ಸೋನಮ್ ವಾಂಗ್ಚುಕ್, ಇತರರಿಂದ ಠಾಣೆಗಳಲ್ಲಿ ನಿರಶನ
x

ಸೋನಮ್ ವಾಂಗ್ಚುಕ್, ಇತರರಿಂದ ಠಾಣೆಗಳಲ್ಲಿ ನಿರಶನ

ಒಂದು ತಿಂಗಳ ಹಿಂದೆ ಲೇಹ್‌ನಿಂದ ಆರಂಭವಾದ 'ದೆಹಲಿ ಚಲೋ ಪಾದಯಾತ್ರೆ'ಯನ್ನು ವಾಂಗ್‌ಚುಕ್ ಮುನ್ನಡೆಸುತ್ತಿದ್ದರು. ಅವರು ಮತ್ತು ಲಡಾಖಿನ ಸುಮಾರು 120 ಜನರನ್ನು ಸೋಮವಾರ ರಾತ್ರಿ ಬಂಧಿಸಲಾಯಿತು.


ದೆಹಲಿ ಗಡಿಯಲ್ಲಿ ಬಂಧಿಸಲ್ಪಟ್ಟ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ಇತರರು ಪೊಲೀಸ್ ಠಾಣೆಗಳಲ್ಲಿ ಮಂಗಳವಾರ (ಅಕ್ಟೋಬರ್ 1)ದಿಂದ ಅನಿರ್ದಿಷ್ಟಾವಧಿ ನಿರಶನ ಆರಂಭಿಸಿದ್ದಾರೆ.

ಒಂದು ತಿಂಗಳ ಹಿಂದೆ ಲೇಹ್‌ನಿಂದ ಪ್ರಾರಂಭವಾದ ʻದೆಹಲಿ ಚಲೋ ಪಾದಯಾತ್ರೆʼ ಅನ್ನು ವಾಂಗ್‌ಚುಕ್ ಮುನ್ನಡೆಸುತ್ತಿದ್ದರು. ಅವರು ಮತ್ತು ಲಡಾಖ್‌ನ ಸುಮಾರು 120 ಜನರನ್ನು ಸೋಮವಾರ ರಾತ್ರಿ (ಸೆಪ್ಟೆಂಬರ್ 30) ಬಂಧಿಸಲಾಯಿತು.

ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕೆ ಒತ್ತಾಯಿಸಿ, ಅದನ್ನು ಸಂವಿಧಾನದ ಆರನೇ ಪರಿಶಿಷ್ಟದಡಿ ಸೇರಿಸಸಬೇಕೆಂದು ಕಳೆದ ನಾಲ್ಕು ವರ್ಷಗಳಿಂದ ಆಂದೋಲನ ನಡೆಸುತ್ತಿರುವ ಲೆಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ), ಈ ಜಾಥಾ ಆಯೋಜಿಸಿದ್ದವು. ಲಡಾಖ್‌ಗೆ ಲೋಕ ಸೇವಾ ಆಯೋಗದ ಮೂಲಕ ನೇಮಕ ಪ್ರಕ್ರಿಯೆ ಆರಂಭ ಮತ್ತು ಲೇಹ್ ಹಾಗೂ ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭೆ ಸ್ಥಾನಗಳು ಜಾಥಾದ ಬೇಡಿಕೆಯಾಗಿವೆ.

ದೆಹಲಿ ಗಡಿಯಲ್ಲಿ ಬಂಧನ: ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಗಡಿಯಲ್ಲಿ ಬಂಧಿಸಿ, ಬವಾನಾ, ನರೇಲಾ ಇಂಡಸ್ಟ್ರಿಯಲ್ ಏರಿಯಾ ಮತ್ತು ಅಲಿಪುರ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʻಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 163ರಡಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ನಿಷೇಧಿಸಿ ರುವುದರಿಂದ, ಹಿಂತಿರುಗಬೇಕೆಂದು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆವು. ಆದರೆ, ಅವರು ಅಚಲರಾಗಿದ್ದರು,ʼ ಎಂದು ಅಧಿಕಾರಿ ಹೇಳಿದರು.

