SM Krishna: ರಾಜ್‌ಕುಮಾರ್ ಅಪಹರಣ ಸವಾಲು ನಿಭಾಯಿಸಿದ್ದ ಎಸ್‌ಎಂ ಕೃಷ್ಣ
2000ನೇ ಇಸವಿಯ ಜುಲೈ 30ರಂದು ತಮ್ಮ ಹುಟ್ಟೂರು ಗಾಜನೂರಿನ ತಮ್ಮ ಮನೆಯಲ್ಲಿದ್ದ ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಕೃಷ್ಣ ಅವರು ಪರಿಸ್ಥಿತಿಯನ್ನು ನಾಜೂಕಾಗಿ ಈ ಪರಿಸ್ಥಿತಿಯನ್ನು ಅವರು ನಿರ್ವಹಿಸಿದರು.
ಸೋಮವಾರ ರಾತ್ರಿ ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna Death) ಅವರು ತಮ್ಮ ಆಡಳಿತಾವಧಿಯಲ್ಲಿ ಹಲವಾರು ಬಿಕ್ಕಟ್ಟುಗಳನ್ನು ಎದುರಿಸಿದ್ದರು. ಪ್ರಮುಖವಾಗಿ ಕಾಡುಗಳ್ಳ ವೀರಪ್ಪನ್‌ನಿಂದ ನಟ ಡಾ. ರಾಜ್‌ಕುಮಾರ್ (Dr Rajkumar) ಅಪಹರಣಕ್ಕೆ ಒಳಗಾಗಿದ್ದಾಗ ನಿಭಾಯಿಸಿದ ರೀತಿ ಹೆಚ್ಚು ಸ್ಮರಣೀಯ.
2000ನೇ ಇಸವಿಯ ಜುಲೈ 30ರಂದು ತಮ್ಮ ಹುಟ್ಟೂರು ಗಾಜನೂರಿನ ತಮ್ಮ ಮನೆಯಲ್ಲಿದ್ದ ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಅವರನ್ನು ಬಿಡುಗಡೆ ಮಾಡಬೇಕಿದ್ದರೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ. ಇದು ದೊಡ್ಡ ತಲ್ಲಣಕ್ಕೆ ಕಾರಣವಾಯಿತು. ಕೃಷ್ಣ ಅವರು ಪರಿಸ್ಥಿತಿಯನ್ನು ನಾಜೂಕಾಗಿ ಈ ಪರಿಸ್ಥಿತಿಯನ್ನು ಅವರು ನಿರ್ವಹಿಸಿದರು.
ತಕ್ಷಣವೇ ತಮಿಳುನಾಡು ಸಿಎಂ ಕರುಣಾನಿಧಿ ಅವರನ್ನು ಭೇಟಿಯಾಗಲು ತಮಿಳುನಾಡಿಗೆ ಹೋಗಿದ್ದರು ಎಸ್ ಎಂ ಕೃಷ್ಣ. ಅವರ ಜೊತೆಗೂಡಿ ಈ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಿದ್ದರು. ಈತ್ತ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯದಂತೆಯೂ ನೋಡಿಕೊಂಡರು. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆ ವಾಸವಿದ್ದ ತಮಿಳರು ಹಾಗೂ ತಮಿಳುನಾಡಿನಲ್ಲಿರುವ ಕನ್ನಡಿಗರ ಸುರಕ್ಷತೆಯೂ ಕೆಡದಂತೆ ನೋಡಿಕೊಂಡರು.
