
ರಾಹುಲ್ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ.ಬಹುಮಾನ: ಶಿವಸೇನೆ ಶಾಸಕ
ಮೀಸಲು ವ್ಯವಸ್ಥೆಯನ್ನು ರದ್ದುಗೊಳಿಸುವ ಕುರಿತ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂ. ನೀಡುವುದಾಗಿ ಹೇಳಿರುವ ಶಿವಸೇನಾ (ಶಿಂಧೆ) ಶಾಸಕ ಸಂಜಯ್ ಗಾಯಕ್ವಾಡ್ ವಿವಾದ ಸೃಷ್ಟಿಸಿದ್ದಾರೆ.
ಶಾಸಕರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಹೇಳಿದ್ದಾರೆ.
ʻರಾಹುಲ್ ಗಾಂಧಿ ವಿದೇಶದಲ್ಲಿದ್ದಾಗ ದೇಶದಲ್ಲಿ ಮೀಸಲು ಕೊನೆಗೊಳಿಸುವುದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್‌ನ ನಿಜವಾದ ಮುಖವನ್ನು ಬಯಲು ಮಾಡಿದೆ. ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರೂ. ನೀಡುತ್ತೇನೆ. ಕಾಂಗ್ರೆಸ್ ಡಾ.ಬಾಬಾಸಾಹೇಬ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತು,ʼ ಎಂದರು.
ʻರಾಹುಲ್ ಹೇಳಿಕೆ ಜನರಿಗೆ ಮಾಡಿದ ದೊಡ್ಡ ವಿಶ್ವಾಸಘಾತಕತನ. ಮರಾಠರು, ಧಂಗಾರ್‌ಗಳು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಿಗಾಗಿ ಹೋರಾಡುತ್ತಿವೆ. ರಾಹುಲ್ ಗಾಂಧಿ ಅವರು ಸಂವಿಧಾನವನ್ನು ತೋರಿಸುತ್ತ, ಬಿಜೆಪಿ ಅದನ್ನು ಬದಲಿಸುತ್ತದೆ ಎಂದು ನಕಲಿ ನಿರೂಪಣೆ ಹರಡುತ್ತಿದ್ದರು. ಆದರೆ, ಕಾಂಗ್ರೆಸ್ ದೇಶವನ್ನು 400 ವರ್ಷ ಹಿಂದಕ್ಕೆ ಕೊಂಡೊಯ್ಯುವ ಯೋಜನೆ ಹಾಕಿಕೊಂಡಿದೆ,ʼ ಎಂದರು.
ಅಂತರ ಕಾಯ್ದುಕೊಂಡ ಬಿಜೆಪಿ: ಗಾಯಕ್ವಾಡ್ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ʻನಾನು ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಅಥವಾ ಅನುಮೋದಿಸುವುದಿಲ್ಲ. ಆದರೆ, ಜವಾಹರಲಾಲ್ ನೆಹರು ಅವರು ಪ್ರಗತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಮೀಸಲನ್ನು ಹೇಗೆ ವಿರೋಧಿಸಿದರು ಎಂಬುದನ್ನು ಮರೆಯಬಾರದು,ʼ ಎಂದರು.
ʻಮೀಸಲು ನೀಡುವುದು ಎಂದರೆ ಮೂರ್ಖರನ್ನು ಬೆಂಬಲಿಸುವುದು ಎಂದು ರಾಜೀವ್ ಗಾಂಧಿ ಹೇಳಿದ್ದರು. ಈಗ ರಾಹುಲ್ ಅವರು ಮೀಸಲು ಕೊನೆಗೊಳಿಸುವುದಾಗಿ ಹೇಳಿದ್ದಾರೆ,ʼ ಎಂದು ಟೀಕಿಸಿದರು.
ಕಾಂಗ್ರೆಸ್ ವಾಗ್ದಾಳಿ: ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ, ʻಸಂಜಯ್ ಗಾಯಕ್‌ವಾಡ್ ಅಂಥವರು ಸಮಾಜ ಮತ್ತು ರಾಜಕೀಯದಲ್ಲಿರಲು ಅರ್ಹರಲ್ಲ. ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ಗಾಯಕ್‌ವಾಡ್ ವಿರುದ್ಧ ನರಹತ್ಯೆ ಆರೋಪವನ್ನು ಹೊರಿಸುತ್ತಾರೆಯೇ ಎಂದು ನೋಡೋಣ,ʼ ಎಂದು ಹೇಳಿದ್ದಾರೆ.
ʻಇಂತಹ ಜನ ಮತ್ತು ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ಇಂಥವರು ರಾಜ್ಯದ ರಾಜಕೀಯವನ್ನು ಹಾಳು ಮಾಡಿದ್ದಾರೆ,ʼ ಎಂದು ಕಾಂಗ್ರೆಸ್ ಎಂಎಲ್ಸಿ ಭಾಯಿ ಜಗತಾಪ್ ಹೇಳಿದ್ದಾರೆ.
ವಿವಾದ ಹೊಸದಲ್ಲ: ವಿದರ್ಭ ಪ್ರದೇಶದ ಬುಲ್ಧಾನ ವಿಧಾನಸಭಾ ಕ್ಷೇತ್ರದ ಶಾಸಕ ಗಾಯಕ್‌ವಾಡ್‌ಗೆ ವಿವಾದ ಹೊಸದೇನಲ್ಲ. ಕಳೆದ ತಿಂಗಳು ಅವರ ಕಾರನ್ನು ಪೊಲೀಸರು ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ವಾಹನದೊಳಗೆ ವಾಂತಿ ಮಾಡಿಕೊಂಡ ಪೊಲೀಸರು ಸ್ವಯಂಪ್ರೇರಣೆಯಿಂದ ವಾಹನ ಸ್ವಚ್ಛಗೊಳಿಸಿದರು ಎಂದು ಗಾಯಕ್ವಾಡ್ ಆನಂತರ ವಿವರಿಸಿದ್ದರು.
ತಾವು 1987 ರಲ್ಲಿ ಹುಲಿ ಬೇಟೆಯಾಡಿ, ಅದರ ಹಲ್ಲನ್ನು ಧರಿಸಿದ್ಧೇನೆ ಎಂದು ಫೆಬ್ರವರಿಯಲ್ಲಿ ಹೇಳಿದ್ದರು. ರಾಜ್ಯ ಅರಣ್ಯ ಇಲಾಖೆ ದಂತ ವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಆರೋಪ ಹೊರಿಸಿತು.