Rape Case| ನಟ ಸಿದ್ದಿಕ್‌ಗೆ ಬಂಧನದಿಂದ ರಕ್ಷಣೆ
x

Rape Case| ನಟ ಸಿದ್ದಿಕ್‌ಗೆ ಬಂಧನದಿಂದ ರಕ್ಷಣೆ


ಮಲಯಾಳಂ ಚಲನಚಿತ್ರ ನಟ ಸಿದ್ದಿಕ್ ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಂಧನದಿಂದ ಸೋಮವಾರ ಮಧ್ಯಂತರ ರಕ್ಷಣೆ ನೀಡಿದೆ.

ನಿರೀಕ್ಷಣಾ ಜಾಮೀನು ನಿರಾಕರಿಸಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿದ್ದಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಕೇರಳ ಸರ್ಕಾರ ಮತ್ತು ಪ್ರಕರಣದ ಸಂತ್ರಸ್ತರಿಗೆ ನೋಟಿಸ್ ಜಾರಿ ಮಾಡಿದೆ.

ಸಂತ್ರಸ್ತೆ ಪರ ಹಾಜರಾದ ಹಿರಿಯ ವಕೀಲ ವೃಂದಾ ಗ್ರೋವರ್ ಅವರನ್ನು ʻನಟನ ವಿರುದ್ಧ ದೂರು ದಾಖಲಿಸಲು ವಿಳಂಬಕ್ಕೆ ಕಾರಣವೇನು?ʼ ಎಂದು ಪೀಠ ಕೇಳಿತು.

ʻಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಕಿರುಕುಳ ಮತ್ತು ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸಿದ ನ್ಯಾ.ಹೇಮಾ ಸಮಿತಿಯ ವರದಿಯನ್ನು ವಿಸ್ತೃತ ಸನ್ನಿವೇಶದಲ್ಲಿ ಅರ್ಥ ಮಾಡಿಕೊಳ್ಳಬೇಕು,ʼ ಎಂದು ವಕೀಲರು ತಿಳಿಸಿದರು.

ಸಿದ್ದಿಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ʻಎಂಟು ವರ್ಷಗಳ ನಂತರ 2024ರಲ್ಲಿ ದೂರು ದಾಖಲಾಗಿದೆʼ ಎಂದು ಹೇಳಿದರು.

ಸಿದ್ದಿಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 24 ರಂದು ತಿರಸ್ಕರಿಸಿದ ಹೈಕೋರ್ಟ್, ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ತನಿಖೆಗೆ ಅವರ ಕಸ್ಟಡಿ ವಿಚಾರಣೆ ಅನಿವಾರ್ಯ ಎಂದು ಹೇಳಿತ್ತು.


Read More
Next Story