ವಾಂಗ್ಚುಕ್ ಅವರನ್ನು ಬವಾನಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಮತ್ತು ಅವರಿಗೆ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಗುಂಪಿನ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

ಠಾಣೆಗಳಲ್ಲಿ ನಿರಶನ: ಕಾರ್ಯಕರ್ತರು ಮತ್ತು ಇತರರು ಠಾಣೆಗಳಲ್ಲಿ ನಿರಶನ ಆರಂಭಿಸಿದ್ದಾರೆ ಎಂದು ಪ್ರತಿನಿಧಿ ಹೇಳಿದರು. ವಾಂಗ್‌ಚುಕ್ ಮತ್ತು ಗುಂಪಿನ ಇತರ ಸದಸ್ಯರು ಅನುಮತಿ ಕೋರಿದ್ದರು; ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಮೇಲ್ ಮಾಡಿದ್ದರು. ಆದರೆ, ಆ ಮಾಹಿತಿಯನ್ನು ಪ್ರತಿಭಟನಾಕಾರರನ್ನು ಬಂಧಿಸಲು ಬಳಸಲಾಗಿದೆ ಎಂದು ಪ್ರತಿನಿಧಿ ಹೇಳಿದ್ದಾರೆ.

ಬಂಧಿತರಲ್ಲಿ ಸುಮಾರು 30 ಮಹಿಳೆಯರಿದ್ದು, ಅವರನ್ನು ಪುರುಷರೊಂದಿಗೆ ಇರಿಸಲಾಗಿದೆ ಎಂದು ಲಡಾಖ್ ಸಂಸದ ಮೊಹಮ್ಮದ್ ಹನೀಫಾ ಹೇಳಿದ್ದಾರೆ. ಮಹಿಳಾ ಪ್ರತಿಭಟನಾಕಾರರನ್ನು ಬಂಧಿಸಿಲ್ಲ ಎಂದು ದೆಹಲಿ ಪೊಲೀಸರು ಸೋಮವಾರ ರಾತ್ರಿ ಹೇಳಿದ್ದರು.

ʻಲಡಾಖಿನ ಹಲವಾರು ಜನರನ್ನು ಬಂಧಿಸಲಾಗಿದೆ. ಅವರನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ. ನಾನು ಅವರಲ್ಲಿ ಕೆಲವರನ್ನು ನಿನ್ನೆ ತಡರಾತ್ರಿ ಮತ್ತು ಇಂದು ಮುಂಜಾನೆ ಭೇಟಿಯಾದೆ,ʼ ಎಂದು ಹನೀಫಾ ಹೇಳಿದರು.

ಮಂಗಳವಾರ ಬೆಳಗ್ಗೆ ಸಿಂಘು ಗಡಿಯಲ್ಲಿ ಮೆರವಣಿಗೆಯಲ್ಲಿ ಸೇರಲು ಕಾರ್ಗಿಲ್‌ನಿಂದ ಬಂದ ಸುಮಾರು 60-70 ಜನರನ್ನು ದೆಹಲಿ ಪೊಲೀಸರು ತಡೆದರು ಎಂದು ಹೇಳಿದರು.

ದೃಶ್ಯ ಹಂಚಿಕೊಂಡ ವಾಂಗ್ಚುಕ್: ವಾಂಗ್‌ಚುಕ್ ಬಂಧನಕ್ಕೆ ಸ್ವಲ್ಪ ಮೊದಲು ದೆಹಲಿ ಗಡಿಯ ದೃಶ್ಯಗಳನ್ನುಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ʻನಾವು ದೆಹಲಿ ಸಮೀಪಿಸುತ್ತಿದ್ದಂತೆ, ಬಂಧಿಸಲಾಗುತ್ತದೆ ಎಂದು ತೋರುತ್ತದೆ,ʼ ಎಂದು ಹೇಳಿದರು.

ದೆಹಲಿ ಗಡಿಯಲ್ಲಿ 1,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ದೆಹಲಿಯ ಲಡಾಖ್ ಭವನ ಮತ್ತು ಲಡಾಖಿನ ವಿದ್ಯಾರ್ಥಿಗಳು ನೆಲೆಸಿರುವ ಪ್ರದೇಶಗಳಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ. ʻಈ ಪಾದಯಾತ್ರೆ ನಡೆಯುವುದು ಅವರಿಗೆ ಇಷ್ಟವಿಲ್ಲ ಎಂದು ಕಾಣುತ್ತದೆ,ʼ ಎಂದು ವಾಂಗ್ಚುಕ್‌ ಹೇಳಿದರು.

ಬಂಧನ ಸ್ವೀಕಾರಾರ್ಹವಲ್ಲ: ರಾಹುಲ್- ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ಇತರ ಲಡಾಖಿಗಳ ಬಂಧನವನ್ನು ಕಾಂಗ್ರೆಸ್ ಖಂಡಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದು ʻಸ್ವೀಕಾರಾರ್ಹವಲ್ಲ. ಪ್ರಧಾನಿ ಲಡಾಖಿಗಳ ಧ್ವನಿ ಯನ್ನು ಆಲಿಸಬೇಕಿದೆ,ʼ ಎಂದು ಹೇಳಿದ್ದಾರೆ.

