ತುರ್ತು ಪರಿಸ್ಥಿತಿ ಕುರಿತ ಸ್ಪೀಕರ್‌ ಹೇಳಿಕೆ ಸೂಕ್ತವಲ್ಲ: ಪವಾರ್‌
x

ತುರ್ತು ಪರಿಸ್ಥಿತಿ ಕುರಿತ ಸ್ಪೀಕರ್‌ ಹೇಳಿಕೆ ಸೂಕ್ತವಲ್ಲ: ಪವಾರ್‌


ಕೊಲ್ಲಾಪುರ, ಜೂನ್ 29- ʻಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಭಾಷಣದಲ್ಲಿ ಮಾಡಿದ ತುರ್ತು ಪರಿಸ್ಥಿತಿಯ ಉಲ್ಲೇಖ ಸೂಕ್ತವಲ್ಲ ಮತ್ತು ಅವರ ಸ್ಥಾನದ ಗೌರವಕ್ಕೆ ಸರಿಹೊಂದುವುದಿಲ್ಲ,ʼ ಎಂದು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಶನಿವಾರ ಹೇಳಿದ್ದಾರೆ.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪವಾರ್, ʻಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿರುವ ಘೋಷಣೆಗಳು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ತಾವು ಏನಾದರೂ ದೊಡ್ಡದನ್ನು ಮಾಡುತ್ತಿದ್ದೇವೆ ಎಂದು ಬಿಂಬಿಸುವ ಪ್ರಯತ್ನವಾಗಿದೆ,ʼ ಎಂದು ಹೇಳಿದರು.

ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಕೂಡಲೇ ಓಂ ಬಿರ್ಲಾ ಅವರು ಬುಧವಾರ ʻತುರ್ತುಪರಿಸ್ಥಿತಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಯವರು ಸಂವಿಧಾನದ ಮೇಲಿನ ಮಾಡಿದ ದಾಳಿʼ ಎಂದು ಹೇಳಿ, ಬಿರುಗಾಳಿ ಎಬ್ಬಿಸಿದ್ದರು.

ಇದನ್ನು ಉಲ್ಲೇಖಿಸಿದ ಪವಾರ್, ʻಸ್ಪೀಕರ್ ತಮ್ಮ ಭಾಷಣದಲ್ಲಿ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿರುವುದು ಆ ಹುದ್ದೆಯ ಸ್ಥಾನಮಾನಕ್ಕೆ ಸರಿಹೊಂದುವುದಿಲ್ಲ.ತುರ್ತು ಪರಿಸ್ಥಿತಿ ಬಳಿಕ 50 ವರ್ಷಗಳು ಕಳೆದಿವೆ; ಇಂದಿರಾಗಾಂಧಿ ಅವರು ಈಗ ಬದುಕಿಲ್ಲ. ಸ್ಪೀಕರ್ ಇದನ್ನು ಏಕೆ ಉಲ್ಲೇಖಿಸುತ್ತಿದ್ದಾರೆ? ರಾಜಕೀಯ ಹೇಳಿಕೆ ನೀಡುವುದು ಸ್ಪೀಕರ್ ಕೆಲಸವೇ? ಅವರ ಹೇಳಿಕೆ ಸೂಕ್ತವಲ್ಲ ಎಂದು ಭಾವಿಸುತ್ತೇವೆ. ರಾಷ್ಟ್ರಪತಿ ಅವರ ಭಾಷಣದಲ್ಲಿಯೂ ಈ ಬಗ್ಗೆ ಪ್ರಸ್ತಾಪವಿದೆ. ಅದು ಕೂಡ ಅಗತ್ಯವಿರಲಿಲ್ಲ,ʼ ಎಂದು ಹೇಳಿದರು.

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಅತಿ ಹೆಚ್ಚು ಸಂಸದರನ್ನು ಹೊಂದಿರುವ ಪ್ರತಿಪಕ್ಷವು ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ನಿರ್ಧರಿಸುತ್ತದೆ ಎಂದು ಹೇಳಿದರು.

ʻಕಾಂಗ್ರೆಸ್‌ ಸಂಸದರು ರಾಹುಲ್ ಗಾಂಧಿ ಅವರನ್ನು ತಮ್ಮ ನಾಯಕನನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ರಾಜಕೀಯದ ಹಿನ್ನೆಲೆಯುಳ್ಳ ಹೊಸ ಪೀಳಿಗೆಗೆ ಪ್ರಾತಿನಿಧ್ಯ ಸಿಕ್ಕಿದೆ ಮತ್ತು ಅವರು ಅಧಿಕ ಶ್ರಮಪಡುವ ಇಚ್ಛೆ ಪ್ರದರ್ಶಿಸಿದ್ದಾರೆ. ಅವರು ಯಶಸ್ಸಾಗುತ್ತಾರೆ ಎಂಬ ಖಾತ್ರಿಯಿದೆ,ʼ ಎಂದು ಹೇಳಿದರು.

‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಹೇಳಿಕೆ ನೀಡಿದ ಬಿಜೆಪಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸ್ಥಾನ ಗಳಿಸಿತ್ತು ಮತ್ತು ಈ ಚುನಾವಣೆಯಲ್ಲಿ ಎಷ್ಟು ಸ್ಥಾನ ಗಳಿಸಿದೆ ಎಂಬುದನ್ನು ಗಮನಿಸಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ʻಬಿಜೆಪಿಗೆ ಸಂಸತ್ತಿನಲ್ಲಿ ಬಹುಮತವಿಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಇಲ್ಲದಿದ್ದರೆ ಅವರು ಸರ್ಕಾರ ರಚಿಸುತ್ತಿರಲಿಲ್ಲ. ಎಷ್ಟು ಮರೆಮಾಚಲು ಪ್ರಯತ್ನಿಸಿದರೂ ಸತ್ಯ ಸ್ಪಷ್ಟವಾಗಿದೆ - ಅವರಿಗೆ ಸ್ಪಷ್ಟ ಜನಾದೇಶವಿಲ್ಲ,ʼ ಎಂದು ಹೇಳಿದರು.

ರಾಜ್ಯ ಬಜೆಟ್‌ ಕುರಿತು ಮಾತನಾಡಿ, ʼಇದು ಯಾವ ರೀತಿಯ ಬಜೆಟ್? ಬಜೆಟ್ಟಿನಲ್ಲಿರುವ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಪಂಢರಾಪುರಕ್ಕೆ ತೀರ್ಥಯಾತ್ರೆ ಮಾಡುವ ಪ್ರತಿ ಗುಂಪಿಗೆ 20,000 ರೂ.ಸೇರಿದಂತೆ ಎಲ್ಲ ಅಂಶಗಳು ವಿಧಾನ ಭವನದಲ್ಲಿ ಮಂಡನೆಯಾಗುವ ಮೊದಲೇ ಸಾರ್ವಜನಿಕಗೊಂಡಿದ್ದವು. ಇದಕ್ಕೆ ಎರಡು ಅರ್ಥಗಳಿವೆ - ಬಜೆಟ್ ಅನ್ನು ಗೋಪ್ಯವಾಗಿಡುವ ಸಂಪ್ರದಾಯವನ್ನು ಉಳಿಸಿಕೊಂಡಿಲ್ಲ ಮತ್ತು ಬಜೆಟ್‌ನಲ್ಲಿ ಮಂಡಿಸಿದ ಯಾವುದೇ ಭರವಸೆ ಜಾರಿಗೊಳ್ಳುವುದಿಲ್ಲ.

ʻ3 ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ. ನೀಡಿರುವ ಭರವಸೆ ಗಳಿಗೆ ಹೇಗೆ ಹಣ ಹೊಂದಿಸುತ್ತಾರೆ? ನನ್ನ ಜೇಬಿನಲ್ಲಿ 70 ರೂ.ಇರುವಾಗ 100 ರೂ. ಖರ್ಚು ಮಾಡುವುದು ಹೇಗೆ? ನಾವು ಏನಾದರೂ ಮಾಡು ತ್ತಿದ್ದೇವೆ ಎಂಬುದನ್ನು ತೋರಿಸಲು ಬಜೆಟ್‌ ಮಂಡಿಸಲಾಗಿದೆ. ಆದರೆ ಜನರು ಇದನ್ನು ನಂಬುವುದಿಲ್ಲ ಎಂದು ನನಗೆ ಖಾತ್ರಿಯಿದೆ,ʼ ಎಂದು ಅವರು ಕೇಳಿದರು.

ʻಸರ್ಕಾರ ಉತ್ತರಿಸಬೇಕಾದ ಪ್ರಶ್ನೆಗಳೆಂದರೆ - ನೀವು ಯಾವ ರೀತಿ ಆದಾಯ ಸಂಗ್ರಹಿಸುತ್ತೀರಿ, ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಮತ್ತು ಇವೆರಡರ ನಡುವಿನ ಅಂತರವನ್ನು ಹೇಗೆ ಸರಿದೂಗಿಸುತ್ತೀರಿ? ಕಂದರಗಳನ್ನು ಮುಚ್ಚದೆ, ಸರ್ಕಾರ ಭರವಸೆಯನ್ನು ಹೇಗೆ ಕಾರ್ಯಗತಗೊಳಿ ಸುತ್ತದೆ? ಈ ಬಜೆಟ್‌ಗೆ ಹೆಚ್ಚು ಅರ್ಥವಿಲ್ಲ,ʼ ಎಂದು ಹೇಳಿದರು.

