ಕೇಜ್ರಿವಾಲ್ ನಾಚಿಕೆಯಿಲ್ಲದ ವ್ಯಕ್ತಿ: ನಿರ್ಮಲಾ ಸೀತಾರಾಮನ್‌
x

ಕೇಜ್ರಿವಾಲ್ ನಾಚಿಕೆಯಿಲ್ಲದ ವ್ಯಕ್ತಿ: ನಿರ್ಮಲಾ ಸೀತಾರಾಮನ್‌

ಮೇ 13 ರಂದು ತಮ್ಮ ಅಧಿಕೃತ ನಿವಾಸದಲ್ಲಿ ಮಲಿವಾಲ್ ಅವರ ಮೇಲೆ ನಡೆದ ಹಲ್ಲೆಗೆ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಎಂದು ವಿತ್ತ ಸಚಿವೆ ಒತ್ತಾಯಿಸಿದರು.


ನವದೆಹಲಿ, ಮೇ 17- ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಮೇಲಿನ ದಾಳಿ ಬಗ್ಗೆ ಮಾತನಾಡದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ʻನಾಚಿಕೆಯಿಲ್ಲದೆʼ ಆರೋಪಿ ಬಿಭವ್ ಕುಮಾರ್ ಅವರೊಂದಿಗೆ ತಿರುಗುತ್ತಿದ್ದಾರೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಟೀಕಿಸಿದ್ದಾರೆ.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 13 ರಂದು ತಮ್ಮ ಅಧಿಕೃತ ನಿವಾಸದಲ್ಲಿ ಮಲಿವಾಲ್ ಅವರ ಮೇಲೆ ನಡೆದ ಹಲ್ಲೆಗೆ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ‌ʻಎಎಪಿ ಸಂಸದ ಸಂಜಯ್ ಸಿಂಗ್ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಕೇಜ್ರಿವಾಲ್ ಮರುದಿನ ಲಕ್ನೋದಲ್ಲಿ ಆರೋಪಿಯೊಂದಿಗೆ ಕಾಣಿಸಿಕೊಂಡರು. ಇದು ಗಾಯಕ್ಕೆ ಉಪ್ಪು ಉಜ್ಜುವ ವರ್ತನೆ ಮತ್ತು ನಾಚಿಕೆಯಿಲ್ಲದ ಪರಮಾವಧಿ.ʼ ಎಂದು ಹೇಳಿದರು.

ನವದೆಹಲಿ ಲೋಕಸಭೆ ಅಭ್ಯರ್ಥಿ ಸೋಮನಾಥ್ ಭಾರ್ತಿ ಸೇರಿದಂತೆ ಹಲವು ಎಎಪಿ ನಾಯಕರ ವಿರುದ್ಧ ಮಹಿಳೆಯರು ಮೇಲೆ ಹಲ್ಲೆ ನಡೆಸಿದ ಆರೋಪಗಳಿವೆ. ಆಪ್‌ ಮಹಿಳಾ ವಿರೋಧಿ ಪಕ್ಷ. ಮಾಜಿ ಐಎಫ್‌ಎಸ್ ಅಧಿಕಾರಿ ಮತ್ತು ಎಎಪಿಯ ಸಂಸ್ಥಾಪಕ ಸದಸ್ಯೆ ಮಧು ಭಾದುರಿ ಅವರು ಪಕ್ಷ ಮಹಿಳೆಯರನ್ನು ಮನುಷ್ಯರಂತೆ ಪರಿಗಣಿಸುವುದಿಲ್ಲ ಮತ್ತು ಅದು ಖಾಪ್ ಪಂಚಾಯತ್ ಮನಸ್ಥಿತಿ ಹೊಂದಿದೆ ಎಂದು ಪಕ್ಷವನ್ನು ತೊರೆದರು,ʼ ಎಂದು ಅವರು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ,ʻಗರ್ಭಿಣಿ ಪತ್ನಿ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಭಾರ್ತಿಯನ್ನು ಗಾಂಧಿ ಕುಟುಂಬವರು ಬೆಂಬಲಿಸುತ್ತಿದ್ದಾರೆ. ಕೇಜ್ರಿವಾಲ್ ಮನೆಯಲ್ಲಿ ಇದ್ದಾಗಲೇ ಹಲ್ಲೆ ನಡೆದಿದೆ. ಅವರು ಪಕ್ಷದ ಸಂಸದೆ ಮೇಲಿನ ದಾಳಿ ಬಗ್ಗೆ ಮಾತನಾಡದೆ ಇರುವುದು ನಂಬಲಾಗದ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ,ʼ ಎಂದು ಹೇಳಿದರು.

ಇಂಡಿಯ ಒಕ್ಕೂಟದ ಪಕ್ಷಗಳು ಕೇಜ್ರಿವಾಲ್ ಅವರನ್ನು ಈ ಬಗ್ಗೆ ಸ್ಪಷ್ಟಪಡಿಸುವಂತೆ ಕೇಳಬೇಕು. ಪೊಲೀಸರಿಗೆ ದೂರು ನೀಡಲು ಮಲಿವಾಲ್ ಕೆಲವು ದಿನ ತೆಗೆದುಕೊಂಡಿದ್ದಾರೆ. ಅವರು ಒತ್ತಡಕ್ಕೆ ಒಳಗಾಗಿದ್ದಾರೆ,ʼ ಎಂದರು.

ಮಲಿವಾಲ್ ನೀಡಿದ ದೂರಿನ ಅನ್ವಯ ಶುಕ್ರವಾರ ಎಫ್‌ಐಆರ್ ದಾಖಲಾಗಿದೆ. ಮಲಿವಾಲ್ ಅವರು ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥರು.

Read More
Next Story