
ಜೈಪುರದ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ: ಆರು ರೋಗಿಗಳು ಸಜೀವ ದಹನ
ಮೃತರನ್ನು ಪಿಂಟು (ಸಿಕಾರ್), ದಿಲೀಪ್ (ಜೈಪುರ), ಶ್ರೀನಾಥ್, ರುಕ್ಮಿಣಿ, ಖುರ್ಮಾ (ಎಲ್ಲರೂ ಭರತಪುರ), ಮತ್ತು ಬಹದ್ದೂರ್ (ಸಂಗಾನೇರ್, ಜೈಪುರ) ಎಂದು ಗುರುತಿಸಲಾಗಿದೆ.
ರಾಜಸ್ಥಾನದ ಜೈಪುರದಲ್ಲಿರುವ ಸರ್ಕಾರಿ ಸ್ವಾಮಿ ಮಾನ್ ಸಿಂಗ್ (SMS) ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಭಾನುವಾರ (ಅಕ್ಟೋಬರ್ 5) ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಆರು ಮಂದಿ ತೀವ್ರ ನಿಗಾ ಘಟಕದ (ಐಸಿಯು) ರೋಗಿಗಳು ಮೃತಪಟ್ಟಿದ್ದಾರೆ.
ಟ್ರಾಮಾ ಸೆಂಟರ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ನ್ಯೂರೋ ಐಸಿಯು ಶೇಖರಣಾ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಐಸಿಯುನಲ್ಲಿ 11 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಟ್ರಾಮಾ ಸೆಂಟರ್‌ನ ಮುಖ್ಯಸ್ಥ ಡಾ. ಅನುರಾಗ್ ಧಕಡ್ ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಮೃತರನ್ನು ಪಿಂಟು (ಸಿಕಾರ್), ದಿಲೀಪ್ (ಜೈಪುರ), ಶ್ರೀನಾಥ್, ರುಕ್ಮಿಣಿ, ಖುರ್ಮಾ (ಎಲ್ಲರೂ ಭರತಪುರ), ಮತ್ತು ಬಹದ್ದೂರ್ (ಸಂಗಾನೇರ್, ಜೈಪುರ) ಎಂದು ಗುರುತಿಸಲಾಗಿದೆ.
ರೋಗಿಗಳ ಸ್ಥಳಾಂತರ, ಸಿಬ್ಬಂದಿ ವಿರುದ್ಧ ಆರೋಪ
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಸಂಬಂಧಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಉಳಿದ ರೋಗಿಗಳನ್ನು ಹಾಸಿಗೆ ಸಮೇತ ಕಟ್ಟಡದ ಹೊರಗೆ ಸಾಗಿಸಿ ರಕ್ಷಿಸಿದ್ದಾರೆ. ಟ್ರಾಮಾ ಸೆಂಟರ್‌ನ ಎರಡು ಐಸಿಯುಗಳಲ್ಲಿ ಒಟ್ಟು 24 ರೋಗಿಗಳಿದ್ದರು. ಹೆಚ್ಚಿನ ರೋಗಿಗಳು ಕೋಮಾ ಸ್ಥಿತಿಯಲ್ಲಿದ್ದರಿಂದ ಅವರನ್ನು ಸ್ಥಳಾಂತರಿಸಲು ಸಿಬ್ಬಂದಿ ಹರಸಾಹಸ ಪಟ್ಟರು ಎಂದು ಡಾ. ಧಕಡ್ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಾಗ ದಟ್ಟ ಹೊಗೆ ವೇಗವಾಗಿ ಇಡೀ ಮಹಡಿಯಲ್ಲಿ ಹರಡಿ, ರೋಗಿಗಳು ಮತ್ತು ಅವರ ಕುಟುಂಬಸ್ಥರಲ್ಲಿ ಆತಂಕ ಸೃಷ್ಟಿಸಿತು. ಈ ದುರಂತದಲ್ಲಿ ಐಸಿಯು ಉಪಕರಣಗಳು, ರಕ್ತದ ಮಾದರಿಗಳು ಮತ್ತು ಇತರ ಪ್ರಮುಖ ದಾಖಲೆಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಕಿಟಕಿಗಳನ್ನು ಒಡೆದು ನೀರು ಹಾಯಿಸುವ ಮೂಲಕ ಬೆಂಕಿಯನ್ನು ನಂದಿಸಲಾಯಿತು.
ಸಿಬ್ಬಂದಿ ನಿರ್ಲಕ್ಷ್ಯದ ಆರೋಪ
ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸೇರಿದಂತೆ ಹಲವು ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ರೋಗಿಗಳ ಸಂಬಂಧಿಕರು, "ಬೆಂಕಿ ಕಾಣಿಸಿಕೊಂಡಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿದರು ಮತ್ತು ಬೆಂಕಿ ಹೆಚ್ಚಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾದರು," ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ 11:20ಕ್ಕೆ ಹೊಗೆ ಕಾಣಿಸಿಕೊಂಡಾಗ ವೈದ್ಯರಿಗೆ ಎಚ್ಚರಿಸಿದರೂ ಅವರು ಗಮನ ಹರಿಸಲಿಲ್ಲ. ನನ್ನ ಸಹೋದರ ಗುಣಮುಖನಾಗಿದ್ದು, ಇನ್ನು ಎರಡು-ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದ, ಆದರೆ ಈ ದುರಂತದಲ್ಲಿ ಆತ ಮೃತಪಟ್ಟ," ಎಂದು ಮೃತರೊಬ್ಬರ ಸಂಬಂಧಿ ಓಂ ಪ್ರಕಾಶ್ ಆರೋಪಿಸಿದ್ದಾರೆ.
"ಸಣ್ಣ ಕಿಡಿ ಕಾಣಿಸಿಕೊಂಡಾಗಲೇ ನಾವು ಸಿಬ್ಬಂದಿಗೆ ಹಲವು ಬಾರಿ ಹೇಳಿದೆವು. ಆದರೆ, ಅವರು ಇದು ಸಾಮಾನ್ಯ ಎಂದು ತಳ್ಳಿಹಾಕಿದರು. ಇದ್ದಕ್ಕಿದ್ದಂತೆ ಹೊಗೆ ಆವರಿಸಿ ಸಿಬ್ಬಂದಿ ಓಡಿಹೋದರು. ನನ್ನ ತಾಯಿಯನ್ನು ರಕ್ಷಿಸಲು ಯಾರೂ ಇರಲಿಲ್ಲ," ಎಂದು ಮತ್ತೊಬ್ಬ ಸಂಬಂಧಿ ಜೋಗೇಂದ್ರ ಸಿಂಗ್ ದೂರಿದ್ದಾರೆ.
ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್, "ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ. ಎಫ್‌ಎಸ್‌ಎಲ್ ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ," ಎಂದು ಹೇಳಿದ್ದಾರೆ.