ಮೇಕೆದಾಟು ಯೋಜನೆ: ತಮಿಳುನಾಡು ವಿಧಾನಸಭೆಯಲ್ಲಿ ಚರ್ಚೆ, ಎಐಎಡಿಎಂಕೆ ಸಭಾತ್ಯಾಗ
ಚೆನ್ನೈ, ಫೆ 22 - ಇತ್ತೀಚೆಗೆ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದ ಮೇಕೆದಾಟು ಅಣೆಕಟ್ಟು ಪ್ರಸ್ತಾವನೆಯ ಕುರಿತು ಚರ್ಚೆ ನಡೆಸಿದ್ದನ್ನು ವಿರೋಧಿಸಿ ತಮಿಳುನಾಡಿನ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಮಂಗಳವಾರ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿತು.
ಜಲಸಂಪನ್ಮೂಲ ಸಚಿವ ದುರೈಮುರುಗನ್ ಅವರ ಉತ್ತರ ಸಮಾಧಾನ ತಂದಿಲ್ಲ ಎಂದು ಹೇಳಿ ಪ್ರತಿಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಸದಸ್ಯರು ಸಭಾತ್ಯಾಗ ನಡೆಸಿದರು.
ಶೂನ್ಯವೇಳೆಯಲ್ಲಿ, ಪಳನಿಸ್ವಾಮಿ ಅವರು ಗಮನ ಸೆಳೆಯುವ ಪ್ರಸ್ತಾಪವನ್ನು ಮಂಡಿಸಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 28ನೇ ಸಭೆಯಲ್ಲಿ (ಫೆ.1 ರಂದು), ಕರ್ನಾಟಕದ ಉದ್ದೇಶಿತ ಮೇಕೆದಾಟು ಅಣೆಕಟ್ಟು ಯೋಜನೆಯ ಪ್ರಸ್ತಾವನೆಯನ್ನು ಚರ್ಚೆಗೆ ತೆಗೆದುಕೊಂಡಿರುವುದು ಆತಂಕದ ವಿಷಯವಾಗಿದೆ. ಆದಾಗ್ಯೂ, ಚರ್ಚೆಯ ಕುರಿತ ಹೆಚ್ಚಿನ ವಿವರಗಳು ತಿಳಿದಿಲ್ಲ ಎಂದು ಹೇಳಿದರು.
ಪ್ರತಿಪಕ್ಷ ನಾಯಕರಿಗೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ದುರೈಮುರುಗನ್, ಫೆ.1ರಂದು ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಕುರಿತು ಚರ್ಚೆಯನ್ನು ಕಾರ್ಯದರ್ಶಿ (ಜಲ ಸಂಪನ್ಮೂಲ) ಮಟ್ಟದ ತಮಿಳುನಾಡಿನ ಹಿರಿಯ ಅಧಿಕಾರಿಯೊಬ್ಬರು ವಿರೋಧಿಸಿದ್ದಾರೆ ಎಂದು ಹೇಳಿದರು.
ಈ ವಿಷಯವಾಗಿ ತಮಿಳುನಾಡು ಸಲ್ಲಿಸಿರುವ ನಾಲ್ಕು ಪ್ರಕರಣಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ ಎಂದು ಆ ಅಧಿಕಾರಿ ಸಭೆಯ ಗಮನ ಸೆಳೆದರು ಎಂದು ಸದನಕ್ಕೆ ಮಾಹಿತಿ ನೀಡಿದ ಸಚಿವರು, ಸಭೆಯ ಚರ್ಚೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ತಮಿಳುನಾಡು ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಹೇಳಿದರು.
ಈ ವಿಷಯದ ಬಗ್ಗೆ ಚರ್ಚಿಸಲು ಪ್ರಾಧಿಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಪಳನಿಸ್ವಾಮಿ, ಎಐಎಡಿಎಂಕೆ ಆಡಳಿತದಲ್ಲಿ, ಮೇಕೆದಾಟು ಕುರಿತು ಇಂತಹ ಚರ್ಚೆಗೆ ತಮಿಳುನಾಡು ಸರ್ಕಾರವು ಅವಕಾಶ ನೀಡಿರಲಿಲ್ಲ ಎಂದು ಹೇಳಿದರು.
ಈ ಸಂಬಂಧ ‘ಅಮ್ಮನ ಸರ್ಕಾರ’ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಆದರೆ, ಇದೀಗ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೂ ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಳನಿಸ್ವಾಮಿ, ಮೇಕೆದಾಟು ಕುರಿತು 'ಚರ್ಚೆ' ಕೈಗೆತ್ತಿಕೊಂಡ ಕಾವೇರಿ ಪ್ರಾಧಿಕಾರದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸುವಂತೆ ಒತ್ತಾಯಿಸಿದರು. ಅಲ್ಲದೆ, ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ಮೊರೆ ಹೋಗಬೇಕು ಎಂದೂ ಆಗ್ರಹಿಸಿದರು.
