
'ವೋಟ್ ಚೋರಿ' ಆರೋಪ: ರಾಹುಲ್ ಗಾಂಧಿಗೆ ಶಶಿ ತರೂರ್ ಬೆಂಬಲ
ಗುರುವಾರ ಈ ಕುರಿತು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಶಶಿ ಥರೂರ್, "ಇವು ಗಂಭೀರ ಪ್ರಶ್ನೆಗಳಾಗಿದ್ದು, ಎಲ್ಲ ಪಕ್ಷಗಳು ಹಾಗೂ ಮತದಾರರ ಹಿತದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
2024ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಮತ್ತು ಬಿಜೆಪಿ ಶಾಮೀಲಾಗಿ "ದೊಡ್ಡ ಮಟ್ಟದ ವಂಚನೆ" ನಡೆಸಿವೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಮತಗಳವು' ಆರೋಪಕ್ಕೆ ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ದನಿಗೂಡಿಸಿದ್ದಾರೆ. ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಕಾಪಾಡಲು ಚುನಾವಣಾ ಆಯೋಗವು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗುರುವಾರ ಈ ಕುರಿತು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಶಶಿ ಥರೂರ್, "ಇವು ಗಂಭೀರ ಪ್ರಶ್ನೆಗಳಾಗಿದ್ದು, ಎಲ್ಲ ಪಕ್ಷಗಳು ಹಾಗೂ ಮತದಾರರ ಹಿತದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಪ್ರಜಾಪ್ರಭುತ್ವವು ಅತ್ಯಮೂಲ್ಯವಾಗಿದ್ದು, ಅದರ ವಿಶ್ವಾಸಾರ್ಹತೆಯನ್ನು ಅಸಮರ್ಥತೆ, ಅಸಡ್ಡೆ ಅಥವಾ ಉದ್ದೇಶಪೂರ್ವಕ ಹಸ್ತಕ್ಷೇಪದಿಂದ ನಾಶಮಾಡಲು ಬಿಡಬಾರದು" ಎಂದು ಹೇಳಿದ್ದಾರೆ. "ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಹೇಗೆ ಕದಿಯಲಾಯಿತು" ಎಂಬ ಕಾಂಗ್ರೆಸ್ ಪಕ್ಷದ ಅಧಿಕೃತ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಅವರು ರಾಹುಲ್ ಗಾಂಧಿಯವರ ಆರೋಪಗಳಿಗೆ ತಮ್ಮ ಬೆಂಬಲವನ್ನು ಸ್ಪಷ್ಟಪಡಿಸಿದರು.
ಗುರುವಾರ (ಆಗಸ್ಟ್ 7) ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಆಡಳಿತಾರೂಢ ಬಿಜೆಪಿಯ ಸೂಚನೆಯಂತೆ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಕರ್ನಾಟಕದ ಮತದಾರರ ಪಟ್ಟಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅಂಕಿಅಂಶ ಸಹಿತ ವಿವರಿಸಿದ್ದ ಅವರು, ನಕಲಿ ಮತದಾರರ ಸೇರ್ಪಡೆ, ಒಂದೇ ವಿಳಾಸದಲ್ಲಿ ಹಲವು ಮತದಾರರ ನೋಂದಣಿ, ಅಮಾನ್ಯ ವಿಳಾಸಗಳ ಬಳಕೆ ಸೇರಿದಂತೆ ಐದು ಪ್ರಮುಖ ವಿಧಾನಗಳ ಮೂಲಕ ಅಕ್ರಮ ನಡೆದಿದೆ ಎಂದು ದೂರಿದ್ದರು. ಕಳೆದ 10-15 ವರ್ಷಗಳ ಯಂತ್ರ ಓದಬಲ್ಲ (machine-readable) ಮತದಾರರ ಮಾಹಿತಿ ಹಾಗೂ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದ ರಾಹುಲ್, "ಈ ಮಾಹಿತಿಯನ್ನು ನೀಡಲು ವಿಫಲವಾದರೆ, ಆಯೋಗವು ಈ ಅಪರಾಧದಲ್ಲಿ ಭಾಗಿಯಾದಂತೆ" ಎಂದು ಎಚ್ಚರಿಸಿದ್ದರು.
ರಾಹುಲ್ ಗಾಂಧಿಯವರ ಆರೋಪಗಳನ್ನು "ಆಧಾರರಹಿತ" ಎಂದು ಬಣ್ಣಿಸಿರುವ ಬಿಜೆಪಿ, ಸರಣಿ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ತಿರುಗೇಟು ನೀಡಿದೆ. ಚುನಾವಣಾ ಗೆಲುವನ್ನು ವಂಚನೆ ಎಂದು ಕರೆಯುವ ಮೂಲಕ ರಾಹುಲ್ ಗಾಂಧಿ ಅವರು ದೇಶದ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.