ಪುತ್ರ ಅನಿಲ್, ಅವರ ಪಕ್ಷ ಬಿಜೆಪಿ ಸೋಲಬೇಕು: ಎ.ಕೆ. ಆಂಟನಿ
x

ಪುತ್ರ ಅನಿಲ್, ಅವರ ಪಕ್ಷ ಬಿಜೆಪಿ ಸೋಲಬೇಕು: ಎ.ಕೆ. ಆಂಟನಿ

ಕೇರಳದಲ್ಲಿ ಎನ್‌ಡಿಎಗೆ ಮೂರನೇ ಸ್ಥಾನ


ಏಪ್ರಿಲ್‌ 9- ಬಿಜೆಪಿಗೆ ಪಕ್ಷಾಂತರ ಮಾಡಿರುವ ಪುತ್ರ ಅನಿಲ್ ಕೆ. ಆಂಟನಿ ಮುಂಬರುವ ಚುನಾವಣೆಯಲ್ಲಿ ಕೇರಳದ ಪಟ್ಟನಂತಿಟ್ಟ ಲೋಕಸಭೆ ಕ್ಷೇತ್ರದಲ್ಲಿ ಗೆಲ್ಲಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಮಂಗಳವಾರ ಹೇಳಿದರು. ಮಗನ ರಾಜಕೀಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ʻಕಾಂಗ್ರೆಸ್ ನನ್ನ ಧರ್ಮʼ ಎಂದು ಅವರು ಹೇಳಿದರು.

ʻನನ್ನ ಆರೋಗ್ಯ ಸಮಸ್ಯೆಗಳನ್ನು ಬದಿಗಿರಿಸಿ, ನಿಲುವು ಸ್ಪಷ್ಟಪಡಿಸಬೇಕು ಎಂದು ಬಂದಿದ್ದೇನೆ. ಏಕೆಂದರೆ, ಇದು ಭಾರತದ ಕಲ್ಪನೆ ಮತ್ತು ಸಂವಿಧಾನವನ್ನು ರಕ್ಷಿಸುವ ಚುನಾವಣೆಯಾಗಿದೆ. ʻಮಾಡು ಇಲ್ಲವೇ ಮಡಿ ಯುದ್ಧʼ ಎಂದು ಹೇಳಿದರು.

ನಿಲುವು ಸ್ಪಷ್ಟಗೊಳಿಸಿದರು: ಅನಿಲ್ ಮತ್ತು ಕಾಂಗ್ರೆಸ್ ಮುಖಂಡ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆಂಟನಿ ಅವರ ನಿಲುವು ಕಾಂಗ್ರೆಸ್‌ಗೆ ಉತ್ತೇಜನ ತುಂಬಿದೆ. ಅನಿಲ್ ಅವರು ಕುಟುಂಬದ ಮೌನ ಆಶೀರ್ವಾದದೊಂದಿಗೆ ಬಿಜೆಪಿಗೆ ತೆರಳಿದ್ದಾರೆ ಎಂಬ ಆರೋಪವಿದೆ. ʻಕಾಂಗ್ರೆಸ್ ಪರ ಪ್ರಚಾರಕ್ಕೆ ತಿರುವನಂತಪುರದಿಂದ ಹೊರಗೆ ಹೋಗದಿರಲು ಆರೋಗ್ಯ ಸಮಸ್ಯೆ ಕಾರಣ. ಪಟ್ಟನಂತಿಟ್ಟಕ್ಕೆ ಪ್ರಚಾರಕ್ಕೆ ಹೋಗದಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಆಂಟೊ ಆಂಟೋನಿ ದಕ್ಷಿಣ ಕೇರಳ ಕ್ಷೇತ್ರದಿಂದ ಬಹುಮತದಿಂದ ಗೆಲ್ಲುತ್ತಾರೆʼ ಎಂದು ಹೇಳಿದರು. ʻನನಗೆ ಕುಟುಂಬ ಮತ್ತು ರಾಜಕೀಯ ಬೇರೆ ಬೇರೆ. ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ದಿನಗಳಿಂದ ನಾನು ಅದನ್ನು ಉಳಿಸಿಕೊಂಡಿದ್ದೇನೆʼ ಎಂದು ಹೇಳಿದರು.

