Shashi Tharoor praises Modi: Senior leaders wash their hands of personal opinion!
x

ಪಿಎಂ ಮೋದಿ ಹಾಗೂ ಕಾಂಗ್ರೆಸ್‌ ಸಂಸದ ಶಶಿ ತರೂರ್‌

ಮೋದಿ ಹೊಗಳಿದ ಶಶಿ ತರೂರ್: 'ವೈಯಕ್ತಿಕ ಅಭಿಪ್ರಾಯ' ಎಂದು 'ಕೈ' ತೊಳೆದುಕೊಂಡ ಹಿರಿಯ ನಾಯಕರು!

ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಇತ್ತೀಚೆಗೆ ನೀಡಿದ "ಪ್ರಧಾನಿಯ ಸೋಲನ್ನು ಸಂಭ್ರಮಿಸುವುದು ಭಾರತದ ಸೋಲನ್ನು ಸಂಭ್ರಮಿಸಿದಂತೆ" ಎಂಬ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.


Click the Play button to hear this message in audio format

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಗುಣಗಾನ ಮಾಡುವ ಮೂಲಕ ಸ್ವಪಕ್ಷದ ನಾಯಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದೆಹಲಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತರೂರ್ ಭಾಗವಹಿಸಿದ ಬೆನ್ನಲ್ಲೇ, ಅವರ ಹೇಳಿಕೆಗಳು ಪಕ್ಷದ ನಿಲುವಿಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ದೂರಿದ್ದಾರೆ.

ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಇತ್ತೀಚೆಗೆ ನೀಡಿದ "ಪ್ರಧಾನಿಯ ಸೋಲನ್ನು ಸಂಭ್ರಮಿಸುವುದು ಭಾರತದ ಸೋಲನ್ನು ಸಂಭ್ರಮಿಸಿದಂತೆ" ಎಂಬ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ವಿದೇಶಾಂಗ ನೀತಿಯು ಕೇವಲ ಒಂದು ಪಕ್ಷಕ್ಕೆ ಸೇರಿದ್ದಲ್ಲ, ಅದು ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ್ದು ಎಂಬ ಅರ್ಥದಲ್ಲಿ ತರೂರ್ ಮಾತನಾಡಿದ್ದರು. ಆದರೆ, ಸದಾ ಪ್ರಧಾನಿ ಮೋದಿ ಅವರ ನೀತಿಗಳನ್ನು ವಿರೋಧಿಸುವ ಕಾಂಗ್ರೆಸ್ ಪಾಳಯದಲ್ಲಿ ಈ ಮಾತುಗಳು ಸಂಚಲನ ಮೂಡಿಸಿವೆ. ತರೂರ್ ಅವರು ರಾಮನಾಥ್ ಗೋಯೆಂಕಾ ಉಪನ್ಯಾಸದ ವೇಳೆ ಪ್ರಧಾನಿ ಮೋದಿ ನೀಡಿದ ಭಾಷಣವನ್ನು ಬಹಿರಂಗವಾಗಿ ಹೊಗಳಿದ್ದು ಕೂಡ ಪಕ್ಷದ ನಾಯಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

'ವೈಯಕ್ತಿಕ ಅಭಿಪ್ರಾಯ' ಎಂದ ಕಾಂಗ್ರೆಸ್ ನಾಯಕರು

ಶಶಿ ತರೂರ್ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ಕೂಡಲೇ ತಳ್ಳಿಹಾಕಿದ್ದು, ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಶನಿವಾರ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ವಿ. ಹನುಮಂತ ರಾವ್ ಅವರು, "ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವವಿದೆ, ಹಾಗಾಗಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇದು ತರೂರ್ ಅವರ ವೈಯಕ್ತಿಕ ಆಲೋಚನೆಯಾಗಿರಬಹುದೇ ಹೊರತು ಕಾಂಗ್ರೆಸ್ ಪಕ್ಷದ ನಿಲುವಲ್ಲ" ಎಂದು ಹೇಳಿದರು. ಇದೇ ವೇಳೆ ಅವರು ಬೇರೆ ಪಕ್ಷಗಳಲ್ಲಿ ಇಂತಹ ಹೇಳಿಕೆ ನೀಡಿದ್ದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿತ್ತು ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಿಸ್ತು ಕ್ರಮದ ಸೂಚನೆಯನ್ನೂ ನೀಡಿದ್ದಾರೆ.

ತರೂರ್ ಧೈರ್ಯ ಮೆಚ್ಚಿದ ಬಿಜೆಪಿ

ಇದೇ ವೇಳೆ ಶಶಿ ತರೂರ್ ಅವರ ಹೇಳಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು, ತರೂರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ನಡೆಸುತ್ತಿರುವ ಅಪಪ್ರಚಾರಕ್ಕೆ ತರೂರ್ ಅವರು ಸರಿಯಾದ ಕನ್ನಡಿ ತೋರಿಸಿದ್ದಾರೆ ಎಂದು ಪೂನಾವಾಲಾ ವ್ಯಂಗ್ಯವಾಡಿದ್ದಾರೆ. "ತರೂರ್ ಅವರು ರಾಷ್ಟ್ರ ಹಿತಾಸಕ್ತಿಯನ್ನು ಕುಟುಂಬದ ಹಿತಾಸಕ್ತಿಗಿಂತ ಮೇಲೆಂದು ಪರಿಗಣಿಸಿದ್ದಾರೆ. ಈ ಸತ್ಯವನ್ನು ಹೇಳಿದ್ದಕ್ಕಾಗಿ ಕಾಂಗ್ರೆಸ್ ಅವರ ವಿರುದ್ಧ ಫತ್ವಾ ಹೊರಡಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಪೂನಾವಾಲಾ ಕುಟುಕಿದ್ದಾರೆ. ರಾಹುಲ್ ಗಾಂಧಿ ಅವರ ದ್ವೇಷವು ಬಿಜೆಪಿಯನ್ನು ಮೀರಿ ಭಾರತದ ಮೇಲೆಯೇ ಹರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ತರೂರ್

ಕಳೆದ ಕೆಲವು ದಿನಗಳಿಂದ ಶಶಿ ತರೂರ್ ಅವರು ಕಾಂಗ್ರೆಸ್‌ನ ಪ್ರಮುಖ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿರುವುದು ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಲೋಕಸಭಾ ಸಂಸದರ ಸಭೆಗೂ ತರೂರ್ ಗೈರಾಗಿದ್ದರು. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ಅವರ ಆಪ್ತ ಮೂಲಗಳು ತಿಳಿಸಿದ್ದರೂ, ತರೂರ್ ಅವರು ಬಿಜೆಪಿ ನಾಯಕರನ್ನು ಹೊಗಳುತ್ತಿರುವುದು ಕೈ ಪಾಳಯದಲ್ಲಿ ಬಿರುಕು ಮೂಡಿಸಿದೆ. ಆದಾಗ್ಯೂ, ಶನಿವಾರ ನಡೆದ ಸಿಡಬ್ಲ್ಯೂಸಿ ಸಭೆಗೆ ಅವರು ಹಾಜರಾಗಿದ್ದು, ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದಾರೆ.

Read More
Next Story