ಸಾರ್ವಜನಿಕ ಸೇವೆ ಅಧಿಕಾರಿಗಳ ಸ್ಪರ್ಧೆ: ನಿರ್ಬಂಧ ವಿಧಿಸಲು ಸುಪ್ರೀಂ ನಿರಾಕರಣೆ
x

ಸಾರ್ವಜನಿಕ ಸೇವೆ ಅಧಿಕಾರಿಗಳ ಸ್ಪರ್ಧೆ: ನಿರ್ಬಂಧ ವಿಧಿಸಲು ಸುಪ್ರೀಂ ನಿರಾಕರಣೆ


ನವದೆಹಲಿ, ಏ. 5- ಸಾರ್ವಜನಿಕ ಸೇವೆ ಅಧಿಕಾರಿಗಳು ನಿವೃತ್ತಿ ಅಥವಾ ರಾಜೀನಾಮೆ ನೀಡಿದ ತಕ್ಷಣ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಬೇಕೆಂಬ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಈ ಸಂಬಂಧ ಚುನಾವಣೆ ಆಯೋಗದ 2012 ರ ಶಿಫಾರಸುಗಳ ಅನುಷ್ಠಾನ ಕೋರಿ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ನ್ಯಾಯ ಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ನಿರಾಕರಿಸಿತು. ಅರ್ಜಿದಾರ ಮಾಜಿ ಸಂಸದ ಜಿ.ವಿ. ಹರ್ಷ ಕುಮಾರ್ ಅವರಿಗೆ ಮನವಿಯನ್ನು ಹಿಂಪಡೆದು, ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಲು ಅವಕಾಶ ಮಾಡಿಕೊಟ್ಟಿತು.

ಚುನಾವಣಾ ಆಯೋಗದ 2012 ರ ಶಿಫಾರಸುಗಳು ಮತ್ತು ಜುಲೈ 2004 ರ ನಾಗರಿಕ ಸೇವಾ ಸುಧಾರಣೆಗಳ ಸಮಿತಿ ವರದಿಯನ್ನು ಜಾರಿಗೊಳಿಸಬೇಕೆಂದು ಮನವಿಯಲ್ಲಿ ಕೋರಲಾಗಿತ್ತು. ಸರ್ಕಾರಿ ನೌಕರರು ಸೇವಾವಧಿ ಮುಗಿದ ಇಲ್ಲವೇ ರಾಜೀನಾಮೆ ನೀಡಿದ ಬಳಿಕ ಶಾಸಕಾಂಗ, ಸಂಸತ್ತು ಅಥವಾ ರಾಜ್ಯ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ನಿಯಮಿತ ಅವಧಿವರೆಗೆ ನಿರ್ಬಂಧ ವಿಧಿಸಬೇಕು ಹಾಗೂ ಶಾಸನಸಭೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಒಂದು ಪಿಂಚಣಿ ನೀಡಲು ಕೇಂದ್ರ ನಿರ್ದೇಶನ ನೀಡಬೇಕು ಎಂದು ಹರ್ಷಕುಮಾರ್‌ ಕೋರಿದ್ದರು. ವಕೀಲ ಶ್ರವಣ್ ಕುಮಾರ್ ಕರಣಂ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು.

ʻಇಸಿ ಶಿಫಾರಸುಗಳನ್ನು ಎರಡು ದಶಕಗಳ ಹಿಂದೆ ಮಾಡಿದ್ದರೂ, ಅವುಗಳನ್ನು ಅನುಷ್ಠಾನಗೊಳಿಸಿಲ್ಲ. ಇದರಿಂದ ಹಲವು ಅಧಿಕಾರಿಗಳು, ನ್ಯಾಯಾಧೀಶರು ಸಾರ್ವಜನಿಕ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಇಲ್ಲವೇ ರಾಜೀನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆʼ ಎಂದು ಮನವಿಯಲ್ಲಿ ಹೇಳಲಾಗಿದೆ.

Read More
Next Story