ಪಂಜಾಬಿನ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ: ಕೇಜ್ರಿವಾಲ್
ಪಂಜಾಬ್, ಫೆಬ್ರವರಿ 10: ಪಂಜಾಬ್‌ನ 13 ಹಾಗೂ ಚಂಡೀಗಢದ ಒಂದು ಲೋಕಸಭೆ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇದರಿಂದ ಇಂಡಿಯ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.
ಪಂಜಾಬ್ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರವನ್ನು ʻಮನೆ ಬಾಗಿಲಿಗೆ ತಲುಪಿಸಲುʼ ಆಯೋಜಿಸಿದ್ದ ಸಭೆಯಲ್ಲಿ ಈ ಘೋಷಣೆ ಮಾಡಿದರು.
ʻಎರಡು ವರ್ಷಗಳ ಹಿಂದೆ 117ರಲ್ಲಿ 92 ಸ್ಥಾನಗಳನ್ನು ನೀಡುವ ಮೂಲಕ ಆಶೀರ್ವಾದ ಮಾಡಿದ್ದಿರಿ. ಎರಡು ತಿಂಗಳ ನಂತರ ಲೋಕಸಭೆ ಚುನಾವಣೆ ನಡೆಯಲಿದೆ. ಪಂಜಾಬ್‌ನ 13 ಮತ್ತು ಚಂಡೀಗಢದ ಒಂದು ಸ್ಥಾನಕ್ಕೆ ಮುಂಬರುವ 10-15 ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಈ ಎಲ್ಲ ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ವಿನಂತಿಸುತ್ತೇನೆʼ ಎಂದು ಹೇಳಿದರು. ಭಗವಂತ್ ಮಾನ್ ಸರ್ಕಾರ ʻಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಕೆಲಸ ಮಾಡಿದೆʼ ಎಂದು ಶ್ಲಾಘಿಸಿದರು.
ʻ75 ವರ್ಷದಲ್ಲಿ ಕಾಂಗ್ರೆಸ್ ಸಾಕಷ್ಟು ವರ್ಷ ಆಡಳಿತ ನಡೆಸಿದೆ. ಅದು ಮಾಡಿದ ಒಂದು ಒಳ್ಳೆ ಕೆಲಸ ಹೇಳಿ? ನಿಮಗೆ ನೆನಪಿಲ್ಲ. ಅಕಾಲಿದಳ ಮಾಡಿದ ಒಂದು ಒಳ್ಳೆಯ ಕೆಲಸ ಹೇಳಿ?ʼ ಎಂದು ವಾಗ್ದಾಳಿ ನಡೆಸಿದರು.