ಸಲಿಂಗ ವಿವಾಹ; 2023ರ ತೀರ್ಪು ಮರುಪರಿಶೀಲಿಸಲು ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಸುಮಾರು 13 ಅರ್ಜಿಗಳನ್ನು ಗುರುವಾರ (ಜನವರಿ 9) ಆಲಿಸಿದ ಐದು ನ್ಯಾಯಾಧೀಶರ ಪೀಠವು ಹಿಂದಿನ ತೀರ್ಪುಗಳಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಲಿಂಗ ವಿವಾಹಕ್ಕೆ ಕಾನೂನು ಅನುಮತಿಯನ್ನು ನಿರಾಕರಿಸಿದ ಅಕ್ಟೋಬರ್ 2023 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದ ಸುಮಾರು 13 ಅರ್ಜಿಗಳನ್ನು ಗುರುವಾರ (ಜನವರಿ 9) ಆಲಿಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸೂರ್ಯಕಾಂತ್, ಬಿ.ವಿ.ನಾಗರತ್ನ, ಪಿ.ಎಸ್.ನರಸಿಂಹ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಹಿಂದಿನ ತೀರ್ಪುಗಳಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮೇಲ್ನೋಟಕ್ಕೆ ಯಾವುದೇ ದೋಷ ಕಂಡುಬಂದಿಲ್ಲ. ಎರಡೂ ತೀರ್ಪುಗಳಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯವು ಕಾನೂನಿಗೆ ಅನುಗುಣವಾಗಿದೆ. ಆದ್ದರಿಂದ ಪುನರ್ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಅದರಂತೆ, ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿ (ನಿವೃತ್ತ) ಎಸ್ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ (ನಿವೃತ್ತ) ಹಿಮಾ ಕೊಹ್ಲಿ ಅವರು ನೀಡಿದ ತೀರ್ಪನ್ನು ಹಾಗೂ ನ್ಯಾಯಮೂರ್ತಿ ಪಮಿಡಿಘಂಟಂ ಶ್ರೀ ನರಸಿಂಹ ಅವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಎಚ್ಚರಿಕೆಯಿಂದ ಪರಿಶೀಲನೆ ಮಾಡಲಾಗಿದೆ ಎಂಬುದಾಗಿಯೂ ನ್ಯಾಯಪೀಠ ಹೇಳಿದೆ.
ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಅರ್ಜಿ ತಿರಸ್ಕೃತ
ಮುಕ್ತ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಪರಿಶೀಲನಾ ಅರ್ಜಿಗಳಲ್ಲಿ ಮಾಡಿದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು. ಪರಿಶೀಲನಾ ಅರ್ಜಿಗಳನ್ನು ನ್ಯಾಯಾಧೀಶರು ಕೊಠಡಿಗಳಲ್ಲಿ ಕೈಗೆತ್ತಿಕೊಳ್ಳುತ್ತಾರೆ.
ಪ್ರಸ್ತು ಮುಖ್ಯ ನ್ಯಾಯಮೂರ್ತಿಯಾಗಿರುವ (ಸಿಜೆಐ) ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಜುಲೈ 10, 2024 ರಂದು ಪರಿಶೀಲನಾ ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿದ ನಂತರ ಹೊಸ ನ್ಯಾಯಪೀಠ ರಚಿಸಲಾಗಿತ್ತು.
ಮಾಜಿ ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್, ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ನಿವೃತ್ತರಾಗಿರುವುದರಿಂದ ತೀರ್ಪು ನೀಡಿದ ಐದು ನ್ಯಾಯಾಧೀಶರನ್ನು ಒಳಗೊಂಡ ಮೂಲ ಸಂವಿಧಾನ ಪೀಠದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಏಕೈಕ ಸದಸ್ಯ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಮಾತ್ರ.
2023ರ ತೀರ್ಪು ಏನು ಹೇಳುತ್ತದೆ?
ಅಕ್ಟೋಬರ್ 17, 2023 ರಂದು ಅಂದಿನ ಸಿಜೆಐ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಗಳಿಗೆ ಕಾನೂನು ಬೆಂಬಲ ನೀಡಲು ನಿರಾಕರಿಸಿತ್ತು.
