Electoral Bonds verdict | ಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ: ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿದ ಫೆಬ್ರವರಿ 15 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮು.ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ, ದಾಖಲೆಗಳ ಪ್ರಕಾರ ತೀರ್ಪಿನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ಹೇಳಿದೆ.
ಮರುಪರಿಶೀಲನೆ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಪಟ್ಟಿ ಮಾಡುವಂತೆ ಮಾಡಿದ ಕೋರಿಕೆಯನ್ನು ಕೂಡ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ʻಪರಿಶೀಲನೆ ಅರ್ಜಿಗಳನ್ನು ಪರಿಶೀಲಿಸಿದಾಗ, ದಾಖಲೆಯನ್ನು ಪರಿಗಣಿಸಿದರೆ ಯಾವುದೇ ದೋಷ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು 2013 ರ ಆದೇಶ XLVII ನಿಯಮ 1 ರ ಅಡಿಯಲ್ಲಿ ಪರಿಶೀಲನೆಗೆ ಯಾವುದೇ ಅವಕಾಶವಿಲ್ಲ. ಆದ್ದರಿಂದ, ಮರುಪರಿಶೀಲನೆ ಅರ್ಜಿಗಳನ್ನು ವಜಾಗೊಳಿಸಲಾಗಿದೆ,ʼ ಎಂದು ಪೀಠ ಹೇಳಿದೆ. ಸೆಪ್ಟೆಂಬರ್ 25 ರ ಆದೇಶವನ್ನು ಶನಿವಾರ ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ.
ವಕೀಲ ಮ್ಯಾಥ್ಯೂಸ್ ಜೆ. ನೆಡುಂಪಾರ ಮತ್ತು ಇತರರು ಸಲ್ಲಿಸಿದ ಮರುಪರಿಶೀಲನೆ ಅರ್ಜಿಯು ಶಾಸಕಾಂಗ ಮತ್ತು ಕಾರ್ಯಾಂಗದ ನೀತಿಗೆ ಸೇರುತ್ತದೆ ಎಂದು ವಾದಿಸಿದ್ದವು.