ಇಡಿ ಪ್ರಕರಣ: ಕವಿತಾ ಅವರಿಗೆ ಜಾಮೀನು ನಿರಾಕರಣೆ
x

ಇಡಿ ಪ್ರಕರಣ: ಕವಿತಾ ಅವರಿಗೆ ಜಾಮೀನು ನಿರಾಕರಣೆ


ನವದೆಹಲಿ, ಮಾ.22 - ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿರುವ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂ.ಎಂ. ಸುಂದರೇಶ್ ಮತ್ತು ಬೇಲಾ ಎಂ. ತ್ರಿವೇದಿ ಅವರ ಪೀಠವು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಕವಿತಾ ಅವರಿಗೆ ಹೇಳಿದೆ. ಇದು ಈ ನ್ಯಾಯಾಲಯ ಅನುಸರಿಸುತ್ತಿರುವ ಕ್ರಮವಾಗಿದ್ದು, ಅದನ್ನು ಮೀರಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯ ನಿಬಂಧನೆಗಳನ್ನು ಪ್ರಶ್ನಿಸಿ ಕವಿತಾ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಇಡಿಗೆ ನೋಟಿಸ್ ಜಾರಿ ಮಾಡಲಿದೆ ಮತ್ತು ಆರು ವಾರಗಳಲ್ಲಿ ಅದರ ಪ್ರತಿಕ್ರಿಯೆಯನ್ನು ಕೇಳುತ್ತಿದೆ ಎಂದು ಪೀಠ ಹೇಳಿದೆ. ʻನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿ ಬಾಕಿ ಉಳಿದಿರುವ ವಿಷಯಗಳೊಂದಿಗೆ ವಿಚಾರಣೆಗೆ ಬರಲಿದೆʼ ಎಂದು ಕವಿತಾ ಪರ ವಕೀಲ ಕಪಿಲ್ ಸಿಬಲ್‌ ಅವರಿಗೆ ಪೀಠ ತಿಳಿಸಿತು.

ಅಪ್ರೂವರ್‌ ಹೇಳಿಕೆ ಆಧಾರದ ಮೇಲೆ ಜನರನ್ನು ಬಂಧಿಸಲಾಗುತ್ತಿದೆ ಎಂದು ಸಿಬಲ್ ಹೇಳಿದರು. ಪ್ರತಿಕ್ರಿಯಿಸಿದ ಪೀಠ, ಸದ್ಯಕ್ಕೆ ಪ್ರಕರಣದ ಅರ್ಹತೆ ಬಗ್ಗೆ ವಿಚಾರಿಸುವುದಿಲ್ಲ ಎಂದು ಪೀಠ ಹೇಳಿತು.

ತೆಲಂಗಾಣ ವಿಧಾನ ಪರಿಷತ್‌ ಸದಸ್ಯೆ, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ಮಾರ್ಚ್ 15 ರಂದು ಇಡಿ ಬಂಧಿಸಿದ್ದು, ಮಾರ್ಚ್ 23 ರವರೆಗೆ ಕಸ್ಟಡಿಗೆ ನೀಡಲಾಗಿದೆ. ಬಂಧನವನ್ನು ಪ್ರಶ್ನಿಸಿ ಕವಿತಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Read More
Next Story