
ತಂದೆಗೆ ಅನಾರೋಗ್ಯ, ಸ್ಮೃತಿ ಮಂಧಾನ ವಿವಾಹ ದಿಢೀರ್ ಮುಂದೂಡಿಕೆ
ತಂದೆಯ ಚೇತರಿಕೆಯ ನಂತರವಷ್ಟೇ ಮುಂದಿನ ಮುಹೂರ್ತ ಮತ್ತು ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಹಾಗೂ ತಾರಾ ಆಟಗಾರ್ತಿ ಸ್ಮೃತಿ ಮಂಧಾನ ಅವರ ವಿವಾಹ ಸಮಾರಂಭಕ್ಕೆ ಕೊನೆ ಗಳಿಗೆಯಲ್ಲಿ ವಿಘ್ನ ಎದುರಾಗಿದೆ. ಭಾನುವಾರ (ನವೆಂಬರ್ 23) ನಡೆಯಬೇಕಿದ್ದ ಬಹುನಿರೀಕ್ಷಿತ ಮದುವೆಯನ್ನು ಸ್ಮೃತಿ ಅವರ ತಂದೆಯ ಹಠಾತ್ ಅನಾರೋಗ್ಯದ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಸ್ಮೃತಿ ಮಂಧಾನ ಮತ್ತು ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಭಾನುವಾರ ಸಾಂಗ್ಲಿಯಲ್ಲಿ ಅದ್ದೂರಿಯಾಗಿ ನೆರವೇರಬೇಕಿತ್ತು. ಆದರೆ, ಭಾನುವಾರ ಬೆಳಿಗ್ಗೆ ಸ್ಮೃತಿ ಅವರ ತಂದೆಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಾಂಗ್ಲಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ವೈದ್ಯರ ತೀವ್ರ ನಿಗಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸ್ಮೃತಿ ಮಂಧಾನ ಅವರ ಮ್ಯಾನೇಜರ್ ತುಹಿನ್ ಮಿಶ್ರಾ (Tuhin Mishra) ಅಧಿಕೃತ ಮಾಹಿತಿ ನೀಡಿದ್ದಾರೆ. "ಸ್ಮೃತಿ ಅವರ ತಂದೆಗೆ ಬೆಳಿಗ್ಗೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ತಂದೆ ಆಸ್ಪತ್ರೆಯಲ್ಲಿರುವಾಗ ಮದುವೆಯಾಗಲು ಸ್ಮೃತಿ ಒಪ್ಪಲಿಲ್ಲ. ಅವರ ನಿರ್ಧಾರದಂತೆ ಮದುವೆಯನ್ನು ಸದ್ಯಕ್ಕೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ," ಎಂದು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸಾಂಗ್ಲಿಯಲ್ಲಿ ಮದುವೆ ಸಂಭ್ರಮ ಮನೆಮಾಡಿತ್ತು. ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಕ್ರಿಕೆಟ್ ಲೋಕದ ಗಣ್ಯರು ಆಗಮಿಸಿದ್ದರು. ಸಂಪ್ರದಾಯದಂತೆ ಮೆಹಂದಿ, ಹಳದಿ ಮತ್ತು ಸಂಗೀತ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದಿದ್ದವು. ಮದುವೆಯ ಸಂಭ್ರಮವನ್ನು ಹೆಚ್ಚಿಸಲು 'ಬ್ರೈಡ್ ಟೀಮ್' (ವಧುವಿನ ತಂಡ) ಮತ್ತು 'ಗ್ರೂಮ್ ಟೀಮ್' (ವರನ ತಂಡ) ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯವನ್ನೂ ಆಯೋಜಿಸಲಾಗಿತ್ತು. ಹಳದಿ ಶಾಸ್ತ್ರದ ವೇಳೆ ಸ್ಮೃತಿ ಮಂಧಾನ ಅವರು ತಮ್ಮ ಸಹ ಆಟಗಾರ್ತಿಯರೊಂದಿಗೆ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಗಣ್ಯರ ಉಪಸ್ಥಿತಿ:
ಮದುವೆಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿವಾಲಿ ಶಿಂಧೆ ಮತ್ತು ರಿಚಾ ಘೋಷ್ ಸಾಂಗ್ಲಿಗೆ ಆಗಮಿಸಿದ್ದರು. ಎಲ್ಲರೂ ಸಂಭ್ರಮದಲ್ಲಿ ಭಾಗಿಯಾಗಿದ್ದರಾದರೂ, ಅನಿರೀಕ್ಷಿತವಾಗಿ ಎದುರಾದ ಈ ಘಟನೆ ಎಲ್ಲರಲ್ಲೂ ಬೇಸರ ಮತ್ತು ಆತಂಕ ಮೂಡಿಸಿದೆ.
ತಂದೆಯ ಚೇತರಿಕೆಯ ನಂತರವಷ್ಟೇ ಮುಂದಿನ ಮುಹೂರ್ತ ಮತ್ತು ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

