
ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನರಾಗಿದ್ದಾರೆ.
ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ನಿಧನ
ಮಾಧವ ಗಾಡ್ಗೀಳ್ ಅವರ ಹೆಸರು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವುದು ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು 2011ರಲ್ಲಿ ಅವರು ನೀಡಿದ ಐತಿಹಾಸಿಕ ವರದಿಯಿಂದಾಗಿ.
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ, ಭಾರತದ ಅಗ್ರಗಣ್ಯ ಪರಿಸರ ವಿಜ್ಞಾನಿ ಹಾಗೂ ಪದ್ಮಭೂಷಣ ಪುರಸ್ಕೃತ ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ ಪುಣೆಯಲ್ಲಿ ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರ ಪುತ್ರ ಸಿದ್ಧಾರ್ಥ ಗಾಡ್ಗೀಳ್, "ನನ್ನ ತಂದೆ ಮಾಧವ ಗಾಡ್ಗೀಳ್ ಅವರು ನಿನ್ನೆ ತಡರಾತ್ರಿ ಪುಣೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು ಎಂಬ ದುಃಖದ ಸುದ್ದಿಯನ್ನು ಹಂಚಿಕೊಳ್ಳಲು ತೀವ್ರ ವಿಷಾದಿಸುತ್ತೇನೆ," ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷವಷ್ಟೇ (ಜುಲೈ 2025) ಅವರ ಪತ್ನಿ, ಖ್ಯಾತ ಮುಂಗಾರು ವಿಜ್ಞಾನಿ ಸುಲೋಚನಾ ಗಾಡ್ಗೀಳ್ ಅವರು ನಿಧನರಾಗಿದ್ದರು. ಪತ್ನಿಯ ಅಗಲಿಕೆಯ ಆರು ತಿಂಗಳಲ್ಲೇ ಮಾಧವ ಗಾಡ್ಗೀಳ್ ಅವರೂ ಇಹಲೋಕ ತ್ಯಜಿಸಿದ್ದು, ಪರಿಸರ ಹೋರಾಟದ ಪ್ರಬಲ ಧ್ವನಿಯೊಂದು ಮೌನವಾದಂತಾಗಿದೆ.
ಪಶ್ಚಿಮ ಘಟ್ಟಗಳ ಉಳಿವಿಗೆ ಎಚ್ಚರಿಕೆ ಗಂಟೆಯಾಗಿದ್ದ 'ಗಾಡ್ಗೀಳ್ ವರದಿ'
ಮಾಧವ ಗಾಡ್ಗೀಳ್ ಅವರ ಹೆಸರು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವುದು 2011ರಲ್ಲಿ ಅವರು ನೀಡಿದ ಐತಿಹಾಸಿಕ ವರದಿಯಿಂದಾಗಿ. ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ (WGEEP) ಅಧ್ಯಕ್ಷರಾಗಿ ಅವರು ಸಲ್ಲಿಸಿದ ವರದಿಯು 'ಗಾಡ್ಗೀಳ್ ವರದಿ' ಎಂದೇ ಜನಪ್ರಿಯವಾಯಿತು. ಪಶ್ಚಿಮ ಘಟ್ಟಗಳ ಒಟ್ಟು 1,29,037 ಚದರ ಕಿ.ಮೀ. ವಿಸ್ತೀರ್ಣದ ಪೈಕಿ ಶೇ.75ರಷ್ಟು ಪ್ರದೇಶವನ್ನು 'ಪರಿಸರ ಸೂಕ್ಷ್ಮ ವಲಯ'ವೆಂದು ಘೋಷಿಸಬೇಕೆಂದು ಅವರು ಶಿಫಾರಸು ಮಾಡಿದ್ದರು. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಅತಿಯಾದ ಮೂಲಸೌಕರ್ಯ ಯೋಜನೆಗಳು, ಅಣೆಕಟ್ಟುಗಳು ಮತ್ತು ಗಣಿಗಾರಿಕೆಗಳು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಮಾರಕವಾಗಲಿವೆ ಎಂದು ಅವರು ದಶಕದ ಹಿಂದೆಯೇ ಎಚ್ಚರಿಸಿದ್ದರು.
