ಕೇಜ್ರಿವಾಲ್ ಜಾಮೀನು ವಿಸ್ತರಣೆ ಅರ್ಜಿ: ಪಟ್ಟಿ ಮಾಡಲು ಎಸ್‌ಸಿ ನಿರಾಕರಣೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನು ಅವಧಿಯನ್ನು ಏಳು ದಿನ ವಿಸ್ತರಿಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನಿಯಮಿತ ಜಾಮೀನಿಗಾಗಿ ವಿಚಾರಣೆ ನ್ಯಾಯಾಲಯಕ್ಕೆ ತೆರಳಲು ಕೇಜ್ರಿವಾಲ್ ಅವರಿಗೆ ಸ್ವಾತಂತ್ರ್ಯ ನೀಡಲಾಗಿರುವುದರಿಂದ, ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಬುಧವಾರ (ಮೇ 29) ಹೇಳಿದೆ.
ಕೇಜ್ರಿವಾಲ್ ಅವರು ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಅವಧಿ ವಿಸ್ತರಣೆಯನ್ನು ಕೋರಿದ್ದರು.
ರಜಾಕಾಲದ ಪೀಠ ಹೇಳಿದ್ದೇನು?: ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ರಜಾಕಾಲದ ಪೀಠವು ಮುಖ್ಯಮಂತ್ರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರ ಸಲ್ಲಿಕೆಗಳನ್ನು ಗಮನಿಸಿ, ಮಧ್ಯಂತರ ಅರ್ಜಿಯ ಪಟ್ಟಿಯನ್ನು ಸಿಜೆಐ ತೀರ್ಪಿನಂತೆ ತೆಗೆದುಕೊಳ್ಳಬಹುದು ಎಂದು ಹೇಳಿತ್ತು.
ಕೇಜ್ರಿವಾಲ್ ಮೇ 26 ರಂದು ಸಲ್ಲಿಸಿದ ಹೊಸ ಮನವಿಯಲ್ಲಿ ಜೂನ್ 2 ರ ಬದಲು ಜೂನ್ 9 ರಂದು ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಅನುಮತಿ ಕೋರಿದ್ದರು. ಮುಖ್ಯಮಂತ್ರಿಗೆ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅನುಕೂಲವಾಗುವಂತೆ ಸುಪ್ರೀಂ ಕೋರ್ಟ್ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಏಳು ಹಂತದ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಒಂದು ದಿನದ ನಂತರ, ಜೂನ್ 2 ರಂದು ಶರಣಾಗಬೇಕು ಎಂದು ಹೇಳಿತ್ತು.