Bengaluru Aero Show | ಏರೋ ಶೋ ಆರಂಭ; ಗಮನ ಸೆಳೆಯಲಿವೆ ರಾಫೇಲ್, ಸುಖೋಯ್​
x
ಏರ್​ಶೋ ಪ್ರದರ್ಶನದ ನೋಟ.

Bengaluru Aero Show | ಏರೋ ಶೋ ಆರಂಭ; ಗಮನ ಸೆಳೆಯಲಿವೆ ರಾಫೇಲ್, ಸುಖೋಯ್​

Bengaluru Aero Show: 2025ರ ಏರೋ ಇಂಡಿಯಾ ಒಂದು ವಾರದ ಕಾರ್ಯಕ್ರಮವಾಗಿದೆ. ಐದು ದಿನ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಮೊದಲ ಎರಡು ದಿನ ವಾಣಿಜ್ಯ ಹಾಗೂ ರಕ್ಷಣಾ ಉಪಕರಣ ತಯಾರಕರಿಗೆ ಮೀಸಲಾಗಿದ್ದು, ನಂತರದ ದಿನಗಳಲ್ಲಿ ಸಾರ್ವಜನಿಕರಿಗೆ ಅವಕಾಶವಿದೆ.


ಬೆಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ, ಯಲಹಂಕ ವಾಯುನೆಲೆಯಲ್ಲಿ 15ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ (Bengaluru Aero Show) ಉದ್ಘಾಟಿಸಿದರು. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಏರೋ ಶೋದಲ್ಲಿ1,000ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದು, ಫೆಬ್ರವರಿ 14ರಂದು ಅಂತ್ಯಗೊಳ್ಳಲಿದೆ. ರಕ್ಷಣಾ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರ ಹೇಳಿಕೆಯ ಪ್ರಕಾರ, ಈ ಶೋನಲ್ಲಿ 90 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.



ಮತ್ತೊಂದು ಮಹಾ ಕುಂಭ

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ''ಏರೋ ಮತ್ತೊಂದು ಮಹಾ ಕುಂಭ'' ಎಂದು ಬಣ್ಣಿಸಿದರು. ''ಈ ಶೋನ ಪ್ರಮುಖ ಉದ್ದೇಶವೇ ವಿದೇಶಿ ರಾಷ್ಟ್ರಗಳೊಂದಿಗೆ ಸಂಬಂಧ ಬಲಪಡಿಸುವುದು. 'ಜಾಗತಿಕ ಮಟ್ಟದಲ್ಲಿ ಅನಿಶ್ಚಿತ ಪರಿಸ್ಥಿತಿಗಳಿರುವ ಈ ಸಮಯದಲ್ಲಿಯೂ, ಭಾರತ ಶಾಂತಿ ಮತ್ತು ಸಮೃದ್ಧಿಯ ನೆಲೆಯಾಗಿದೆ,'' ಎಂಬುದನ್ನು ಈ ಪ್ರದರ್ಶನ ಸಾಬೀತುಪಡಿಸಲಿದೆ ಎಂದು ಹೇಳಿದರು.

ಈ ಬಾರಿಯದ್ದು ಇತಿಹಾಸದಲ್ಲೇ ಅತಿ ದೊಡ್ಡ ಪ್ರದರ್ಶನವಾಗಿದ್ದು ರಾಫೇಲ್, ಸುಖೋಯ್ ಮತ್ತು ಅಮೇರಿಕಾದ ಎಫ್-35 ಪ್ರಮುಖ ಆಕರ್ಷಣೆಯಾಗಿರಲಿದೆ. ರಕ್ಷಣಾ ಉಪಕರಣ ತಯಾರಕರ ಹೊರತಾಗಿ, ಸಾರ್ವಜನಿಕರು ಸಹ ಈ ಅದ್ಭುತ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಬಹುದು.