ಕೋರ್ಟ್ ಛೀಮಾರಿ
ರಾಜ್‌ಕುಮಾರ್ ಅವರ ಅಪಹರಣ ಆಗಬಹುದು ಎಂಬ ಗುಪ್ತಚರ ಮೂಲಗಳ ವರದಿಗಳಿದ್ದರೂ ಅವರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದುದಕ್ಕಾಗಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರವನ್ನು ಆ ವೇಳೆ ತರಾಟೆಗೆ ತೆಗೆದುಕೊಂಡಿತು. ಇದರಿಂದ ಕೃಷ್ಣ ಅವರಿಗೆ ಮುಜುಗರ ಉಂಟಾಗಿತ್ತು. 108 ದಿವಸಗಳ ಸೆರೆವಾಸದ ನಂತರ 15 ನವೆಂಬರ್ 2000ದಂದು ರಾಜ್‌ಕುಮಾರ್ ಬಿಡುಗಡೆಯಾಗಿದ್ದರು. ಅಚ್ಚರಿಯೆಂದರೆ ರಾಜ್‌ಕುಮಾರ್ ಬಿಡುಗಡೆಗಾಗಿ ವೀರಪ್ಪನ್ ಮುಂದಿಟ್ಟಿದ್ದ ಬೇಡಿಕೆಗಳು ಯಾವುವು ಮತ್ತು ಅದನ್ನು ಹೇಗೆ ಈಡೇರಿಸಿದರು ಎಂಬದು ಇಂದಿಗೂ ನಿಗೂಢ.
ʼಉದ್ಯಾನವನಗಳ ನಗರಿʼ (Garden city) ಆಗಿದ್ದ ಕರ್ನಾಟಕದ ರಾಜಧಾನಿ ಬೆಂಗಳೂರನ್ನು (Bengaluru) ʼಐಟಿ ಸಿಟಿʼ ʼಸಿಲಿಕಾನ್ ಸಿಟಿʼ (IT city, silicon city) ಆಗಿಸುವದಲ್ಲಿ ಎಸ್ ಎಂ ಕೃಷ್ಣ ಅವರ ಕೊಡುಗೆ ದೊಡ್ಡದು.
1999ರ ಹೊತ್ತಿಗಾಗಲೇ ಬೆಂಗಳೂರಿಗೆ ಐಟಿ ಕಂಪನಿಗಳು ಕಾಲಿಡಲಾರಂಭಿಸಿದ್ದವು. ಅದೇ ವರ್ಷ ಕೃಷ್ಣ ಅವರ ನೇತೃತ್ವದ ಸರಕಾರ ಆಡಳಿತ ಆರಂಭಿಸಿತ್ತು. 1999ರಿಂದ 2004ರ ಕೃಷ್ಣ ಆಡಳಿತದ ಅವಧಿ. ಬೆಂಗಳೂರಿಗೆ ಬರುತ್ತಿದ್ದ ಕಂಪನಿಗಳಿಗೆ ರಿಯಾಯತಿ ದರದಲ್ಲಿ ಜಮೀನು , ನೀರು ಹಾಗೂ ವಿದ್ಯುತ್, ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು. ಸರ್ಕಾರಿ ಕಡತ ನಿರ್ವಹಣೆ ಸುಲಭ ಮಾಡಿದ್ದರು.
ಎಲ್ಲ ಕಾರ್ಯಕ್ಕೆ ಬೆಂಗಳೂರು ಟಾಸ್ಕ್ ಫೋರ್ಸ್ ಸ್ಥಾಪಿಸಿದರು. ಹೂಡಿಕೆ ಪ್ರಚೋದನೆ ಮತ್ತು ಆಡಳಿತಾತ್ಮಕ ಕಾರ್ಯಗಳಿಗಾಗಿ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಿದರು. ಕಾರ್ಮಿಕ ನೀತಿಗಳನ್ನು ವಿಶೇಷವಾಗಿ ಸಡಿಲಿಸಿದರು. ಕಾರ್ಮಿಕರು ಹಗಲಿರುಳು ದುಡಿಯಬಹುದು, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಹುದು ಎಂಬ ಅನುಕೂಲಗಳು ಐಟಿ ವಲಯದ ಬೆಳವಣಿಗೆಗೆ ಅನುಕೂಲವಾಯಿತು.
ಇನ್ಫೋಸಿಸ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಮೊದಲಾದ ಕಂಪನಿಗಳು ಇದರ ಲಾಭ ಪಡೆದು ಬೆಂಗಳೂರಿನಲ್ಲಿ ಗಟ್ಟಿಯಾಗಿ ನೆಲೆ ನಿಂತವು. ಪಕ್ಕದ ರಾಜ್ಯಗಳಿಂದ ಇಲ್ಲಿಗೆ ಲಕ್ಷಗಟ್ಟಲೆ ಉದ್ಯೋಗಿಗಳು ಬಂದು ದುಡಿಯತೊಡಗಿದರು.