
ಮೈಕ್ರೋಸಾಫ್ಟ್‌ನಿಂದ 9,000ಕ್ಕೂ ಹೆಚ್ಚು ಉದ್ಯೋಗಿಗಳ ವಜಾ: ವರ್ಷದ 2ನೇ ಸುತ್ತಿನ ಸಾಮೂಹಿಕ ಕಡಿತ
ಈ ಹಿಂದೆ ಜುಲೈ ತಿಂಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯನ್ನು ಮೈಕ್ರೋಸಾಫ್ಟ್ ರೂಪಿಸಿದೆ ಎಂದು ವರದಿಯಾಗಿತ್ತು.
ಐಟಿ ಕ್ಷೇತ್ರದ ದೈತ್ಯ ಕಂಪನಿ ಮೈಕ್ರೋಸಾಫ್ಟ್ ತನ್ನ ಇತ್ತೀಚಿನ ಸುತ್ತಿನ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿ 9,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ. ವೆಚ್ಚ ನಿಯಂತ್ರಣ ಮತ್ತು ಕಾರ್ಯಾಚರಣೆಗಳನ್ನು ಸರಳೀಕರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲೇ ಈ ಉದ್ಯೋಗ ಕಡಿತವನ್ನು ಘೋಷಿಸುವ ನಿರೀಕ್ಷೆಯಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಈ ಎರಡನೇ ಸುತ್ತಿನ ಉದ್ಯೋಗ ಕಡಿತವು ಮೈಕ್ರೋಸಾಫ್ಟ್‌ನ ಒಟ್ಟು ಕಾರ್ಯಪಡೆಯ ಶೇಕಡಾ 4ರಷ್ಟನ್ನು ಒಳಗೊಂಡಿರಲಿದೆ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಈ ಕಡಿತವು ವಿವಿಧ ತಂಡಗಳು, ಭೌಗೋಳಿಕ ಪ್ರದೇಶಗಳು ಮತ್ತು ಹುದ್ದೆಯ ಅವಧಿಗಳಾದ್ಯಂತ ಜಾರಿಗೆ ಬರಲಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ನಿರ್ವಹಣಾ ಸ್ತರಗಳ ಕಡಿತವೇ ಪ್ರಮುಖ ಗುರಿ
ಕಂಪನಿಯ ವಕ್ತಾರರ ಪ್ರಕಾರ, ಈ ಉದ್ಯೋಗ ಕಡಿತದ ಮುಖ್ಯ ಪ್ರಾಜೆಕ್ಟ್ಗಳನ್ನು ಸುಗಮಗೊಳಿಸುವುದು ಮತ್ತು ನಿರ್ವಹಣಾ ಸ್ತರಗಳನ್ನು ಕಡಿಮೆ ಮಾಡುವುದು. " ಜಾಗತಿಕ ಮಾರುಕಟ್ಟೆಯಲ್ಲಿ ಕಂಪನಿಯನ್ನು ಯಶಸ್ವಿಗೊಳಿಸಲು ಅಗತ್ಯ ಸಾಂಸ್ಥಿಕ ಬದಲಾವಣೆಗಳನ್ನು ನಾವು ಜಾರಿಗೊಳಿಸುತ್ತಿದ್ದೇವೆ" ಎಂದು ವಕ್ತಾರರು ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.
ಮಾರ್ಕೆಟಿಂಗ್ ವಿಭಾಗಕ್ಕೆ ಸಮಸ್ಯೆ
ಈ ಹಿಂದೆ ಜುಲೈ ತಿಂಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯನ್ನು ಮೈಕ್ರೋಸಾಫ್ಟ್ ರೂಪಿಸಿದೆ ಎಂದು ವರದಿಯಾಗಿತ್ತು. ಈ ಸುತ್ತಿನ ಕಡಿತದಲ್ಲಿ ಮಾರಾಟಗಾರರು (Vendors) ಮತ್ತು ಎಕ್ಸ್ಬಾಕ್ಸ್ ವಿಭಾಗದ ಉದ್ಯೋಗಿಗಳು ಹೆಚ್ಚಾಗಿ ಗುರಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ, ಮೇ ತಿಂಗಳಲ್ಲಿ ಕಂಪನಿಯು ಈಗಾಗಲೇ 6,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು, ಇದರಲ್ಲಿ ಪ್ರಾಡಕ್ಟ್ ಮತ್ತು ಎಂಜಿನಿಯರಿಂಗ್ ಹುದ್ದೆಗಳು ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರಿದ್ದವು.
ಮೈಕ್ರೋಸಾಫ್ಟ್‌ನ ಈ ನಿರಂತರ ಉದ್ಯೋಗ ಕಡಿತದ ಕ್ರಮವು ಜಾಗತಿಕ ಐಟಿ ಉದ್ಯಮದಲ್ಲಿ ಹೆಚ್ಚುತ್ತಿರುವ ವೆಚ್ಚ ಕಡಿತ ಮತ್ತು ಸಾಂಸ್ಥಿಕ ರಚನೆಯ ಬದಲಾವಣೆಗಳ ಪ್ರವೃತ್ತಿಯ ಭಾಗವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದು ಆರ್ಥಿಕ ಅನಿಶ್ಚಿತತೆ ಮತ್ತು ತಂತ್ರಜ್ಞಾನ ವಲಯದಲ್ಲಿನ ವೇಗದ ಬದಲಾವಣೆಗಳಿಗೆ ಕಂಪನಿಗಳು ಪ್ರತಿಕ್ರಿಯಿಸುವ ವಿಧಾನವನ್ನು ಸೂಚಿಸುತ್ತದೆ.