ಚುನಾವಣೆ 2024: ಬಿಜೆಪಿ ಹೆಗಲ ಮೇಲೆ ಸಣ್ಣ ಪಕ್ಷಗಳ ಸವಾರಿ ಯತ್ನ
ರಾಮಮಂದಿರ ಶಂಕುಸ್ಥಾಪನೆ ಸಮಾರಂಭ ಮತ್ತು ಮೋದಿಯವರ ಜನಪ್ರಿಯತೆಯು ತಮಗೆ ಮತಗಳನ್ನು ನೀಡುತ್ತದೆ ಎಂದು ಬಹುತೇಕ ಸಣ್ಣ ಪಕ್ಷಗಳು ನಂಬಿವೆ
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರದ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ.
ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭ ನಡೆದಿದೆ. ರಾಮಮಂದಿರದ ಜನಪ್ರಿಯತೆಯ ಲಾಭ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೀರತ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಈ ಕ್ಷೇತ್ರದ ಆಯ್ಕೆ ಕುತೂಹಲಕಾರಿಯಾಗಿದೆ. ಕ್ಷೇತ್ರದಲ್ಲಿ ಜನಪ್ರಿಯ ದೂರದರ್ಶನ ಸರಣಿ ʻರಾಮಾಯಣʼದ ರಾಮನ ಪಾತ್ರಧಾರಿ ನಟ ಅರುಣ್ ಗೋವಿಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಗೋವಿಲ್ ಕೂಡ ಹಾಜರಿದ್ದರು.
ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಸವಾಲು ಎದುರಿಸಲು ಮೋದಿ ಅವರ ಜೊತೆಗೆ ರಾಮ ಮಂದಿರದ ಜನಪ್ರಿಯತೆ ಸಹಾಯ ಮಾಡುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡರು ಭಾವಿಸಿದ್ದಾರೆ.
ʻರಾಜ್ಯದಲ್ಲಿ ಪ್ರಧಾನಿ ಪಾಲ್ಗೊಳ್ಳುವ ಹಲವು ಸಾರ್ವಜನಿಕ ಸಭೆಗಳಲ್ಲಿ ಇದು ಮೊದಲನೆಯದು. ಪಶ್ಚಿಮ ಉತ್ತರ ಪ್ರದೇಶವನ್ನು 4-5 ಲೋಕಸಭೆ ಕ್ಷೇತ್ರಗಳಿರುವ ಸಣ್ಣ ಗುಂಪುಗಳಾಗಿ ವಿಭಜಿಸುತ್ತಿದ್ದೇವೆʼ ಎಂದು ಬಿಜೆಪಿ ಮಾಧ್ಯಮ ಉಸ್ತುವಾರಿ ಗಜೇಂದ್ರ ಶರ್ಮಾ ʻಫೆಡರಲ್ʼಗೆ ತಿಳಿಸಿದರು.
ರೈತ ಸಂಘಟನೆಗಳೊಂದಿಗೆ ಸಂವಾದ ಆರಂಭಿಸಬೇಕೆಂದು ಆರ್‌ಎಲ್‌ಡಿ ನಾಯಕತ್ವ ಒತ್ತಾಯಿಸುತ್ತಿದ್ದು, ಬಿಜೆಪಿ ಬೇಡಿಕೆಯನ್ನು ತಳ್ಳಿಹಾಕಿದೆ. ರಾಮ ಮಂದಿರ ನಿರ್ಮಾಣ ಮತ್ತು ಪ್ರಧಾನಿ ಮೋದಿಯವರ ಜನಪ್ರಿಯತೆ ಸಹಾಯ ಮಾಡುತ್ತದೆ ಎಂದುಕೊಂಡಿದೆ.
ಆರ್‌ಎಲ್‌ಡಿಗೆ ಗೆಲುವಿನ ವಿಶ್ವಾಸ: ಚುನಾವಣೆ ನಂತರ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ನಾಯಕತ್ವಕ್ಕೆ ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಆರ್‌ಎಲ್‌ಡಿ ನಾಯಕರು ನಂಬಿದ್ದಾರೆ.
ʻಈಮೊದಲು ನಾವು ಇಂಡಿಯ ಮೈತ್ರಿಕೂಟದ ಭಾಗವಾಗಿದ್ದೆವು. ಆದರೆ, ಈಗ ಎನ್‌ಡಿಎ ಭಾಗವಾಗಿದ್ದೇವೆ. ಬಿಜೆಪಿಯೊಂದಿಗೆ ಮೈತ್ರಿ ಎಂದರೆ ಚುನಾವಣೆಯಲ್ಲಿ ಗೆಲುವಿನ ಶೇ.100 ಗ್ಯಾರಂಟಿ. ಚುನಾವಣೆ ನಂತರ ರೈತರ ಬೇಡಿಕೆಗಳನ್ನು ಒಪ್ಪುವಂತೆ ಬಿಜೆಪಿಗೆ ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ. ನಮ್ಮ ನಾಯಕ ಜಯಂತ್ ಸಿಂಗ್ ಅವರು ಈಗಾಗಲೇ ಬಿಜೆಪಿ ನಾಯಕತ್ವದೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆʼ ಎಂದು ಆರ್‌ಎಲ್‌ಡಿ ಹಿರಿಯ ನಾಯಕ ಮೊಹಮ್ಮದ್ ಇಸ್ಲಾಂ ʻದಿ ಫೆಡರಲ್ʼಗೆ ತಿಳಿಸಿದರು.