ಅಂದಿನ ಸರ್ಕಾರಗಳು ಮತ್ತು ವಿವಿಧ ರಾಜ್ಯಗಳು ಅಭಿವೃದ್ಧಿಯ ನೆಪವೊಡ್ಡಿ ಈ ವರದಿಯನ್ನು ವಿರೋಧಿಸಿದ್ದವು. ತದನಂತರ ಬಂದ ಕಸ್ತೂರಿರಂಗನ್ ಸಮಿತಿಯು ಸಂರಕ್ಷಿತ ಪ್ರದೇಶದ ವ್ಯಾಪ್ತಿಯನ್ನು ಶೇ.50ಕ್ಕೆ ಇಳಿಸಿತು. ದುರಾದೃಷ್ಟವಶಾತ್, ಗಾಡ್ಗೀಳ್ ಅವರು ಎಚ್ಚರಿಸಿದಂತೆಯೇ ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿವೆ. 2024ರಲ್ಲಿ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಯು ಗಾಡ್ಗೀಳ್ ವರದಿಯ ಮಹತ್ವವನ್ನು ಮತ್ತೆ ನೆನಪಿಸಿತ್ತು. ಹವಾಮಾನ ಬದಲಾವಣೆ ಮತ್ತು ಕೈಗಾರಿಕೀಕರಣದ ಬಿಕ್ಕಟ್ಟಿನ ನಡುವೆ ಪಶ್ಚಿಮ ಘಟ್ಟಗಳನ್ನು ರಕ್ಷಿಸಲು ಅವರು ನೀಡಿದ ಕರೆ ಇಂದಿಗೂ ಪ್ರಸ್ತುತವಾಗಿದೆ.
ಬೆಂಗಳೂರಿನ ಐಐಎಸ್ಸಿ ಜೊತೆಗಿನ ನಂಟು
ಮೂಲತಃ ಪುಣೆಯವರಾದರು ಗಾಡ್ಗೀಳ್ ಅವರಿಗೆ ಕರ್ನಾಟಕ ಮತ್ತು ಬೆಂಗಳೂರಿನೊಂದಿಗೆ ಅವಿನಾಭಾವ ಸಂಬಂಧವಿತ್ತು. ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಅವರು ಸುದೀರ್ಘ 31 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಐಐಎಸ್ಸಿಯಲ್ಲಿ 'ಪರಿಸರ ವಿಜ್ಞಾನ ಕೇಂದ್ರ'ವನ್ನು (Center for Ecological Sciences) ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತದ ಜೈವಿಕ ವೈವಿಧ್ಯತೆ ಕಾಯ್ದೆಯ ಕರಡು ರಚನೆಯಲ್ಲಿಯೂ ಅವರು ಮಹತ್ತರ ಪಾತ್ರ ವಹಿಸಿದ್ದರು.
1942ರಲ್ಲಿ ಜನಿಸಿದ ಗಾಡ್ಗೀಳ್, ತಮ್ಮ ತಂದೆಯ ಪ್ರಭಾವದಿಂದ ಬಾಲ್ಯದಲ್ಲೇ ಪಕ್ಷಿ ವೀಕ್ಷಣೆ ಮತ್ತು ನಿಸರ್ಗ ಪ್ರೇಮವನ್ನು ಬೆಳೆಸಿಕೊಂಡಿದ್ದರು. ಪುಣೆ, ಮುಂಬೈನಲ್ಲಿ ಶಿಕ್ಷಣ ಪೂರೈಸಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತ ಪರಿಸರ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದರು. ಅವರ ಪರಿಸರ ಸೇವೆಯನ್ನು ಗುರುತಿಸಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು (UNEP) 2024ರ ಸಾಲಿನ ಆರು ಮಂದಿ 'ಚಾಂಪಿಯನ್ಸ್ ಆಫ್ ದಿ ಅರ್ಥ್' ಪಟ್ಟಿಯಲ್ಲಿ ಇವರನ್ನು ಸೇರಿಸಿ ಗೌರವಿಸಿತ್ತು. 2023ರಲ್ಲಿ ಪೆಂಗ್ವಿನ್ ಪ್ರಕಟಿಸಿದ "ಎ ವಾಕ್ ಅಪ್ ದಿ ಹಿಲ್: ಲಿವಿಂಗ್ ವಿತ್ ಪೀಪಲ್ ಅಂಡ್ ನೇಚರ್" ಎಂಬುದು ಅವರ ಆತ್ಮಚರಿತ್ರೆಯಾಗಿದೆ.

