ಚುನಾವಣೆ ವೇಳಾಪಟ್ಟಿ: ಮೋದಿ, ಚುನಾವಣೆ ಆಯೋಗವನ್ನು ಟೀಕಿಸಿದ ಪವಾರ್
ಪ್ರಧಾನಿ ನರೇಂದ್ರ ಮೋದಿಯವರು ʻಒಂದು ರಾಷ್ಟ್ರ ಒಂದು ಚುನಾವಣೆʼ ಎಂದು ಪ್ರತಿಪಾದಿಸಿದರೆ, ಚುನಾವಣೆ ಆಯೋಗವು ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಿಲ್ಲ ಎಂದು ಪವಾರ್ ಟೀಕಿಸಿದರು.
ಹರಿಯಾಣ ಮತ್ತು ಜಮ್ಮು-ಕಾಶ್ಮೀರದೊಟ್ಟಿಗೆ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯನ್ನು ಘೋಷಿಸದ ಚುನಾವಣಾ ಆಯೋಗವನ್ನು ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಟೀಕಿಸಿದ್ದಾರೆ.
ನಾಗ್ಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪವಾರ್, ಪ್ರಧಾನಿ ʻಒಂದು ರಾಷ್ಟ್ರ ಒಂದು ಚುನಾವಣೆʼ ಎಂದು ಹೇಳುತ್ತಿದ್ದರೆ, ಚುನಾವಣಾ ಆಯೋಗವು ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಮೋದಿ ಹೇಳುವುದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದರು.
ಚುನಾವಣೆ ಆಯೋಗವು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತ ಮತ್ತು ಹರಿಯಾಣದಲ್ಲಿ ಒಂದು ಹಂತದ ಚುನಾವಣೆ ಯನ್ನು ಘೋಷಿಸಿದೆ. 2019 ರಲ್ಲಿ ಹರಿಯಾಣದ ಜೊತೆಗೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚು ಸಂಖ್ಯೆ ಯ ಭದ್ರತೆ ಸಿಬ್ಬಂದಿ ಅಗತ್ಯವಿರುವುದರಿಂದ, ಮಹಾರಾಷ್ಟ್ರದಲ್ಲಿ ಆನಂತರ ಚುನಾವಣೆ ಘೋಷಿಸಲಾಗುವುದು ಎಂದು ಆಯೋಗ ಹೇಳಿದೆ.
ಪ್ರವಾದಿ ಕುರಿತ ಹಿಂದೂ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ಅವರ ಹೇಳಿಕೆಯಿಂದ ನಾಸಿಕ್ ಮತ್ತು ಛತ್ರಪತಿ ಸಂಭಾಜಿನಗರದಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಸಮಾಜದ ಹಿತಾಸಕ್ತಿಗೆ ಸಂಬಂಧಿಸಿಲ್ಲ. ಇಂದು ಶಾಂತಿಯ ಅವಶ್ಯಕತೆಯಿದೆ. ಸಮಾಜ ಮತ್ತು ರಾಜಕಾರಣಿಗಳು ತಾಳ್ಮೆ ಮತ್ತು ಜಾಗರೂಕರಾಗಿರಬೇಕು,ʼ ಎಂದು ಹೇಳಿದರು.
ಬಿಜೆಪಿ ತನ್ನ ನಕಲಿ ಭರವಸೆಗಳಿಂದ ಮಹಾರಾಷ್ಟ್ರದ ಜನರನ್ನು ʻಮೂರ್ಖʼರನ್ನಾಗಿ ಮಾಡಲು ಹೆಚ್ಚು ಸಮಯ ಬೇಕಿರುವುದರಿಂದ, ಚುನಾವಣೆ ದಿನಾಂಕ ಪ್ರಕಟಿಸಿಲ್ಲ ಎಂದು ಪ್ರತಿಪಕ್ಷಗಳು ಈ ಹಿಂದೆ ಹೇಳಿದ್ದವು.