
'ಹಮಾರೆ ಬಾರಾ' ಚಿತ್ರದ ವಿರುದ್ಧದ ಅರ್ಜಿ: ಪರಿಗಣಿಸಲು ಎಸ್‌ಸಿ ನಿರಾಕರಣೆ
ಚಿತ್ರದಲ್ಲಿದ್ದ ವಿವಾದಾತ್ಮಕ ಸಂಭಾಷಣೆಗಳು ಮತ್ತು ದೃಶ್ಯಗಳನ್ನು ತೆಗೆದು ಹಾಕಿದ ನಂತರ ಚಲನಚಿತ್ರವನ್ನು ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿತ್ತು.
ನವದೆಹಲಿ, ಜೂನ್ 21- ಅಣ್ಣು ಕಪೂರ್ ಅಭಿನಯದ 'ಹಮಾರೆ ಬಾರಾ' ಚಲನಚಿತ್ರದಲ್ಲಿ ವಿವಾದಾತ್ಮಕ ಸಂಭಾಷಣೆ ಮತ್ತು ದೃಶ್ಯಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಕೆಲವು ಆಕ್ಷೇಪಾರ್ಹ ಭಾಗಗಳನ್ನು ಅಳಿಸಲು ನಿರ್ಮಾಪಕರು ಒಪ್ಪಿಕೊಂಡ ನಂತರ ಬಾಂಬೆ ಹೈಕೋರ್ಟ್ ಜೂನ್ 19 ರಂದು ಚಲನಚಿತ್ರದ ಬಿಡುಗಡೆಗೆ ಅನುಮತಿ ನೀಡಿತ್ತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್.ವಿ.ಎನ್. ಭಟ್ಟಿ ಅವರ ರಜಾಕಾಲದ ಪೀಠದ ಮುಂದೆ ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಿದ್ದು, ಮನವಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಪೀಠ ಅವಕಾಶ ಮಾಡಿಕೊಟ್ಟಿತು.
ʻಈ ರಿಟ್ ಮೂಲಕ ಚಿತ್ರದಲ್ಲಿರುವ ವಿವಾದಾತ್ಮಕ ಸಂಭಾಷಣೆ ಮತ್ತು ದೃಶ್ಯಗಳನ್ನು ಪ್ರಶ್ನಿಸಿದ್ದೇನೆ,ʼ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ʻಕಳೆದ ವಾರ ಇದೇ ರೀತಿಯ ಅರ್ಜಿ ಬಂದಿತ್ತು. ಬಾಂಬೆ ಹೈಕೋರ್ಟ್ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ. ಅರ್ಜಿದಾರರು ಆ ಆದೇಶವನ್ನು ಪ್ರಶ್ನಿಸಬಹುದು,ʼ ಎಂದು ಪೀಠ ಹೇಳಿತು.
ʻಹೈಕೋರ್ಟ್ ಪರಿಶೀಲಿಸಿದ್ದು, ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಿದೆ. ನೀವು ನೊಂದಿದ್ದರೆ, ಅಲ್ಲಿ ಪ್ರಶ್ನಿಸಿ,ʼ ಎಂದು ಪೀಠ ಹೇಳಿದೆ.
ಅರ್ಜಿದಾರರು ಜೂನ್ 7 ರಂದೇ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೆ, ಅದನ್ನು ಪಟ್ಟಿ ಮಾಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ʻಅರ್ಹತೆಯ ಆಧಾರದ ಮೇಲೆ ಈ ವಿಷಯವನ್ನು ಪರಿಗಣಿಸುವುದಿಲ್ಲʼ ಎಂದು ಪೀಠ ಹೇಳಿತು.
ʻಹೈಕೋರ್ಟ್ ಚಲನಚಿತ್ರವನ್ನು ನೋಡಿದೆ. ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ತೆಗೆದುಹಾಕಲು ಕೇಳಿದೆ. ನೀವು ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ, ಆಗ ಈ ನ್ಯಾಯಾಲಯ ಪರಿಶೀಲಿಸುವುದು ಸರಿಯಾಗಿ ರುತ್ತದೆ,ʼ ಎಂದು ಪೀಠ ಹೇಳಿದೆ. ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಬೇಕು ಎಂದು ವಕೀಲರು ಕೋರಿದರು.
ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರ ಪ್ರದರ್ಶನಕ್ಕೆ ಸುಪ್ರೀಂ ಕೋರ್ಟ್ ಜೂನ್ 14 ರಂದು ತಡೆ ನೀಡಿತ್ತು.