ಶೇ.50 ಮೀಸಲು ಮಿತಿ ತೆಗೆದುಹಾಕಿ: ಶರದ್ ಪವಾರ್
ಸಾಂಗ್ಲಿ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿರುವ ಶೇ. 50 ರಷ್ಟು ಮೀಸಲು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರು ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಮರಾಠರಿಗೆ ಮೀಸಲು ನೀಡುವಾಗ ಇತರ ಸಮುದಾಯಗಳ ಮೀಸಲಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರಸ್ತುತ ಮೀಸಲು ಮಿತಿ ಶೇ. 50 ಇದೆ. ಆದರೆ, ತಮಿಳುನಾಡು ಶೇ 78 ಮೀಸಲು ನೀಡಬಹುದಾದರೆ, ಮಹಾರಾಷ್ಟ್ರದಲ್ಲಿ ಶೇ. 75 ಮೀಸಲು ಏಕೆ ಸಾಧ್ಯವಿಲ್ಲ? ಕೇಂದ್ರ ಕೋಟಾ ಮಿತಿ ಹೆಚ್ಚಿಸಲು ಸಂವಿಧಾನ ತಿದ್ದುಪಡಿ ತರಬೇಕು. ನಾವು ತಿದ್ದುಪಡಿಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.
ʻಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರ ನಡುವೆ ಸೀಟು ಹಂಚಿಕೆ ಮಾತುಕತೆ ಸಾಧ್ಯವಾದಷ್ಟು ಬೇಗ ಮುಗಿಸಲು ಸಲಹೆ ನೀಡುತ್ತೇನೆ. ಇದರಿಂದ ಬದಲಾವಣೆ ಬಯಸುತ್ತಿರುವ ಜನರ ಬಳಿಗೆ ಹೋಗಬಹುದು. ಜನ ಸರ್ಕಾರ ಬದಲಿಸಲು ಸಿದ್ಧವಿದ್ದಾರೆ ಮತ್ತು ಎಂವಿಎ ಅವರ ಭಾವನೆಗಳನ್ನು ಗೌರವಿಸಬೇಕು,ʼ ಎಂದು ಪವಾರ್ ಹೇಳಿದರು.
ಎಂವಿಎ ಪಾಲುದಾರರಾದ ಎನ್‌ಸಿಪಿ (ಎಸ್‌ಪಿ), ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಿ, ರಾಜ್ಯದ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದಿವೆ.
ಮರಾಠಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿರುವುದನ್ನು ಸ್ವಾಗತಿಸಿರುವ ಅವರು, ಅದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಆದರೆ, ಮರಾಠಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ರಾಜ್ಯದಲ್ಲಿ ಮರಾಠಿ ಭಾಷೆಯ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು ಎಂದು ಪವಾರ್ ಹೇಳಿದರು.
ʻ'ಸಾಂಗ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಸರಕಾರ 4 ಕೋಟಿ ರೂ. ನೀಡಬೇಕಿದೆ. ರಾಜ್ಯಾದ್ಯಂತ ಕ್ಯಾನ್ಸರ್ ಆಸ್ಪತ್ರೆಗಳ ನೆರವಿನ ಬಾಕಿ 700 ಕೋಟಿ ರೂ.ಇದೆ. ವೈದ್ಯಕೀಯ ಕ್ಷೇತ್ರದ ಪರಿಸ್ಥಿತಿ ಹೀಗಾದರೆ, ಇನ್ನುಳಿದ ಕ್ಷೇತ್ರಗಳ ಸ್ಥಿತಿ ಹೇಗಿರಬಹುದು? ಬದ್ಲಾಪುರ್ ಪ್ರಕರಣದಂತಹ ಘಟನೆಗಳ ಬಗ್ಗೆ ರಾಜ್ಯದಲ್ಲಿ ಕೋಪವಿದೆ,ʼ ಎಂದು ಹೇಳಿದರು.
ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ‘ಲಡ್ಕಿ ಬಹಿನ್’ ಯೋಜನೆಯು ಇತರ ವಲಯಗಳಲ್ಲಿ ಸಬ್ಸಿಡಿ ಪಾವತಿ ಮೇಲೆ ಪರಿಣಾಮ ಬೀರಬಹುದು ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಂತಹ ಯೋಜನೆಗಳನ್ನು ‘ರೇವ್ಡಿ ಸಂಸ್ಕೃತಿ’ ಎಂದು ಕರೆದಿದ್ದಾರೆ. ಅದನ್ನು ನಿಲ್ಲಿಸಬೇಕು ಎಂದು ಹೇಳಿದರು.
ʻಪ್ರತಿಪಕ್ಷಗಳು ತಮಗೆ ಪ್ರಧಾನಿ ಕುರ್ಚಿಯನ್ನು ಹಲವು ಬಾರಿ ನೀಡಿದ್ದವು,ʼ ಎಂಬ ಗಡ್ಕರಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ʻನಾವು ಅಂತಹ ಯಾವುದೇ ಪ್ರಸ್ತಾಪ ಮಾಡಿಲ್ಲ.ನಮಗೆ ಬಹುಮತ ಇಲ್ಲದಿದ್ದರೆ, ಅಂತಹ ಪ್ರಸ್ತಾಪ ಹೇಗೆ ನೀಡಲು ಸಾಧ್ಯ?ʼ ಎಂದು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮಾತನಾಡಿದ 18 ಸಭೆ ನಡೆದ 14 ಕ್ಷೇತ್ರಗಳಲ್ಲಿ ಸೋತಿದ್ದಾರೆ. ವಿಧಾನಸಭೆ ಚುನಾವಣೆಗೂ ಅವರು ಹಲವು ಕಡೆ ಮಾತನಾಡಬೇಕು ಎಂದು ವ್ಯಂಗ್ಯವಾಡಿದರು.
ಶಿವಸೇನೆ ಪ್ರತಿಕ್ರಿಯೆ: ಆದರೆ, ಮಹಾರಾಷ್ಟ್ರ ಚುನಾವಣೆಗೆ ಮುನ್ನ ಪವಾರ್ ಈ ವಿಷಯವನ್ನು ಏಕೆ ಎತ್ತುತ್ತಿದ್ದಾರೆ? ಅವರು ಮುಖ್ಯಮಂತ್ರಿಯಾಗಿದ್ದಾಗ ಸಮಸ್ಯೆಯನ್ನು ಪರಿಹರಿಸಲು ಏನು ಮಾಡಿದರು?ʼ ಎಂದು ಶಿವಸೇನೆ ವಕ್ತಾರ ಮತ್ತು ಶಾಸಕ ಸಂಜಯ್ ಶಿರ್ಸಾತ್ ಪ್ರಶ್ನಿಸಿದ್ದಾರೆ.
ʻಶರದ್ ಪವಾರ್ ನಾಲ್ಕು ಬಾರಿ ಮಹಾರಾಷ್ಟ್ರದ ಸಿಎಂ ಆಗಿದ್ದರು ಮತ್ತು ಆಗ ಕಾಂಗ್ರೆಸ್ ಬಹುಮತ ಹೊಂದಿತ್ತು.ಆಗ ಸುಮ್ಮನಿದ್ದು ಚುನಾವಣೆ ಸಮೀಪಿಸುತ್ತಿರುವಾಗ ಅದರ ಬಗ್ಗೆ ಮಾತನಾಡುತ್ತಿದ್ದಾರೆ,ʼ ಎಂದು ಛತ್ರಪತಿ ಸಂಭಾಜಿನಗರದಲ್ಲಿ ಹೇಳಿದರು.