ಆದರೆ ಈ ವೇಳೆ ಎಲ್‌ಜಿಬಿಟಿಕ್ಯೂಐಎ ++ ಸಮುದಾಯದ ಹಕ್ಕುಗಳಿಗಾಗಿ ಬಗ್ಗೆ ಮಾತನಾಡಿತ್ತು. ಕಿರುಕುಳ ಮತ್ತು ಹಿಂಸಾಚಾರ ಎದುರಿಸುತ್ತಿರುವ ಸಮುದಾಯದ ಸದಸ್ಯರಿಗೆ ಆಶ್ರಯಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಸುರಕ್ಷಿತ ಮನೆಗಳು ನಿರ್ಮಿಸಬೇಕಾದ ಅಗತ್ಯ ಹಾಗೂ ತೊಂದರೆಯ ಸಂದರ್ಭಗಳಲ್ಲಿ ಸಂಪರ್ಕಿಸಲು ಹಾಟ್‌ಲೈನ್ ಸ್ಥಾಪನೆಗೆ ಗಮನ ಹರಿಸಿತ್ತು. .
ಒಟ್ಟು 4 ತೀರ್ಪುಗಳು ಪ್ರಕಟ
ಸಲಿಂಗ ವಿವಾಹಕ್ಕೆ ಕಾನೂನು ಅನುಮತಿ ಕೋರಿ ಸಲ್ಲಿಸಲಾಗಿದ್ದ 21 ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿತ್ತು.
ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯನ್ನು ಎಲ್ಲ ಐದು ನ್ಯಾಯಾಧೀಶರು ಸರ್ವಾನುಮತದಿಂದ ನಿರಾಕರಿಸಿದ್ದರು. ಅಂಥ ಕಾನೂನನ್ನು ಬದಲಾಯಿಸುವುದು ಸಂಸತ್ತಿನ ವ್ಯಾಪ್ತಿಗೆ ಸೇರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
ಮಾಜಿ ಸಿಜೆಐ ಚಂದ್ರಚೂಡ್ ಅವರು 247 ಪುಟಗಳ ಪ್ರತ್ಯೇಕ ತೀರ್ಪನ್ನು ಬರೆದರೆ, ನ್ಯಾಯಮೂರ್ತಿ ಕೌಲ್ ಅವರು 17 ಪುಟಗಳ ತೀರ್ಪನ್ನು ಬರೆದಿದ್ದಾರೆ. ನ್ಯಾಯಮೂರ್ತಿ ಕೊಹ್ಲಿಗಾಗಿ 89 ಪುಟಗಳ ತೀರ್ಪನ್ನು ಬರೆದಿದ್ದರೆ, ನ್ಯಾಯಮೂರ್ತಿ ನರಸಿಂಹ ಅವರು ತಮ್ಮ 13 ಪುಟಗಳ ತೀರ್ಪಿ ನೀಡಿದ್ದರು.
ಸಮಿತಿ ರಚಿಸುವ ಭರವಸೆ
ಮಾಜಿ ಸಿಜೆಐ ತಮ್ಮ ತೀರ್ಪಿನಲ್ಲಿ, ಸಲಿಂಗ ದಂಪತಿಗಳ ಅರ್ಹತೆಗಳ ವ್ಯಾಪ್ತಿಯನ್ನು ವ್ಯಾಖ್ಯಾನಿಸಲು ಮತ್ತು ಸ್ಪಷ್ಟಪಡಿಸಲು ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ಸರ್ಕಾರದ ಭರವಸೆ ಹೇಳಿದ್ದರು.
ಒಮ್ಮತದ ಸಲಿಂಗಕಾಮವನ್ನು ಅಪರಾಧವಲ್ಲ ಎಂದು 2018 ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆ ಕಾನೂನು ಹೋರಾಟ ಗೆದ್ದ ಎಲ್ಜಿಬಿಟಿಕ್ಯೂಐಎ ++ ಹಕ್ಕುಗಳ ಕಾರ್ಯಕರ್ತರು, ಸಲಿಂಗ ವಿವಾಹಗಳನ್ನು ದೃಢೀಕರಿಸುವಂತೆ ಮತ್ತು ದತ್ತು ಪಡೆಯುವ ಹಕ್ಕುಗಳು, ಶಾಲೆಗಳಲ್ಲಿ ಪೋಷಕರಾಗಿ ನೋಂದಾಯಿಸುವುದು, ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಉತ್ತರಾಧಿಕಾರ ಮತ್ತು ವಿಮಾ ಪ್ರಯೋಜನಗಳನ್ನು ಪಡೆಯುವಂತಹ ತತ್ಪರಿಣಾಮದ ಪರಿಹಾರಗಳನ್ನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.