Seaplane service dream takes flight, metal birds will soon fly at KRS
x
ಸಾಂದರ್ಭಿಕ ಚಿತ್ರ

ಕೆಆರ್‌ಎಸ್ ಹಿನ್ನೀರಿನಲ್ಲಿ ತೇಲಲಿದೆ ವಿಮಾನ, ಕರ್ನಾಟಕದಲ್ಲೂ ಸೀ ಪ್ಲೇನ್ ಸೇವೆಗೆ ಸಿದ್ಧತೆ

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ, ದಸರಾ ವೇಳೆಗೆ ಕೆಆರ್‌ಎಸ್ ಹಿನ್ನೀರಿನಲ್ಲಿ ಸೀ ಪ್ಲೇನ್ ಸೇವೆ ಆರಂಭಿಸುವಂತೆ ಮನವಿ ಸಲ್ಲಿಸಿದ್ದಾರೆ.


Click the Play button to hear this message in audio format

ಕೇರಳದ ಮುನ್ನಾರ್, ಗುಜರಾತ್‌ನ ಏಕತಾ ಪ್ರತಿಮೆಯ ಬಳಿ ನೀರಿನ ಮೇಲೆ ತೇಲುತ್ತಾ, ಆಗಸಕ್ಕೆ ಹಾರುವ ಸಮುದ್ರ ವಿಮಾನ (ಸೀ ಪ್ಲೇನ್) ದೃಶ್ಯಗಳನ್ನು ನೋಡಿ ಖುಷಿಪಟ್ಟಿದ್ದ ಕನ್ನಡಿಗರಿಗೆ ಒಂದು ಸಿಹಿ ಸುದ್ದಿ. ಶೀಘ್ರದಲ್ಲೇ ಮಂಡ್ಯದ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಹಿನ್ನೀರಿನಲ್ಲೂ ಇಂತಹದ್ದೇ ರೋಮಾಂಚಕ ದೃಶ್ಯಗಳು ಕಾಣಸಿಗಲಿವೆ.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ, ಕರ್ನಾಟಕದಲ್ಲಿಯೂ ಸೀ ಪ್ಲೇನ್ ಸೇವೆಯನ್ನು ಆರಂಭಿಸಲು ಗಂಭೀರ ಚರ್ಚೆಗಳು ಆರಂಭವಾಗಿವೆ. ಅದರ ಮೊದಲ ಹೆಜ್ಜೆಯಾಗಿ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ, ದಸರಾ ವೇಳೆಗೆ ಕೆಆರ್‌ಎಸ್ ಹಿನ್ನೀರಿನಲ್ಲಿ ಸೀ ಪ್ಲೇನ್ ಸೇವೆ ಆರಂಭಿಸುವಂತೆ ಮನವಿ ಸಲ್ಲಿಸಿದ್ದಾರೆ.

ಏನಿದು ಸೀ ಪ್ಲೇನ್ ಯೋಜನೆ?

ಕೇಂದ್ರ ಸರ್ಕಾರದ 'ಉಡಾನ್' (UDAN) ಯೋಜನೆಯಡಿ, ಸಣ್ಣ ವಿಮಾನಗಳ ಮೂಲಕ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವುದೇ ಈ ಯೋಜನೆಯ ಉದ್ದೇಶ. ಗುಜರಾತ್‌ನಲ್ಲಿ ಅಹಮದಾಬಾದ್‌ನ ಸಬರಮತಿ ನದಿಯಿಂದ ಏಕತಾ ಪ್ರತಿಮೆಗೆ ಹಾಗೂ ಕೇರಳದಲ್ಲಿ ಕೊಚ್ಚಿಯಿಂದ ಮುನ್ನಾರ್‌ನ ಮಟ್ಟುಪೆಟ್ಟಿ ಅಣೆಕಟ್ಟಿಗೆ ಸೀ ಪ್ಲೇನ್ ಸೇವೆಗಳು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆಂಧ್ರಪ್ರದೇಶದ ವಿಜಯವಾಡದಲ್ಲೂ ಈ ಸೇವೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ.

ಸೇವೆಯ ವೈಶಿಷ್ಟ್ಯಗಳು

9 ರಿಂದ 30 ಆಸನಗಳ ಸಾಮರ್ಥ್ಯದ ಸಣ್ಣ ವಿಮಾನಗಳು ಹಾರಾಟ ನಡೆಸಲಿವೆ. ರನ್‌ವೇಗಳ ಅಗತ್ಯವಿಲ್ಲದೆ ನೀರಿನ ಮೇಲೆ ಇಳಿಯುವ ಮತ್ತು ಹಾರುವ ಸಾಮರ್ಥ್ಯವನ್ನು ಈ ವಿಮಾಣಗಳು ಹೊಂದಿವೆ. ಪ್ರವಾಸಿಗರಿಗೆ ಆಕಾಶದಿಂದಲೇ ಪ್ರಕೃತಿ ಸೌಂದರ್ಯವನ್ನು ಸವಿಯುವ ವಿಶಿಷ್ಟ ಅನುಭವ ಈ ಸೇವೆ ಮೂಲಕ ಲಭಿಸಲಿದೆ.

ಎರಡನೇ ವಿಮಾನ ನಿಲ್ದಾಣಕ್ಕೂ ಒತ್ತಾಯ

ಇದೇ ಸಂದರ್ಭದಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಬೆಂಗಳೂರಿನ ಸಮೀಪ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯ ಬಗ್ಗೆಯೂ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ.

ಎಲ್ಲೆಲ್ಲಿ ಸ್ಥಳ ಗುರುತು?

ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ ನೆಲಮಂಗಲ, ಬಿಡದಿ ಹಾಗೂ ಹಾರೋಹಳ್ಳಿಯಲ್ಲಿ ಸ್ಥಳವನ್ನು ನಿಗದಿಪಡಿಸಿದೆ. ಆದರೆ ಗೃಹಸಚಿವ ಡಾ. ಜಿ. ಪರಮೇಶ್ವರ್‌, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಸೇರಿದಂತೆ ಹಲವು ಕಾಂಗ್ರೆಸ್‌ ಶಾಸಕರು ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಸಿಎಂ ಬಳಿ ಮನವಿ ಮಾಡಿದ್ದರು. ಈಗಾಗಲೇ ಇಲ್ಲಿ 8,000 ಎಕರೆ ಜಮೀನು ಲಭ್ಯವಿದೆ. ಜಪಾನ್‌ ಟೌನ್‌ಶಿಪ್‌, ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಆದ್ದರಿಂದ ತುಮಕೂರು ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದ್ದರು.

ಹಾಸನ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆಯೂ ಕುಮಾರಸ್ವಾಮಿ ಮನವಿ ಮಾಡಿದ್ದು, ವಿಮಾನಯಾನ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಆರ್‌ಎಸ್‌ನಲ್ಲಿ ಸೀ ಪ್ಲೇನ್ ಹಾರಾಟ ಆರಂಭವಾದರೆ, ಅದು ಮೈಸೂರು ದಸರಾ ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡುವುದರಲ್ಲಿ ಸಂಶಯವಿಲ್ಲ.

Read More
Next Story