ಮಸೀದಿ- ಮಂದಿರ ವಿವಾದ | ಮೋಹನ್‌ ಭಾಗವತ್ ಹೇಳಿದ್ದೇ ಬೇರೆ, ಆರ್‌ಎಸ್‌ಎಸ್‌ ಹೇಳುವುದೇ ಬೇರೆ
x
ಮೋಹನ್‌ ಭಾಗ್ವತ್‌.

ಮಸೀದಿ- ಮಂದಿರ ವಿವಾದ | ಮೋಹನ್‌ ಭಾಗವತ್ ಹೇಳಿದ್ದೇ ಬೇರೆ, ಆರ್‌ಎಸ್‌ಎಸ್‌ ಹೇಳುವುದೇ ಬೇರೆ

ಸೋಮನಾಥದಿಂದ ಸಂಭಲ್‌ವರೆಗಿನ ಘಟನೆಗಳು ಐತಿಹಾಸಿಕ ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನಗಳು ಹಾಗೂ ನ್ಯಾಯದ ಅನ್ವೇಷಣೆಯ ಸಮರ ಎಂದು ಆರ್‌ಎಸ್‌ಎಸ್‌ ಮುಖವಾಣಿ ʼಆರ್ಗನೈಸರ್‌ʼ ಹೇಳಿದೆ.


ದೇಶದಲ್ಲಿ ದೇವಾಲಯ-ಮಸೀದಿ ವಿವಾದಗಳು ಜೋರಾಗಿ ನಡೆಯುತ್ತಿರುವ ನಡುವೆಯೇ ಕೆಲವು ದಿನಗಳ ಹಿಂದೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಇಂಥ ಪ್ರಕರಣಗಳು ಸರಿಯಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ವಿವಾದಗಳನ್ನು ಕೆದಕುವ ಮೂಲಕ ʼʼಹಿಂದೂ ನಾಯಕರಾಗಲುʼʼ ಯತ್ನಿಸಬಾರದು ಎಂದು ಹೇಳಿದ್ದರು. ಆದರೆ, ಈಗ ಆರೆಸ್ಸೆಸ್ ಮುಖವಾಣಿ ʼʼಆರ್ಗನೈಸರ್‌ʼ ತನ್ನ ಇತ್ತೀಚಿನ ಸಂಚಿಕೆಯಲ್ಲಿ, ಸೋಮನಾಥದಿಂದ ಸಂಭಲ್‌ವರೆಗಿನ ಘಟನೆಗಳು ಐತಿಹಾಸಿಕ ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಹಾಗೂ ನ್ಯಾಯದ ಅನ್ವೇಷಣೆಯ ಸಮರ ಎಂದು ಹೇಳಿಕೆ ನೀಡಿದೆ.

ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದನ್ನು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಅದೇ ರೀತಿ ಉತ್ತರ ಪ್ರದೇಶದ ಸಂಭಲ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳು ಜನಸಾಮಾನ್ಯರ ಗಮನ ಸೆಳೆದಿವೆ ಎಂದು "ಆರ್ಗನೈಸರ್" ನ ಇತ್ತೀಚಿನ ಸಂಚಿಕೆಯಲ್ಲಿನ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಉತ್ತರ ಪ್ರದೇಶದ ಐತಿಹಾಸಿಕ ಪಟ್ಟಣದಲ್ಲಿ ಜಾಮಾ ಮಸೀದಿಯಾಗಿ ನಿರ್ಮಿಸಲಾಗಿರುವ ಶ್ರೀ ಹರಿಹರ ಮಂದಿರವನ್ನು ಸಮೀಕ್ಷೆ ಮಾಡುವ ಅರ್ಜಿಯೊಂದಿಗೆ ಪ್ರಾರಂಭವಾದ ವಿವಾದವು ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ನೀಡಲಾಗುವ ವಿವಿಧ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಹೊಸ ಚರ್ಚೆ ಹುಟ್ಟು ಹಾಕಿದೆ ಎಂದು ಅದು ಹೇಳಿದೆ.

"ಚರ್ಚೆಯನ್ನು ಹುಸಿ-ಜಾತ್ಯತೀತ ದೃಷ್ಟಿಕೋನದಿಂದ ಹಿಂದೂ-ಮುಸ್ಲಿಂ ಪ್ರಶ್ನೆಗೆ ಸೀಮಿತಗೊಳಿಸುವ ಬದಲು, ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ನಿಜ ಇತಿಹಾಸದ ಆಧಾರದ ಮೇಲೆ ನಡೆಸಬೇಕು. ನಾಗರಿಕ ನ್ಯಾಯದ ಅನ್ವೇಷಣೆಯ ಬಗ್ಗೆ ಅಂತರ್ಗತ ಚರ್ಚೆಯ ಅಗತ್ಯವಿದೆ" ಎಂದು ಸಂಪಾದಕ ಪ್ರಫುಲ್ಲ ಕೇತ್ಕರ್ ಸಂಪಾದಕೀಯದಲ್ಲಿ ಬರೆದಿದ್ದಾರೆ.

"ಸೋಮನಾಥದಿಂದ ಸಂಭಾಲ್ ಮತ್ತು ಅದರಾಚೆಗೆ ಐತಿಹಾಸಿಕ ಸತ್ಯ ತಿಳಿದುಕೊಳ್ಳುವ ಈ ಸಮರ ಧಾರ್ಮಿಕ ಪ್ರಾಬಲ್ಯದಿಂದ ಕೂಡಿಲ್ಲ.ಇದು ನಮ್ಮ ರಾಷ್ಟ್ರೀಯ ಗುರುತನ್ನು ಸ್ಮರಿಸುವ ಮತ್ತು ನಾಗರಿಕ ನ್ಯಾಯದ ಹುಡುಕಾಟವಾಗಿದೆ" ಎಂದು ಅದು ಹೇಳಿದೆ.

