ಚುನಾವಣೆ 2024: ಶಿವಸೇನೆಯಿಂದ 17 ಅಭ್ಯರ್ಥಿಗಳು ಕಣಕ್ಕೆ
ಮಾ.27- ಶಿವಸೇನೆ (ಯುಬಿಟಿ) ಲೋಕಸಭೆ ಚುನಾವಣೆಗೆ 17 ಅಭ್ಯರ್ಥಿಗಳನ್ನು ಹೆಸರಿಸಿದೆ.
ವಂಚಿತ್ ಬಹುಜನ ಅಘಾಡಿ (ವಿಬಿಎ) ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್, ತಾವು ಉದ್ಧವ್ ಠಾಕ್ರೆ ನೇತೃತ್ವದ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದೇವೆ ಎಂದು ಘೋಷಿಸಿದ್ದಾರೆ. ಠಾಕ್ರೆ ನೇತೃತ್ವದ ಸೇನಾ ಬಣ ಬುಧವಾರ (ಮಾರ್ಚ್ 27) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಯಗಢ ಮತ್ತು ದಕ್ಷಿಣ ಮುಂಬೈ ಕ್ಷೇತ್ರಗಳಿಗೆ ಮಾಜಿ ಕೇಂದ್ರ ಸಚಿವರಾದ ಅನಂತ್ ಗೀತೆ ಮತ್ತು ಅರವಿಂದ್ ಸಾವಂತ್ ಅವರು ಸ್ಪರ್ಧಿಗಳಾಗಿರುವರು. ಠಾಣೆಯಿಂದ ರಾಜನ್ ವಿಚಾರೆ, ಮುಂಬೈ ವಾಯವ್ಯದಿಂದ ಅಮೋಲ್ ಕೀರ್ತಿಕರ್ ಮತ್ತು ಮುಂಬೈ ಈಶಾನ್ಯದಿಂದ ಸಂಜಯ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ.
ಠಾಕ್ರೆ ಬಣವು ಮಹಾ ವಿಕಾಸ್ ಅಘಾಡಿಯ ಭಾಗವಾಗಿದೆ. ಇದರಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಕೂಡ ಸೇರಿದೆ. 48 ಲೋಕಸಭೆ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಏಪ್ರಿಲ್ 19 ರಿಂದ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. 2019 ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ, ಸ್ಪರ್ಧಿಸಿದ್ದ 23 ಸ್ಥಾನಗಳಲ್ಲಿ 18ರಲ್ಲಿ ಗೆದ್ದಿದೆ.
ಜಾರಂಗೆ ಜೊತೆ ಮೈತ್ರಿ?: ಪ್ರಕಾಶ್ ಅಂಬೇಡ್ಕರ್ ಅವರು ಜಲ್ನಾ ಜಿಲ್ಲೆಯಲ್ಲಿ ಮರಾಠಾ ಹೋರಾಟಗಾರ ಜಾರಂಗೆ ಅವರನ್ನು ಭೇಟಿಯಾಗಿ, ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ಜಾರಂಗೆ ಅವರ ಊರು ಅಂತರವಾಲಿ ಸಾರತಿ ಗ್ರಾಮದಲ್ಲಿ ನಡೆದ ಸಭೆಯ ನಂತರ ಅಂಬೇಡ್ಕರ್,ʻನಾವು ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದೇವೆ,ʼ ಎಂದರು. ಒಟ್ಟಾಗಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ಅಂಬೇಡ್ಕರ್,ʻಸೂಕ್ತ ಸಮಯದಲ್ಲಿ ತಿಳಿಸುತ್ತೇವೆʼ ಎಂದರು.