ಪ್ರಾಧಿಕಾರ ಅಣೆಕಟ್ಟು ಪ್ರಸ್ತಾವನೆಯ ಕುರಿತು ಈಗಾಗಲೇ ಕೇಂದ್ರ ಜಲ ಆಯೋಗದ ಮಧ್ಯಪ್ರವೇಶಕ್ಕೆ ಕೋರಿದೆ. ಈ ನಡುವೆ ಕರ್ನಾಟಕದ ಅಣೆಕಟ್ಟು ಪ್ರಸ್ತಾವನೆಗೆ ಸಂಬಂಧಪಟ್ಟ ಪ್ರಾಧಿಕಾರ ಅನುಮತಿ ನೀಡಿದರೆ ಎಂತಹ ಅನಾಹುತವಾಗಲಿದೆ ಎಂಬುದು ಗೊತ್ತೆ? ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, ನೆರೆಯ ರಾಜ್ಯ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದೆ ಎಂಬ ಬಗ್ಗೆಯೂ ಸದನದ ಗಮನ ಸೆಳೆದರು.
ಆದರೆ, ಯೋಜನೆಗೆ ಸುಪ್ರೀಂ ಕೋರ್ಟ್ ಯಾವುದೇ ನಿಷೇಧ ಹೇರಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿ ಕರ್ನಾಟಕದ ಅಧಿಕಾರಿ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳಲು ಕೋರಿದ್ದರು. ಆದರೆ, ಕೇಂದ್ರ ಜಲ ಆಯೋಗ, ಕೇರಳ ಮತ್ತು ನೆರೆಯ ಪುದುಚೇರಿಯ ಪ್ರತಿನಿಧಿಗಳು ಮೇಕೆದಾಟು ಯೋಜನೆ ಕುರಿತು ಯಾವುದೇ ಚರ್ಚೆ ನಡೆಸುವಂತಿಲ್ಲ ಎಂದು ತಮ್ಮ ವಿರೋಧ ದಾಖಲಿಸಿದ್ದಾರೆ. ಕರ್ನಾಟಕ ಮಾತ್ರ ವಿಷಯವನ್ನು (ಅಣೆಕಟ್ಟು ಯೋಜನೆ ಪ್ರಸ್ತಾವನೆ) ಚರ್ಚೆಗೆ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಅವರ ಅಭಿಪ್ರಾಯಗಳನ್ನು ಆಲಿಸಿದ ಪ್ರಾಧಿಕಾರದ ಅಧ್ಯಕ್ಷರು, ಮೇಕೆದಾಟು ಅಣೆಕಟ್ಟು ಪ್ರಸ್ತಾಪವನ್ನು ಚರ್ಚೆಗೆ ತೆಗೆದುಕೊಳ್ಳಬೇಕಾಗಿಲ್ಲ ಮತ್ತು ವಿಷಯವನ್ನು ಕೇಂದ್ರ ಜಲ ಆಯೋಗಕ್ಕೆ ವಾಪಸ್ ಸಲ್ಲಿಸಬಹುದು ಎಂದು ಹೇಳಿದರು.
ಪ್ರಾಧಿಕಾರದ ಸಭೆಯ ಅಜೆಂಡಾದಲ್ಲಿ ಮೇಕೆದಾಟು ವಿಷಯವೇ ಇರಲಿಲ್ಲ. ಆದರೆ ಅಜೆಂಡಾಕ್ಕೆ ಹೊರತಾಗಿ ಆ ಬಗ್ಗೆ ಚರ್ಚೆ ನಡೆದಿದೆ. 'ವಿವಿಧ ತಾಂತ್ರಿಕ ಮತ್ತು ಆರ್ಥಿಕ ಅಂಶಗಳನ್ನು ಪರಿಶೀಲಿಸಲು ಮತ್ತು ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು' ವಿಷಯವನ್ನು ಕೇಂದ್ರ ಜಲ ಆಯೋಗಕ್ಕೆ ರವಾನಿಸಲಾಗುತ್ತಿದೆ ಎಂದು ಸಭೆಯ ಕಾರ್ಯಸೂಚಿಯಲ್ಲಿ ಹೇಳಿದೆ. ಇದು ಸರಿಯಲ್ಲ ಎಂದು ದುರೈಮುರುಗನ್ ಹೇಳಿದರು. ಸಭೆಯ ವಿವರಗಳನ್ನು ಪಡೆದ ಬಳಿಕ ತಮಿಳುನಾಡು ಸರ್ಕಾರ, ಮೇಕೆದಾಟು ಅಣೆಕಟ್ಟು ಪ್ರಸ್ತಾವನೆಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸುವ ಪ್ರಾಧಿಕಾರದ ನಿರ್ಧಾರವನ್ನು ವಿರೋಧಿಸಿದೆ ಎಂದೂ ಹೇಳಿದರು.
