ಭೀಮಾ ಕೋರೆಗಾಂವ್: ಶೋಮಾ ಸೇನ್‌ಗೆ ಸುಪ್ರೀಂ ಜಾಮೀನು
ಏಪ್ರಿಲ್ 5- ಭೀಮಾ ಕೋರೆಗಾಂವ್ ಪ್ರಕರಣದಲ್ಲಿಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967 (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ನಾಗ್ಪುರ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕಿ ಶೋಮಾ ಸೇನ್(62) ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಏಪ್ರಿಲ್ 5) ಜಾಮೀನು ನೀಡಿದೆ.
ಮಾವೋವಾದಿ ನಂಟು ಹೊಂದಿರುವ ಆರೋಪದ ಮೇಲೆ ಜೂನ್ 6, 2018 ರಂದು ಸೇನ್ ಬಂಧಿತರಾಗಿದ್ದರು. ಯುಎಪಿಎ ಸೆಕ್ಷನ್ 43ಡಿ (5) ಪ್ರಕಾರ ಜಾಮೀನು ಮಂಜೂರಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಹೇಳಿದ್ದಾರೆ.
ಸೇನ್ ಅವರಿಗೆ ವಯಸ್ಸಾಗಿದ್ದು, ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು. ಸುದೀರ್ಘ ಜೈಲುವಾಸ, ವಿಚಾರಣೆಯ ಪ್ರಾರಂಭದಲ್ಲಿನ ವಿಳಂಬ ಮತ್ತು ಆರೋಪಗಳ ಸ್ವರೂಪವನ್ನುನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ಅವರ ಹೆಚ್ಚಿನ ಕಸ್ಟಡಿ ಅಗತ್ಯವಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದಲ್ಲಿ ಈ ಹಿಂದೆ ಒಪ್ಪಿಕೊಂಡಿತ್ತು.
ನಿರ್ಬಂಧಗಳು: ವಿಶೇಷ ನ್ಯಾಯಾಲಯದ ಅನುಮತಿಯಿಲ್ಲದೆ ಮಹಾರಾಷ್ಟ್ರವನ್ನು ತೊರೆಯಬಾರದು, ಪಾಸ್‌ಪೋರ್ಟ್ ಒಪ್ಪಿಸಬೇಕು ಮತ್ತು ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತನಿಖಾಧಿಕಾರಿಗೆ ಒದಗಿಸಬೇಕು ಎಂದು ನ್ಯಾಯಾಧೀಶರು ಸೇನ್ ಅವರಿಗೆ ಹೇಳಿದರು. ಮೊಬೈಲ್ ಫೋನಿನ ಜಿಪಿಎಸ್ ಅನ್ನು ಸಕ್ರಿಯವಾಗಿಡಲು ಕೇಳಲಾಯಿತು.
ಆರನೇ ಜಾಮೀನು: ಬಾಂಬೆ ಹೈಕೋರ್ಟ್‌ನ ಜನವರಿ 2023ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಪ್ರಕರಣದ 16 ಆರೋಪಿಗಳಲ್ಲಿ ಸೇನ್ ಜಾಮೀನು ಪಡೆದ ಆರನೆಯವರು. ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ವೆರ್ನಾನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ ಮತ್ತು ವರವರ ರಾವ್ ಜಾಮೀನು ಪಡೆದಿದ್ದಾರೆ.
ಗೌತಮ್ ನವ್ಲಾಖಾ ಅವರನ್ನು ಆರೋಗ್ಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಗೃಹಬಂಧನಕ್ಕೆ ಸ್ಥಳಾಂತರಿಸಿದೆ. ಇನ್ನೊಬ್ಬ ಆರೋಪಿ, ಫಾದರ್ ಸ್ಟಾನ್ ಸ್ವಾಮಿ ಜುಲೈ 2021 ರಲ್ಲಿ ಕಸ್ಟಡಿಯಲ್ಲಿ ನಿಧನರಾದರು.