ಬರ ಪರಿಹಾರ ನಿಧಿ | ಕೇಂದ್ರ- ರಾಜ್ಯ ನಡುವೆ ಸಂಘರ್ಷ ಬೇಡ ಎಂದ ಸುಪ್ರೀಂಕೋರ್ಟ್‌
x

ಬರ ಪರಿಹಾರ ನಿಧಿ | ಕೇಂದ್ರ- ರಾಜ್ಯ ನಡುವೆ ಸಂಘರ್ಷ ಬೇಡ ಎಂದ ಸುಪ್ರೀಂಕೋರ್ಟ್‌

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್)ಯಿಂದ ಹಣಕಾಸು ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯದ ನಡುವೆ ʻಸ್ಪರ್ಧೆʼ ಬೇಡ ಎಂದು ಹೇಳಿದೆ.


ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್)ಯಿಂದ ಹಣಕಾಸು ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯದ ನಡುವೆ ʻಸ್ಪರ್ಧೆʼ ಬೇಡ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ʻಈ ವಿಷಯದಲ್ಲಿ ಸೂಚನೆಗಳನ್ನುಕೇಳುತ್ತೇವೆʼ ಎಂದು ತಿಳಿಸಿದರು.

ವಿವಿಧ ರಾಜ್ಯ ಸರ್ಕಾರಗಳು ನ್ಯಾಯಾಲಯದ ಮೊರೆ ಹೋಗುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ಕರ್ನಾಟಕದ ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ತಿಳಿಸಿದೆ. ಎರಡು ವಾರಗಳ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯವನ್ನು ಕೋರಿದ ಸಾಲಿಸಿಟರ್ ಜನರಲ್, ಈ ವಿಷಯದಲ್ಲಿ ನಿಮ್ಮ ಸೂಚನೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ʻಕೇಂದ್ರ ಮತ್ತು ರಾಜ್ಯದ ನಡುವೆ ಸ್ಪರ್ಧೆ ಬೇಡ’ ಎಂದು ಪೀಠ ಹೇಳಿತು. ʻಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಬದಲು, ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದರೆ ಪರಿಹರಿಸಬಹುದಿತ್ತುʼ ಎಂದು ಸಾಲಿಸಿಟರ್‌ ಜನರಲ್‌ ಹೇಳಿದರು.ʻ ರಾಜ್ಯ ಸರ್ಕಾರಗಳು ನ್ಯಾಯಾಲಯದ ಮೊರೆ ಹೋಗುವುದನ್ನು ನೋಡಿದ್ದೇವೆʼ ಎಂದು ಪೀಠ ಅಭಿಪ್ರಾಯಪಟ್ಟಿತು.

ಅದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ,ʻಏಕೆ ಎಂದು ನಾನು ಹೇಳಲು ಬಯಸುವುದಿಲ್ಲ. ಆದರೆ, ಇದು ಬೆಳೆಯುತ್ತಿರುವ ಪ್ರವೃತ್ತಿʼ ಎಂದರು.

2 ವಾರಗಳ ನಂತರ ವಿಚಾರಣೆ

ಕೇಂದ್ರಕ್ಕೆ ನೋಟಿಸ್ ನೀಡುವುದಾಗಿ ಪೀಠವು ಮೌಖಿಕವಾಗಿ ಹೇಳಿತು. ʻನೀವು ನೋಟಿಸ್ ನೀಡದೆ ಇರಬಹುದು. ಅದು ಸುದ್ದಿಯೂ ಆಗುತ್ತದೆ ʼ ಎಂದು ಹೇಳಿದರು. ಪೀಠ ಎರಡು ವಾರಗಳ ನಂತರ ವಿಚಾರಣೆ ನಡೆಸಲಿದೆ.

ಕರ್ನಾಟಕದಲ್ಲಿ 'ಭೀಕರ ಬರ'

ಬರಗಾಲ ಪರಿಹಾರಕ್ಕೆ ಹಣಕಾಸು ನೆರವು ಬಿಡುಗಡೆ ಮಾಡದೆ ಇರುವ ಕೇಂದ್ರದ ಕ್ರಮವು ಸಂವಿಧಾನದ 14 ಮತ್ತು 21 ನೇ ಪರಿಚ್ಛೇದದಡಿ ಜನರ ಮೂಲಭೂತ ಹಕ್ಕುಗಳ ʻಪೂರ್ವಭಾವಿ ಉಲ್ಲಂಘನೆʼ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ರಾಜ್ಯ ತೀವ್ರ ಬರದಿಂದ ತತ್ತರಿಸುತ್ತಿದೆ. 236 ರಲ್ಲಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. 196 ತಾಲೂಕುಗಳನ್ನು ತೀವ್ರ ಮತ್ತು 27 ಮಧ್ಯಮ ಪೀಡಿತ ಎಂದು ವರ್ಗೀಕರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಕೀಲ ಡಿ.ಎಲ್. ಚಿದಾನಂದ ಅವರ ಮೂಲಕ ಮನವಿ ಸಲ್ಲಿಕೆಯಾಗಿದ್ದು, ಭಾರತ ಸರ್ಕಾರದಿಂದ 18,171.44 ಕೋಟಿ ರೂ. ನೆರವು ಕೋರಲಾಗಿದೆ.

ಹಿರಿಯ ವಕೀಲ ದೇವದತ್‌ ಕಾಮತ್ ಮತ್ತು ರಾಜ್ಯದ ಅಡ್ವೊಕೇಟ್ ಜನರಲ್ ಕೆ. ಶಶಿ ಕಿರಣ್ ಶೆಟ್ಟಿ ಅವರು, ʻವಿಪತ್ತು ನಿರ್ವಹಣಾ ಕಾಯಿದೆ 2005 ರ ಪ್ರಕಾರ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡಲು ಭಾರತ ಒಕ್ಕೂಟವು ಬಾಧ್ಯತೆ ಹೊಂದಿದೆʼ ಎಂದು ಮನವಿ ಸಲ್ಲಿಸಿದರು.

ʻ ಅಂತರ್-ಸಚಿವಾಲಯದ ಕೇಂದ್ರ ತಂಡ (ಐಎಂಸಿಟಿ)ದ ಮನವಿ ಸ್ವೀಕರಿಸಿದ ಒಂದು ತಿಂಗಳೊಳಗೆ ಎನ್‌ಡಿಆರ್‌ಎಫ್‌ನಿಂದ ರಾಜ್ಯಕ್ಕೆ ನೆರವು ನೀಡಬೇಕಿದೆ. ಆದರೆ, ಆರು ತಿಂಗಳ ಕಾಲ ಕಳೆದರೂ ಕೇಂದ್ರ ನಿರ್ಧಾರ ತೆಗೆದುಕೊಂಡಿಲ್ಲ,ʼ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Read More
Next Story