ʻಪರಿಸರ ಸಂರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್ ಮತ್ತು ನೂರಾರು ಲಡಾಖಿಗಳ ಬಂಧನ ಸ್ವೀಕಾರಾರ್ಹವಲ್ಲ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ʻರೈತರ ವಿಷಯದಲ್ಲಿ ಆದಂತೆ, ಈ ಚಕ್ರವ್ಯೂಹವನ್ನು ಕೂಡ ಮುರಿಯಲಾಗುತ್ತದೆ; ನಿಮ್ಮ ದುರಹಂಕಾರ ಒಡೆಯುತ್ತದೆ. ನೀವು ಲಡಾಖಿನ ಧ್ವನಿಯನ್ನು ಕೇಳಬೇಕಾಗುತ್ತದೆ,ʼ ಎಂದು ರಾಹುಲ್ ಬರೆದಿದ್ದಾರೆ.

ಕಾಂಗ್ರೆಸ್‌ ಟೀಕೆ: ʻಮೋದಿ ಸರ್ಕಾರದ ದುರಹಂಕಾರ. ಲಡಾಖಿನಿಂದ ದೆಹಲಿಗೆ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ ನಾಗರಿಕರನ್ನು ಬಂಧಿಸಿದೆ,ʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ʻಇದು ಹೇಡಿತನದ ಕ್ರಮ. ಪ್ರಜಾಸತ್ತಾತ್ಮಕ ಕ್ರಮವಲ್ಲ. ಲಡಾಖಿನಲ್ಲಿ ಆರನೇ ಪರಿಶಿಷ್ಟದಡಿ ಬುಡಕಟ್ಟು ಸಮುದಾಯಗಳನ್ನು ರಕ್ಷಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಆದರೆ, ಮೋದಿ ಸರ್ಕಾರವು ಆಪ್ತ ಗೆಳೆಯರಿಗೆ ಅನುಕೂಲವಾಗುವಂತೆ ಲಡಾಖಿನ ಪರಿಸರ ಸೂಕ್ಷ್ಮ ಹಿಮ ನದಿಗಳನ್ನು ಬಳಸಿಕೊಳ್ಳಲು ಬಯಸಿದೆ. ಮೋದಿ ಸರ್ಕಾರದ ಲಜ್ಜೆಗೆಟ್ಟ ನಿರಂಕುಶಾಧಿಕಾರದ ವಿರುದ್ಧದ ಹೋರಾಟ ಕೊನೆಗೊಂಡಿಲ್ಲ ಎಂಬುದನ್ನು ಇದು ತೋರಿಸುತ್ತದೆ,ʼ ಎಂದು ಖರ್ಗೆ ಹೇಳಿದ್ದಾರೆ.

ಗಾಂಧಿ ಜಯಂತಿಗೆ ಒಂದು ದಿನ ಮೊದಲು ಭಾರತ ಸರ್ಕಾರ ಅವರ ಆದರ್ಶಗಳನ್ನು ಮತ್ತೊಮ್ಮೆ ಕೊಲ್ಲಲು ಹೊರಟಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ʼಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ರಾಜ್‌ಘಾಟ್ ಗೆ ಬೀಗ ಹಾಕಲಾಗಿದೆ. ಸಂವಿಧಾನದಲ್ಲಿ ನಂಬಿಕೆ ಇರುವವರಿಗೆ ಇದು ಪುಣ್ಯಭೂಮಿ.ಇದು ಬಿಜೆಪಿ ಸರ್ಕಾರ ಮಾಡಿದ ಪಾಪʼ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಎಕ್ಸ್‌ನಲ್ಲಿ ದೂರಿದ್ದಾರೆ.

ದೆಹಲಿ ಸಿಎಂ ಭೇಟಿ: ʻಮಧ್ಯಾಹ್ನ 1 ಗಂಟೆಗೆ ಸೋನಮ್ ವಾಂಗ್‌ಚುಕ್ ಅವರನ್ನು ಭೇಟಿ ಮಾಡಲು ಬವಾನಾ ಪೊಲೀಸ್ ಠಾಣೆಗೆ ಹೋಗುತ್ತೇನೆ. ಸೋನಮ್ ವಾಂಗ್‌ಚುಕ್ ಮತ್ತು ನಮ್ಮ 150 ಲಡಾಖಿ ಸಹೋದರ-ಸಹೋದರಿಯರನ್ನು ಬಂಧನದಲ್ಲಿ ಇರಿಸಲಾಗಿದೆ,ʼ ಎಂದು ದೆಹಲಿ ಸಿಎಂ ಆತಿಶಿ ಎಕ್ಸ್‌ ನಲ್ಲಿ ಟ್ವೀಟ್ ಮಾಡಿದ್ದಾರೆ.

Read More
Next Story