90ಕ್ಕೂ ಹೆಚ್ಚು ದೇಶಗಳು ಭಾಗಿ

90 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯದ ಮೇಲಿನ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿ ಎಂದು ರಾಜ್​ನಾಥ್​ ಸಿಂಗ್ ಹೇಳಿದ್ದಾರೆ.

"ಸುಮಾರು 30 ದೇಶಗಳ ರಕ್ಷಣಾ ಸಚಿವರು ಅಥವಾ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾರೆ. 43 ದೇಶಗಳ ವಾಯುಪಡೆಯ ಮುಖ್ಯಸ್ಥರು ಮತ್ತು ಕಾರ್ಯದರ್ಶಿಗಳು ಭೇಟಿ ನೀಡುತ್ತಾರೆ. ಈ ಪ್ರದರ್ಶನ ಕೇವಲ ಭಾರತಕ್ಕಷ್ಟೇ ಅಲ್ಲ, ಅಂತಾರಾಷ್ಟ್ರೀಯ ರಕ್ಷಣಾ ಸಮುದಾಯಕ್ಕೆ ಸೇರಿದ್ದು ," ಎಂದು ಅವರು ಹೇಳಿದರು.

ಪ್ರಮುಖ ಆಕರ್ಷಣೆಗಳು

ಏರೋ ಇಂಡಿಯಾ ಒಂದು ಎರಡು ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮವಾಗಿದ್ದು, 1996ರಲ್ಲಿ ಬೆಂಗಳೂರು ಯಲಹಂಕ ವಾಯುನೆಲೆಯಲ್ಲಿ ಮೊದಲ ಬಾರಿ ಆಯೋಜಿಸಲಾಗಿತ್ತು.

2025ರ ಏರೋ ಇಂಡಿಯಾ ಒಂದು ವಾರದ ಕಾರ್ಯಕ್ರಮವಾಗಿದೆ. ಐದು ದಿನ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಮೊದಲ ಎರಡು ದಿನ ವಾಣಿಜ್ಯ ಹಾಗೂ ರಕ್ಷಣಾ ಉಪಕರಣ ತಯಾರಕರಿಗೆ ಮೀಸಲಾಗಿದ್ದು, ನಂತರದ ದಿನಗಳಲ್ಲಿ ಸಾರ್ವಜನಿಕರಿಗೆ ಅವಕಾಶವಿದೆ. ಪ್ರತಿದಿನ ಎರಡು ವೈಮಾನಿಕ ಪ್ರದರ್ಶನಗಳು ನಡೆಯಲಿವೆ. ನಾನಾ ವಿಮಾನಗಳು ಕಸರತ್ತು ಮಾಡಲಿವೆ.

ವೀಕ್ಷಕರಿಗೆ ಮುನ್ನೆಚ್ಚರಿಕೆ

ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿದ ಸಲಹೆಯ ಪ್ರಕಾರ, ಫೆಬ್ರವರಿ 14 (ಶುಕ್ರವಾರ) ವರೆಗೆ ಪ್ರತಿದಿನ ಬೆಳಿಗ್ಗೆ 5ರಿಂದ ರಾತ್ರಿ 10 ವರೆಗೆ ವಾಯು ಪ್ರದರ್ಶನ ನಡೆಯುವ ಪ್ರದೇಶದ ಸುತ್ತಲಿನ ಕೆಲವು ರಸ್ತೆಗಳ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮುಖ್ಯ ಮಾರ್ಗಗಳಲ್ಲಿ ಲಾರಿಗಳು, ಇತರ ಭಾರಿ ವಾಹನಗಳು ಮತ್ತು ಖಾಸಗಿ ಕಾರುಗಳ ಪ್ರವೇಶ ನಿರ್ಬಂಧಿಸಲಾಗಿದೆ. ಗುರುತು ಪಟ್ಟಿ (ID Proof) ಇದ್ದವರಿಗೆ ಮಾತ್ರ ಪ್ರವೇಶ ಅವಕಾಶವಿದೆ.

Read More
Next Story