2009 ರ ಸಾರ್ವತ್ರಿಕ ಚುನಾವಣೆ ನಂತರ ಪಕ್ಷಕ್ಕೆ ಒಂದೇ ಒಂದು ಲೋಕಸಭೆ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಆರ್‌ಎಲ್‌ಡಿಗೆ ಎಂಟು ಲೋಕಸಭೆ ಸ್ಥಾನ ನೀಡಿದ್ದರೂ, ಎನ್‌ಡಿಎಯೊಂದಿಗೆ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಪಕ್ಷ ಬಿಜೆಪಿ ನೀಡಿದ ಎರಡು ಸ್ಥಾನ ತೆಗೆದುಕೊಳ್ಳಲು ಜಯಂತ್ ಸಿಂಗ್ ಒಪ್ಪಿಕೊಂಡರು.
ಬಿಜೆಪಿ ಈಗಾಗಲೇ 64 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, 11 ಕ್ಷೇತ್ರಗಳು ಬಾಕಿ ಉಳಿದಿವೆ. ʻಸೀಟು ಹಂಚಿಕೆ ಚರ್ಚೆ ನಡೆಯುತ್ತಿದ್ದು, ಅಂತಿಮ ನಿರ್ಧಾರ ಶೀಘ್ರವೇ ಪ್ರಕಟಿಸಲಾಗುವುದು. ನಾವು 3-4 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದೇವೆ. ಏಕೆಂದರೆ, ಕಳೆದ 10 ವರ್ಷಗಳಿಂದ ನಾವು 2 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದೇವೆ. ಮಿರ್ಜಾಪುರದ ಒಂದು ಸ್ಥಾನಕ್ಕೆ ಮಾತ್ರ ಒಪ್ಪಂದವಾಗಿದೆ. ಉತ್ತರ ಪ್ರದೇಶದಲ್ಲಿ ಮೈತ್ರಿಕೂಟದ ಹಳೆಯ ಸದಸ್ಯರು ನಾವುʼ ಎಂದು ಅಪ್ನಾ ದಳದ ಹಿರಿಯ ನಾಯಕ ಸೋನೆಲಾಲ್ ಮತ್ತು ಶಾಸಕ ಡಾ. ಸುನಿಲ್ ಪಟೇಲ್ ಫೆಡರಲ್‌ಗೆ ತಿಳಿಸಿದರು.
ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಓಂ ಪ್ರಕಾಶ್ ರಾಜ್‌ಭರ್ ಅವರ ಸ್ಥಿತಿ ಹೀಗೆಯೇ ಇದೆ. ಅವರು ಪೂರ್ವ ಉತ್ತರ ಪ್ರದೇಶದ ಕನಿಷ್ಠ ಮೂರು ಲೋಕಸಭೆ ಕ್ಷೇತ್ರಗಳನ್ನು ಕೇಳುತ್ತಿದ್ದಾರೆ. ಆದರೆ, ಬಿಜೆಪಿ ಅವರಿಗೆ 1 ಕ್ಷೇತ್ರ ನೀಡಲು ಸಿದ್ಧವಾಗಿದೆ. ಅವರನ್ನು ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಲಾಗಿದೆ.
ಸಣ್ಣ ಪಕ್ಷಗಳ ಅವಲಂಬನೆ: ಸಣ್ಣ ಪಕ್ಷಗಳು ಚುನಾವಣೆ ಮತ್ತು ರಾಜಕೀಯ ಪ್ರಸ್ತುತತೆಗೆ ಬಿಜೆಪಿಯನ್ನು ಅವಲಂಬಿಸಿವೆ ಎಂದು ವಿಶ್ಲೇಷಕರು ಹೇಳುತ್ತಾರೆ. ಹೆಚ್ಚಿನ ಮೈತ್ರಿ ಪಾಲುದಾರರು ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಬಿಜೆಪಿ ನಾಯಕತ್ವವನ್ನು ಅವಲಂಬಿಸಿದ್ದಾರೆ. ʻಇದನ್ನು ಅನುಕೂಲತೆಯ ಮೈತ್ರಿ ಎಂದು ಕರೆಯಲಾಗುತ್ತದೆ. ಎನ್‌ಡಿಎ ಸದಸ್ಯರು ಸ್ವಾಭಾವಿಕ ಮಿತ್ರರಲ್ಲ. ಆದರೆ, ಬಿಜೆಪಿಯೊಂದಿಗಿದ್ದರೆ ಗೆಲ್ಲುವ ಅವಕಾಶ ಹೆಚ್ಚು ಎಂದು ಬಹುತೇಕ ಪಕ್ಷಗಳು ಒಗ್ಗೂಡಿವೆ. ಪ್ರಾದೇಶಿಕ ಪಕ್ಷಗಳು ಚುನಾವಣೆ ಸಾಧನೆಗೆ ಬಿಜೆಪಿಯನ್ನು ಅವಲಂಬಿಸಿವೆ. ಅವು ಸ್ವಂತವಾಗಿ ಗೆಲ್ಲಲು ಸಾಧ್ಯವಿಲ್ಲʼ ಎಂದು ಪಂಜಾಬ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಅಶುತೋಷ್ ಕುಮಾರ್ ಹೇಳಿದರು.