
ಬಸ್‌ನಲ್ಲಿ ʻಅಸಭ್ಯ ವರ್ತನೆʼ ಆರೋಪ- ವಿಡಿಯೋ ವೈರಲ್ ಬೆನ್ನಲ್ಲೇ ವ್ಯಕ್ತಿ ಆತ್ಮಹತ್ಯೆ
ಕೇರಳದ ಕೋಯಿಕ್ಕೋಡ್‌ನಲ್ಲಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ನಂತರ 42 ವರ್ಷದ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸ್‌ನಲ್ಲಿ ಸಂಭವಿಸಿದ ಸಣ್ಣ ಸ್ಪರ್ಶವನ್ನು "ಲೈಂಗಿಕ ದೌರ್ಜನ್ಯ" ಎಂದು ಕರೆದು ಮಹಿಳೆಯೊಬ್ಬರು ಹಂಚಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ,ಆ ವ್ಯಕ್ತಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವ ಭರದಲ್ಲಿ ಅಮಾಯಕನ ಬಲಿ ಪಡೆಯಲಾಗಿದೆಯೇ ಎಂಬ ಗಂಭೀರ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯ ಕಿಡಿ ಹೊತ್ತಿಸಿದೆ.
ಏನಿದು ಘಟನೆ?
ಕೇರಳದ ಕೋಯಿಕ್ಕೋಡ್ ನಿವಾಸಿ, 42 ವರ್ಷದ ಯು. ದೀಪಕ್ ಎಂಬುವವರು ಜನವರಿ 18ರ ಭಾನುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂಬ ಆರೋಪ ಅವರ ಮೇಲೆ ಕೇಳಿಬಂದಿತ್ತು. ಈ ಘಟನೆಯ ವಿಡಿಯೋವನ್ನು ಶಿಮ್‌ಜಿತಾ ಎಂಬ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ವೈರಲ್ ಆಗಿರುವ ವಿಡಿಯೋ
ವಿಡಿಯೋದಲ್ಲಿ ದೀಪಕ್ ಅವರ ಮೊಣಕೈ ಮಹಿಳೆಗೆ ತಗುಲಿರುವುದು ಕಂಡುಬಂದಿತ್ತು. ಶಿಮ್‌ಜಿತಾ ಅವರು ಇದು "ಲೈಂಗಿಕ ಗಡಿ ಉಲ್ಲಂಘನೆ" ಎಂದು ಆರೋಪಿಸಿದರೆ, ವಿಡಿಯೋ ನೋಡಿದ ಅನೇಕರು ಬಸ್‌ನಲ್ಲಿ ಜನದಟ್ಟಣೆ ಇದ್ದ ಕಾರಣ ಅದು ಸಹಜವಾಗಿ ಸಂಭವಿಸಿದ ಸ್ಪರ್ಶ ಎಂದು ಅಭಿಪ್ರಾಯಪಟ್ಟಿದ್ದರು.
ವಿಡಿಯೋ ವೈರಲ್ ಆದ ನಂತರ ದೀಪಕ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಜನವರಿ 18ರಂದು ಅವರು ತಮ್ಮ ಕೊಠಡಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಈ ಸಾವು ಕೇರಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ದೀಪಕ್ ವಿರುದ್ಧ ಸುಳ್ಳು ಆರೋಪ
ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಪ್ರಚಾರಕ್ಕಾಗಿ ಅಥವಾ ಅವಸರದ ನಿರ್ಧಾರದಿಂದ ಮಹಿಳೆಯರು ಇಂತಹ ಆರೋಪಗಳನ್ನು ಮಾಡುವುದರಿಂದ ಅಮಾಯಕರ ಜೀವನ ಹಾಳಾಗುತ್ತಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಅವರು ಈ ಘಟನೆಯನ್ನು ಖಂಡಿಸಿದ್ದು, ಶಿಮ್‌ಜಿತಾ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದೀಪಕ್ ಅವರ ಕುಟುಂಬಕ್ಕೆ ನೆರವು ನೀಡುವುದಾಗಿ ಅವರು ತಿಳಿಸಿದ್ದಾರೆ.
ಪೊಲೀಸ್ ತನಿಖೆ
ಕೋಯಿಕ್ಕೋಡ್ ಪೊಲೀಸರು ಈ ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದಾರೆ. ಘಟನೆಯ ಸುತ್ತಲಿರುವ ಎಲ್ಲಾ ಆಯಾಮಗಳನ್ನು ತನಿಖೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ದೀಪಕ್ ಅವರ ಕುಟುಂಬವು ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.

