು ತಮಿಳು ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡುವ ತಮಿಳುನಾಡಿನ ನಾಯಕರು ಹಿಂದಿ ಭಾಷೆಯನ್ನು ವಿರೋಧಿಸುವುದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ತಮ್ಮ ಪಕ್ಷದ ಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ದೇಶದ ಸಮಗ್ರತೆಗೆ ತಮಿಳು ಸೇರಿದಂತೆ ಬಹು ಭಾಷೆಗಳ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
"ತಮಿಳುನಾಡಿನಲ್ಲಿ ಜನರು ಹಿಂದಿ ಹೇರಿಕೆ ವಿರೋಧಿಸುತ್ತಾರೆ. ಅವರಿಗೆ ಹಿಂದಿ ಬೇಡವೆಂದಾದರೆ, ಆರ್ಥಿಕ ಲಾಭಕ್ಕಾಗಿ ತಮಿಳು ಚಿತ್ರಗಳನ್ನು ಹಿಂದಿಗೆ ಏಕೆ ಡಬ್ ಮಾಡಬೇಕು? ಇದು ನನಗೆ ಅರ್ಥವಾಗುತ್ತಿಲ್ಲ. ಅವರಿಗೆ ಬಾಲಿವುಡ್‌ನಿಂದ ಹಣ ಬೇಕು, ಆದರೆ ಹಿಂದಿ ಬೇಡ. ಇದು ಯಾವ ರೀತಿಯ ತರ್ಕ?" ಎಂದು ಆಂಧ್ರದ ಡಿಸಿಎಂ ಪ್ರಶ್ನಿಸಿದ್ದಾರೆ.
ಹಿಂದಿ ಮಾತನಾಡುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಕಾರ್ಮಿಕರನ್ನು ಸ್ವಾಗತಿಸುವ ತಮಿಳುನಾಡು, ಅವರ ಭಾಷೆಯನ್ನು ತಿರಸ್ಕರಿಸುವುದು "ನ್ಯಾಯಸಮ್ಮತವಲ್ಲ" ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಹರಿಯಾಣ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿಗೆ ತಮಿಳುನಾಡು ನೆಲೆಯಾಗಿದೆ.
ಆದಾಯ ಬೇಕು, ಭಾಷೆ ಬೇಡ
"ತಮಿಳುನಾಡಿನವರಿಗೆ ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢದಂತಹ ಹಿಂದಿ ಭಾಷಿಕ ರಾಜ್ಯಗಳಿಂದ ಆದಾಯ ಬೇಕು. ಆದರೆ ಅವರ ಹಿಂದಿ ಬೇಡ ಎಂದು ಹೇಳುತ್ತಾರೆ. ಇದು ಅನ್ಯಾಯವಲ್ಲವೇ? ಅವರು ಬಿಹಾರದ ಕಾರ್ಮಿಕರನ್ನು ಸ್ವಾಗತಿಸುತ್ತಾರೆ, ಆದರೆ ಅವರ ಭಾಷೆಯನ್ನು ತಿರಸ್ಕರಿಸುತ್ತಾರೆ. ಈ ವಿರೋಧಾಭಾಸ ಏಕೆ? ಈ ಮನಸ್ಥಿತಿ ಬದಲಾಗಬೇಕಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಭಾಗವಾಗಿರುವ 'ತ್ರಿಭಾಷಾ ಸೂತ್ರ'ದ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಡಿಎಂಕೆ ಆಡಳಿತದ ತಮಿಳುನಾಡು ನಡುವೆ ತೀವ್ರ ವಾಗ್ವಾದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್‌ರ ಹೇಳಿಕೆ ಹೊರಬಿದ್ದಿದೆ.
ಎನ್ಇಪಿಯನ್ನು ಜಾರಿ ಮಾಡಲು ತಮಿಳುನಾಡು ನಿರಾಕರಿಸಿದ ಕಾರಣ, ರಾಜ್ಯದ ಸಮಗ್ರ ಶಿಕ್ಷಣ ಯೋಜನೆಗೆ ಮೀಸಲಾಗಿದ್ದ 2,152 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ತಡೆಹಿಡಿದಿದೆ ಎನ್ನುವುದು ಡಿಎಂಕೆ ಆರೋಪವಾಗಿದೆ. ಇದರ ನಂತರ ಈ ವಿವಾದ ಉಲ್ಬಣಗೊಂಡಿದೆ. ತಮಿಳುನಾಡು ದೀರ್ಘಕಾಲದಿಂದಲೂ 'ತ್ರಿಭಾಷಾ ಸೂತ್ರ'ವನ್ನು ವಿರೋಧಿಸಿಕೊಂಡು ಬಂದಿದೆ. ಇದು ರಾಜ್ಯದ ಮೇಲೆ ಹಿಂದಿ ಹೇರುವ ಪ್ರಯತ್ನ ಎಂದು ಆರೋಪಿಸಿದೆ. ಆದರೆ, ಈ ನೀತಿಯು ಎಲ್ಲ ಯುವಜನರಿಗೂ ಉದ್ಯೋಗ ಸಿಗುವುದನ್ನು ಖಚಿತಪಡಿಸುವ ಸದ್ದುದ್ದೇಶ ಹೊಂದಿದೆ ಎನ್ನುವುದು ಕೇಂದ್ರ ಸರ್ಕಾರದ ಸಮರ್ಥನೆಯಾಗಿದೆ.
ಈ ಭಾಷಾ ವಿವಾದವು ದೇಶದ ಭಾಷಿಕ ಸಮಸ್ಯೆಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ, ರಾಜ್ಯಗಳ ನಡುವಿನ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂಬ ಸಂದೇಶವನ್ನು ಈ ಘಟನೆ ನೀಡುತ್ತದೆ.