ಮೋಹನ್‌ ಭಾಗವತ್‌ ಹೇಳಿದ್ದೇನು?

ದೇಶದಲ್ಲಿ ಹಲವಾರು ದೇವಾಲಯ-ಮಸೀದಿ ವಿವಾದಗಳು ಎದ್ದೇಳುತ್ತಿರುವ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಭಾಗವತ್ ಕಳೆದ ವಾರ ಕಳವಳ ವ್ಯಕ್ತಪಡಿಸಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಂತರ ಕೆಲವು ವ್ಯಕ್ತಿಗಳು ಇಂತಹ ವಿಷಯಗಳನ್ನು ಎತ್ತುವ ಮೂಲಕ "ಹಿಂದೂಗಳ ನಾಯಕರು" ಆಗಬಹುದು ಎಂದು ನಂಬಿದ್ದಾರೆ ಎಂದು ನುಡಿದಿದ್ದರು.

ಪುಣೆಯಲ್ಲಿ ನಡೆದ ಉಪನ್ಯಾಸ ಸರಣಿಯಲ್ಲಿ ಅವರು "ಭಾರತ - ವಿಶ್ವಗುರು" ಕುರಿತು ಉಪನ್ಯಾಸ ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

"ನಾವು ಬಹಳ ಸಮಯದಿಂದ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಅದನ್ನು ಜಗತ್ತಿಗೆ ಹೇಳಲು ಬಯಸಿದೆರೆ ಅದರ ಮಾದರಿ ರಚಿಸಬೇಕಾಗಿದೆ. ರಾಮ ಮಂದಿರ ನಿರ್ಮಾಣದ ನಂತರ, ಹೊಸ ಸ್ಥಳಗಳಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಎತ್ತುವ ಮೂಲಕ ತಾವು ಹಿಂದೂಗಳ ನಾಯಕರಾಗಬಹುದು ಎಂದು ಕೆಲವರು ಭಾವಿಸುತ್ತಾರೆ. ಇದು ಸ್ವೀಕಾರಾರ್ಹವಲ್ಲ" ಎಂದು ಅವರು ಹೇಳಿದ್ದರು.

ರಾಮ ಮಂದಿರವು ಎಲ್ಲಾ ಹಿಂದೂಗಳ ನಂಬಿಕೆಯ ವಿಷಯವಾಗಿರುವುದರಿಂದ ಅದನ್ನು ನಿರ್ಮಿಸಲಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.

"ಆರ್ಗನೈಸರ್" ಸಂಪಾದಕೀಯದಲ್ಲಿ ಭಾರತದಲ್ಲಿ ಧಾರ್ಮಿಕ ಅಸ್ಮಿತೆಗಳ. ಜಾತಿ ಪ್ರಶ್ನೆಗಿಂತ ಹೆಚ್ಚು ಭಿನ್ನವಾಗಿಲ್ಲ ಎಂದು ಹೇಳಿದೆ.

ಕಾಂಗ್ರೆಸ್ ಸಾಮಾಜಿಕ ನ್ಯಾಯದ ಅನುಷ್ಠಾನ ವಿಳಂಬಗೊಳಿಸಿತು ಮತ್ತು ಚುನಾವಣಾ ಲಾಭಕ್ಕಾಗಿ ಜಾತಿ ಅಸ್ಮಿತೆಗಳನ್ನು ಬಳಸಿಕೊಂಡಿತು. ಧಾರ್ಮಿಕ ಅಸ್ಮಿತೆಗಳ ಕಥೆ ಇದಕ್ಕಿಂತ ಭಿನ್ನವಾಗಿಲ್ಲ" ಎಂದು ಅದು ಹೇಳಿದೆ.

"ಇಸ್ಲಾಮಿಕ್ ಆಧಾರದ ಮೇಲೆ ಭಾರತದ ವಿಭಜನೆಗೊಂಡರೂ. ಈ ಬಗ್ಗೆ ಸತ್ಯ ಹೇಳುವ ಮೂಲಕ ನಾಗರಿಕ ನ್ಯಾಯಕ್ಕಾಗಿ ಪ್ರಯತ್ನಿಸುವ ಬದಲು, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಇತಿಹಾಸಕಾರರು ಆಕ್ರಮಣಕಾರರ ಪಾಪಗಳನ್ನು ಮರೆಮಾಚಲು ಯತ್ನಿಸಿದರು" ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ಅಂಬೇಡ್ಕರ್ ಅವರು ಜಾತಿ ಆಧಾರಿತ ತಾರತಮ್ಯದ ಸಮಸ್ಯೆ ಪತ್ತೆ ಹಚ್ಚಿ ಅದಕ್ಕೆ ಸಾಂವಿಧಾನಿಕ ಪರಿಹಾರಗಳನ್ನು ಒದಗಿಸಿದರು ಎಂದು ಸಂಪಾಕೀಯದಲ್ಲಿ ಹೇಳಲಾಗಿದೆ. .

"ನಾಗರಿಕ ನ್ಯಾಯದ ಈ ಅನ್ವೇಷಣೆ ಪರಿಹರಿಸಲು ಸಮಯ ಪಕ್ವವಾಗಿದೆ. ಧಾರ್ಮಿಕ ದ್ವೇಷ ಮತ್ತು ಅಸಂಗತೆ ಕೊನೆಗೊಳಿಸಲು ನಮಗೆ ಇದೇ ರೀತಿಯ ವಿಧಾನದ ಅಗತ್ಯವಿದೆ" ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

Read More
Next Story