ಶಿಮ್ಲಾ: ‘ಅಕ್ರಮ’ ಮಸೀದಿ ವಿರುದ್ಧ ಕ್ರಮಕ್ಕೆ ಆಗ್ರಹ, ಘರ್ಷಣೆ
x

ಶಿಮ್ಲಾ: ‘ಅಕ್ರಮ’ ಮಸೀದಿ ವಿರುದ್ಧ ಕ್ರಮಕ್ಕೆ ಆಗ್ರಹ, ಘರ್ಷಣೆ

ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ಮಸೀದಿಯತ್ತ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ನೀರಿನ ಬುಗ್ಗೆಯನ್ನು ಹಾರಿಸಿ ಚದುರಿಸಲು ಪ್ರಯತ್ನಿಸಿದರು.


ಶಿಮ್ಲಾ: ಅಕ್ರಮ ಮಸೀದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಬೀದಿಗಿಳಿದ ನೂರಾರು ಮಂದಿ ಬುಧವಾರ (ಸೆಪ್ಟೆಂಬರ್ 11) ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.

ಹಿಮಾಚಲ ಪ್ರದೇಶದ ರಾಜಧಾನಿಯ ಸಂಜೌಲಿ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ಮಸೀದಿಯತ್ತ ಮೆರವಣಿಗೆ ನಡೆಸುತ್ತಿದ್ದ ಬಿಜೆಪಿ ಬೆಂಬಲಿತರು ಎನ್ನಲಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ನೀರಿನ ಬುಗ್ಗೆಯನ್ನು ಹಾರಿಸಿ ಚದುರಿಸಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ʻಹಿಮಾಚಲ ನೆ ತಾನಾ ಹೈ, ದೇವಭೂಮಿ ಕೊ ಬಚನಾ ಹೈʼ ಮತ್ತುʼ ಭಾರತ್ ಮಾತಾ ಕೀ ಜೈʼ ಎಂದು ಘೋಷಣೆ ಹಾಕಿದರು.

ಬಿಜೆಪಿ ಪಾತ್ರವಿದೆ- ಕಾಂಗ್ರೆಸ್: ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಸಲಹೆಗಾರ ನರೇಶ್ ಚೌಹಾಣ್, ʻಬಿಜೆಪಿ ಹಿಂದೂ-ಮುಸ್ಲಿಂ ಸಮಸ್ಯೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ,ʼ ಎಂದು ದೂರಿದ್ದಾರೆ.

ʻಇಲ್ಲಿ ಸೇರಿದ್ದ ಎಲ್ಲ ಜನರನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಈ 20-25 ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಆ ಪಕ್ಷದ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಬಯಸು ತ್ತದೆ. ವಾಸ್ತವವೆಂದರೆ, ಇದು ಹಿಂದು-ಮುಸ್ಲಿಂ ಸಮಸ್ಯೆ ಅಲ್ಲ. ಕಾನೂನು- ಸುವ್ಯವಸ್ಥೆಗೆ ಸಂಬಂಧಿಸಿದೆ. ಮಸೀದಿ ಅನಧಿಕೃತವಾಗಿ ನಿರ್ಮಾಣವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು,ʼ ಎಂದು ಹೇಳಿದರು.

ಗಲಭೆ ಪೀಡಿತ ಪ್ರದೇಶದಲ್ಲಿ ನಾಲ್ಕು ಅಥವಾ ಹೆಚ್ಚು ಜನರ ಸಭೆಯನ್ನುಅಧಿಕಾರಿಗಳು ನಿಷೇಧಿಸಿದ್ದರು. ಬುಧವಾರ ಜನರು ನಿಷೇಧಾಜ್ಞೆಯನ್ನುಉಲ್ಲಂಘಿಸಿದರು.

ಶಾಂತಿ ಕಾಪಾಡುವಂತೆ ಮನವಿ: ʻಮಸೀದಿಯಲ್ಲಿನ ಅಕ್ರಮ ನಿರ್ಮಾಣ ಕುರಿತು ಮುನ್ಸಿಪಲ್ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳುತ್ತದೆ,ʼ ಎಂದು ಮುಖ್ಯಮಂತ್ರಿ ಸುಕು ಹೇಳಿದರು.

ʻರಾಜ್ಯದಲ್ಲಿ ಎಂದೂ ಕೋಮುಗಲಭೆ ನಡೆದಿಲ್ಲ. ಹಿಮಾಚಲವನ್ನು ದೇವಭೂಮಿ ಎಂದು ಕರೆಯಲಾಗುತ್ತದೆ. ಪ್ರತಿಭಟನೆ ಮಾಡುವುದು ಜನರ ಹಕ್ಕು. ಆದರೆ, ಅದು ಕಾನೂನಿನ ಮಿತಿಯಲ್ಲಿ ನಡೆಯಬೇಕು,ʼ ಎಂದು ಹೇಳಿದರು.

ಅಕ್ರಮ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಜೈರಾಮ್ ಠಾಕೂರ್ ಟೀಕಿಸಿದರು. ʻಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿತ್ತು. ವಿಳಂಬದಿಂದ ಜನ ಕ್ಷೋಭೆಗೊಳಗಾಗಿದ್ದಾರೆ. ಹಿಂದುಗಳು ಮತ್ತು ಸ್ಥಳೀಯರ ಭಾವನೆಗಳನ್ನು ಗೌರವಿಸಬೇಕು,ʼ ಎಂದು ಹೇಳಿದರು.

Read More
Next Story