ತಮಿಳುನಾಡು ಸರ್ಕಾರ, ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ಪತ್ರ ಬರೆದಿದೆ. ಯೋಜನೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ. ಈ ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿಲ್ಲ ಮತ್ತು ಕರ್ನಾಟಕವು ನದಿ ತೀರದ ಇತರ ರಾಜ್ಯಗಳ ಒಪ್ಪಿಗೆ ಪಡೆದಿಲ್ಲ. ಇಂತಹ ಎಲ್ಲಾ ಅಂಶಗಳನ್ನು ರಾಜ್ಯವು ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಬರೆದ ಪತ್ರಗಳಲ್ಲಿ ಸ್ಪಷ್ಟಪಡಿಸಿದೆ. ಅಲ್ಲದೆ, ಕೇವಲ ಕೇಂದ್ರ ಜಲ ಆಯೋಗಕ್ಕೆ ವಿಷಯವನ್ನು ಉಲ್ಲೇಖಿಸುವುದರಿಂದ, ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು. ತಮಿಳುನಾಡಿನ ಒಪ್ಪಿಗೆ ಪಡೆಯದೆ ಮೇಕೆದಾಟು ಯೋಜನೆಗೆ ‘ಒಂದು ಇಟ್ಟಿಗೆ ಕೂಡ ಹಾಕುವಂತಿಲ್ಲ’ ಎಂದು ಸಚಿವರು ಖಡಾಖಂಡಿತವಾಗಿ ಹೇಳಿದರು.
ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ತಮಿಳುನಾಡಿನಲ್ಲಿ ಹುಟ್ಟಿದ ಯಾರೂ ಅಣೆಕಟ್ಟು ಕಟ್ಟಲು ಒಪ್ಪಿಗೆ ನೀಡುವುದಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷವಾದ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯಿಸಿದ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ಗೆ ಪ್ರತಿಕ್ರಿಯಿಸಿದ ಸಚಿವರು, "ಮಾತುಕತೆಗೆ ಹೋಗದೇ ಇರುವುದೇ ನಮ್ಮ ತಂತ್ರವಾಗಿದೆ. ನಾವು ಮಾತನಾಡಿ, ಚರ್ಚಿಸಿ ಫಲವಿಲ್ಲ ಎಂದು ಕಂಡುಕೊಂಡಿದ್ದೇವೆ" ಎಂದು ಹೇಳಿದರು. ಕರ್ನಾಟಕದೊಂದಿಗೆ ಮಾತುಕತೆ ನಡೆಸಿದ ನಂತರವೇ ಕಾವೇರಿ ನ್ಯಾಯಾಧಿಕರಣ ಸ್ಥಾಪಿಸಲಾಗಿದೆ ಎಂದರು.
ಎಐಎಡಿಎಂಕೆ ಆಡಳಿತದಲ್ಲಿ, ಕಾವೇರಿ ಪ್ರಾಧಿಕಾರಕ್ಕೆ ಅಧ್ಯಕ್ಷರೇ ಇರಲಿಲ್ಲ ಮತ್ತು ಅಂತಹ ಯಾವುದೇ ಸಭೆಗಳು ನಡೆದಿಲ್ಲ. ಡಿಎಂಕೆ ಆಡಳಿತವು ಈ ವಿಷಯವನ್ನು ಕೈಗೆತ್ತಿಕೊಂಡ ನಂತರವೇ ಅದಕ್ಕೆ ಕೇಂದ್ರದಿಂದ ಅಧ್ಯಕ್ಷರನ್ನು ಹೆಸರಿಸಲಾಯಿತು.
ಸಚಿವರ ಈ ಮಾತನ್ನು ವಿರೋಧಿಸಿದ ಪಳನಿಸ್ವಾಮಿ, ಮೇಕೆದಾಟು-ಕಾವೇರಿ ವಿಚಾರವಾಗಿ 22 ದಿನಗಳ ಹಿಂದೆ ತಮ್ಮ ಪಕ್ಷ ಸಂಸತ್ತಿನ ಕಲಾಪವನ್ನು ಸ್ಥಗಿತಗೊಳಿಸಿತ್ತು ಎಂದರು. ಅಲ್ಲದೆ, ಸಚಿವರ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕರು ಸಭಾತ್ಯಾಗ ಮಾಡಿದರು.