ಬಿಜೆಪಿಯ ಸುವರ್ಣ ವರ್ಷಗಳು ಮುಗಿದಿವೆ: ʻಕೇರಳದಲ್ಲಿ ಬಿಜೆಪಿಯ ಸುವರ್ಣ ಯುಗ ಈಗಾಗಲೇ ಮುಗಿದಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಎನ್‌ಡಿಎ ಮೂರನೇ ಸ್ಥಾನಕ್ಕೆ ಬರಲಿದೆ. ಈ ವರ್ಷ ಬಿಜೆಪಿಗೆ ನೆರವಾಗುವ ಯಾವುದೇ ಅಂಶವಿಲ್ಲ ಮತ್ತು ಅವರು ಕಡಿಮೆ ಮತ ಪಡೆಯುತ್ತಾರೆʼ ಎಂದು ಆಂಟನಿ ಹೇಳಿದರು.

2019 ರ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ, ಶಬರಿಮಲೆ ಮಹಿಳೆಯರ ಪ್ರವೇಶ ವಿವಾದದಿಂದಾಗಿ ಬಿಜೆಪಿ ಕೆಲವು ಹೆಚ್ಚುವರಿ ಮತ ಗಳಿಸಿತು.

ಎಡ ಪಕ್ಷಗಳ ಟೀಕೆ: ಆಡಳಿತಾರೂಢ ಎಡಪಂಥೀಯರನ್ನು ತರಾಟೆಗೆ ತೆಗೆದುಕೊಂಡ ಆ್ಯಂಟನಿ, ʻಸಂವಿಧಾನ ರಚನೆಗೂ ಮುಖ್ಯಮಂತ್ರಿ ಅವರ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಸಂವಿಧಾನ ರಚನೆಯ ಸಂಪೂರ್ಣ ಶ್ರೇಯಸ್ಸು ರಾಷ್ಟ್ರೀಯ ಕಾಂಗ್ರೆಸ್ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆʼ ಎಂದು ಹೇಳಿದರು. ʻಅವರ ಪಕ್ಷ ಜವಾಹರಲಾಲ್ ನೆಹರು ನೇತೃತ್ವದ ಸರ್ಕಾರದ ವಿರುದ್ಧ ಸಶಸ್ತ್ರ ಕ್ರಾಂತಿಯ ತಂತ್ರವನ್ನು ಪ್ರತಿಪಾದಿಸಿತ್ತುʼ ಎಂದು ʻಕಲ್ಕತ್ತಾ ಥೀಸಿಸ್‌ʼ ದಾಖಲೆಯನ್ನು ಉಲ್ಲೇಖಿಸಿದರು.

ʻ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ ಆಡಳಿತವನ್ನು ಕೊನೆಗೊಳಿಸಲು ಕಾಂಗ್ರೆಸ್‌ಗೆ ಮತ ನೀಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನ ನಾಶವಾಗುತ್ತದೆ ಮತ್ತು ಪ್ರಜಾಪ್ರಭುತ್ವದ ಅಂತ್ಯಗೊಳ್ಳುತ್ತದೆ. ನಾವು ಆ ಅಪಾಯವನ್ನು ದೂರ ಮಾಡಬೇಕಿದೆʼ ಎಂದು ಆಂಟನಿ ಹೇಳಿದರು.

ಅನಿಲ್ ಪ್ರತಿಕ್ರಿಯೆ: ತಂದೆಯ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅನಿಲ್, ʻಕಾಂಗ್ರೆಸ್ ಹಳೆಯ ನಾಯಕರನ್ನು ಹೊಂದಿದೆ. ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಾಲಿ ಸಂಸದ ಆಂಟೋ ಆಂಟೋನಿ ಅವರನ್ನು ಬೆಂಬಲಿಸಿರುವ ತಂದೆ ಬಗೆಗೆ ಸಹಾನುಭೂತಿ ಇದೆ.ಪಟ್ಟನಂತಿಟ್ಟ ಕ್ಷೇತ್ರ ನಾನೇ ಗೆಲ್ಲುತ್ತೇನೆʼ ಎಂದು ಸುದ್ದಿಗಾರರಿಗೆ ತಿಳಿಸಿದರು.

Read More
Next Story