ಅಜಿತ್ ಪವಾರ್ ಬಣದ ಶಾಸಕರು ಮೂಲ ಪಕ್ಷಕ್ಕೆ ಮರಳುತ್ತಾರೆ ಎಂಬ ಊಹಾಪೋಹ ಕುರಿತು ಮಾತನಾಡಿದ ಪವಾರ್, ʻಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಮತ್ತು ಇತರರಿಗೆ ಈ ಬಗ್ಗೆ ತಿಳಿದಿದೆ. ನಾನು ಯಾರನ್ನೂ ಖುದ್ದು ಭೇಟಿ ಮಾಡಿಲ್ಲ. ಯಾರು ಬರು ತ್ತಾರೆ ನೋಡೋಣ. ನಿಮ್ಮ ಬಳಿ ಹೆಸರುಗಳ ಪಟ್ಟಿ ಇದೆಯೇ?,ʼ ಎಂದು ಪ್ರಶ್ನಿಸಿದರು.

ʻಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ 18 ಕ್ಷೇತ್ರಗಳಲ್ಲಿ ಸಭೆ ನಡೆಸಿದರು ಮತ್ತು ಈ ಪೈಕಿ 14 ಕ್ಷೇತ್ರಗಳಲ್ಲಿ ಮಹಾಯುತಿ ಅಭ್ಯರ್ಥಿಗಳು ಸೋತಿದ್ದಾರೆ,ʼ ಎಂದು ಪವಾರ್ ಹೇಳಿದರು. ʻಮುಂಬ ರುವ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಭೆ ಉದ್ದೇಶಿಸಿ ಮಾತನಾಡಬೇಕೆಂದು ನಾನು ಮೋದಿ ಅವರಲ್ಲಿ ವಿನಂತಿಸುತ್ತೇನೆ,ʼ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೆ ಎಂವಿಎ ಸಿದ್ಧತೆ ಕುರಿತು ಮಾತನಾಡಿ, ʻಮಿತ್ರಪಕ್ಷಗಳು ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತವೆ. ಇಂಡಿಯ ಒಕ್ಕೂಟದ ಭಾಗವಾಗಿದ್ದ ಪಿಡಬ್ಲ್ಯು ಪಿ ಮತ್ತು ಆಪ್‌ ಅನ್ನು ಎಂವಿಎಯಲ್ಲಿ ಸೇರಿಸಲಾಗುವುದು ಎಂದು ಅವರು ಹೇಳಿದರು.

ಎಂವಿಎ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಲ್ಲಿ 155 ರಲ್ಲಿ ಎಂವಿಎ ಮುನ್ನಡೆ ಸಾಧಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರವೃತ್ತಿ ಮುಂದುವರಿದರೆ, ನಾವು ಸರ್ಕಾರ ರಚಿಸುವುದು ಖಚಿತ,ʼ ಎಂದರು.

ರಾಜಕೀಯ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ʻನೀವು ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದ್ದೀರಿ. ಅವರಲ್ಲಿ ಒಬ್ಬರನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ನಂತರ ನೀವು ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳನ್ನು ಜೈಲಿಗೆ ಹಾಕಿದಿರಿ. ಕೆಳ ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪು ನೀಡಿದಾಗ, ತಕ್ಷಣ ಮೇಲ್ಮನವಿ ಸಲ್ಲಿಸು ತ್ತೀರಿ ಮತ್ತು ನಾಯಕರನ್ನು ಜೈಲಿಗೆ ಹಾಕುತ್ತೀರಿ. ಏಜೆನ್ಸಿಗಳ ದುರುಪಯೋಗ ಸ್ಪಷ್ಟವಾಗಿದೆ,ʼ ಎಂದು ಹೇಳಿದರು.

ದೆಹಲಿ ವಿಮಾನ ನಿಲ್ದಾಣದ ಚಾವಣಿ ಕುಸಿತ ಘಟನೆ ಕುರಿತು ಮಾತನಾಡಿ, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸದೆ ಯೋಜನೆಗಳನ್ನು ತರಾತುರಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಚುನಾವಣೆಯನ್ನು ಗಮನದಲ್ಲಿ ಟ್ಟುಕೊಂಡು ಯೋಜನೆಗಳನ್ನು ಘೋಷಿಸಿ, ಉದ್ಘಾಟನೆ ಮಾಡಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಇಂಥ ಅವಘಡಗಳು ಅದರ ನೇರ ಪರಿಣಾಮ ಎಂದರು.

Read More
Next Story